ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ: ಉಮೇಶ ಶೆಟ್ಟಿ ಮೇಲೆ ಸೋಮಣ್ಣ ಕೋಪ

Published 10 ಜೂನ್ 2024, 16:34 IST
Last Updated 10 ಜೂನ್ 2024, 16:34 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲಕ್ಷ ಮತಗಳ ಅಂತರದಿಂದ ಸೋಲಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆಂದು ಬಿಜೆಪಿ ಮುಖಂಡ ಉಮೇಶ ಶೆಟ್ಟಿ ಮೇಲೆ ಕೇಂದ್ರದ ನೂತನ ಸಚಿವ ವಿ.ಸೋಮಣ್ಣ ರೇಗಾಡಿದರು. 

ತುಮಕೂರು ಕ್ಷೇತ್ರದಲ್ಲಿ ಸೋಮಣ್ಣ ಅವರು 1.72 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಕೇಂದ್ರ ಸಂಪುಟದಲ್ಲಿ ರಾಜ್ಯ ಖಾತೆ ಸಚಿವರಾಗಿದ್ದಾರೆ. ನೂತನ ಸಚಿವರನ್ನು ಬಿಜೆಪಿಯ ಅನೇಕ ಮುಖಂಡರು ಹಾಗೂ ಅಭಿಮಾನಿಗಳು ಕರ್ನಾಟಕ ಭವನದಲ್ಲಿ ಸೋಮವಾರ ಅಭಿನಂದಿಸಿದರು. ಈ ವೇಳೆ ಶಾಸಕರಾದ ಎಲ್‌.ಎ.ರವಿ ಸುಬ್ರಹ್ಮಣ್ಯ, ಸಿ.ಕೆ. ರಾಮಮೂರ್ತಿ, ಉಮೇಶ ಶೆಟ್ಟಿ ಹಾಗೂ ಇತರರು ಅಭಿನಂದಿಸಲು ಮುಂದೆ ಬಂದರು. ಆಗ ಪಕ್ಷದ ಮುಖಂಡರೊಬ್ಬರು ಉಮೇಶ ಶೆಟ್ಟಿ ಅವರ ಹೇಳಿಕೆಯನ್ನು ಉಲ್ಲೇಖಿಸಿದರು.

ಆಗ ಕುಪಿತರಾದ ಸೋಮಣ್ಣ, ‘ಉಮೇಶ ಶೆಟ್ಟಿ ಎಲ್ಲೋ ಇದ್ದರು. ಪಕ್ಷದ ಸ್ಥಳೀಯ ಮುಖಂಡರ ವಿರೋಧದ ನಡುವೆಯೂ ಅವರನ್ನು ಕರೆತಂದು, ಎರಡು ಸಲ ಪಾಲಿಕೆ ಸದಸ್ಯರನ್ನಾಗಿ ಮಾಡಿದೆ. ಅವರನ್ನು ಬೆಳೆಸಿದೆ. ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಕುಗ್ಗಿದ್ದೆ. ಅಂತಹ ಸಂದರ್ಭದಲ್ಲಿ ಅವರು ಇಂತಹ ಹೇಳಿಕೆ ನೀಡಬಾರದಿತ್ತು’ ಎಂದು ಆಕ್ಷೇಪಿಸಿದರು. ಆಗ ರಾಮಮೂರ್ತಿ ಅವರು ಮಧ್ಯ ಪ್ರವೇಶಿಸಿ ಸಮಜಾಯಿಷಿ ನೀಡಲು ಯತ್ನಿಸಿದರು. ಆಗ ಸಚಿವರು, ‘ನೀವು ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವುದು ಬೇಡ’ ಎಂದು ತಾಕೀತು ಮಾಡಿದರು. ಉಮೇಶ ಶೆಟ್ಟಿ ದೂರದಲ್ಲಿ ನೋಡುತ್ತಾ ನಿಂತರು. ಈ ವೇಳೆ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಮಧ್ಯಪ್ರವೇಶಿಸಿ ಸೋಮಣ್ಣ ಅವರನ್ನು ಸಮಾಧಾನಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT