ಬೆಂಗಳೂರು: ‘ಕೆರೆಗಳ ಸಂರಕ್ಷಣೆ ಸಂಬಂಧ ಕರ್ತವ್ಯ ಪಾಲಿಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಎಚ್ಚರಿಕೆ ನೀಡಿದರು.
ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಸಂಬಂಧ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯ ಭಾಗವಾಗಿ ಲೋಕಾಯುಕ್ತರು, ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಕೆ.ಎನ್.ಫಣೀಂದ್ರ ಮತ್ತು ಬಿ.ವೀರಪ್ಪ ಅವರು ನಗರದ ವಿಭೂತಿಕೆರೆ ಮತ್ತು ದೊಡ್ಡನೆಕ್ಕುಂದಿ ಕೆರೆಗಳಿಗೆ ಮಂಗಳವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿ, ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ವಿಭೂತಿಕೆರೆಯಲ್ಲಿ ನೀರು ಸಂಗ್ರಹವಾಗದೇ ಇರುವುದನ್ನು ಗಮನಿಸಿದ ಲೋಕಾಯುಕ್ತರು, ಆ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು. ‘ಮಳೆ ಕೊರತೆಯಿಂದ ನೀರು ಸಂಗ್ರಹವಾಗಿಲ್ಲ’ ಎಂದು ಅಧಿಕಾರಿಗಳು ಉತ್ತರಿಸಿದರು.
ಆದರೆ ಸ್ಥಳೀಯರು, ‘ಕೆರೆಗೆ ನೀರು ಹರಿದುಬರುವ ರಾಜಕಾಲುವೆ ಮತ್ತು ಮಳೆ ನೀರಿನ ಕಾಲುವೆಗಳು ಮುಚ್ಚಿಹೋಗಿವೆ. ನೀರು ಬಂದರೆ ಸುತ್ತಮುತ್ತಲಿನ ಕೊಳವೆಬಾವಿಗಳಿಗೆ ನೀರು ಬರುತ್ತದೆ. ಇದರಿಂದ ಟ್ಯಾಂಕರ್ ನೀರು ವ್ಯವಹಾರ ಮಾಡುವವರಿಗೆ ನಷ್ಟವಾಗುತ್ತದೆ. ಅವರ ಪ್ರಭಾವದಿಂದ ಒತ್ತುವರಿಯನ್ನು ಹಾಗೇ ಬಿಡಲಾಗಿದೆ’ ಎಂದು ಲೋಕಾಯುಕ್ತರಿಗೆ ಮಾಹಿತಿ ನೀಡಿದರು.
ಕಾಲುವೆಗಳು ಮುಚ್ಚಿಹೋಗಿರುವುದು ಮತ್ತು ಕೆರೆಯ ಅಂಗಳದಲ್ಲಿ ಕಟ್ಟಡಗಳು ನಿರ್ಮಾಣವಾಗಿರುವುದನ್ನು ಕಂಡ ಲೋಕಾಯುಕ್ತರು, ‘ಕೆರೆಯ ಜಾಗ ಎಷ್ಟು ಒತ್ತುವರಿಯಾಗಿದೆ ಎಂಬುದನ್ನು ಪತ್ತೆ ಮಾಡಲು ಭೂಮಾಪನ ನಡೆಸಿ, 20 ದಿನಗಳಲ್ಲಿ ವರದಿ ನೀಡಿ’ ಎಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.
‘ಕೆರೆಯ ಅಂಗಳದಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ಒಡೆದುಹಾಕಲು ತಕ್ಷಣವೇ ಕ್ರಮ ತೆಗೆದುಕೊಳ್ಳಿ. ಎಲ್ಲ ಒತ್ತುವರಿಯನ್ನು ಒಂದು ತಿಂಗಳ ಒಳಗೆ ತೆರವು ಮಾಡಿ’ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು. ಕೆರೆ ಪ್ರದೇಶದಲ್ಲಿ ಭದ್ರತೆ ಇಲ್ಲ ಎಂದು ಸಾರ್ವಜನಿಕರು ದೂರಿದಾಗ, ಬೆಳಿಗ್ಗೆ ಮತ್ತು ಸಂಜೆ ಗಸ್ತು ಹಾಕುವಂತೆ ಪೊಲೀಸ್ ಅಧಿಕಾರಿಗಳಿಗೆ ಹೇಳಿದರು.
ದೊಡ್ಡನೆಕ್ಕುಂದಿ ಕೆರೆಯ ಅಭಿವೃದ್ಧಿಗೆ ₹14 ಕೋಟಿ ಬಿಡುಗಡೆಯಾಗಿದ್ದು, ಹಣವನ್ನು ಯಾವ ಕೆಲಸಗಳಿಗೆ ವೆಚ್ಚ ಮಾಡಲಾಗಿದೆ ಎಂಬುದರ ವಿವರ ಸಲ್ಲಿಸುವಂತೆ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಲೋಕಾಯುಕ್ತರು ಸೂಚಿಸಿದರು.
ಕೆರೆಯ ಸುಮಾರು 2 ಎಕರೆ 6 ಗುಂಟೆ ಒತ್ತುವರಿಯಾಗಿದೆಯೆಂದು ಅಧಿಕಾರಿಗಳು ಮಾಹಿತಿ ನೀಡಿದಾಗ, ಒತ್ತುವರಿ ತೆರವಿಗೆ ತಕ್ಷಣವೇ ಕ್ರಮ ತೆಗೆದುಕೊಳ್ಳಿ ಎಂದರು.
ವಿಭೂತಿಕೆರೆ ಅಂಗಳಕ್ಕೆ ವಾರದಲ್ಲಿ ಬೇಲಿ ಹಾಕಲು ನಿರ್ದೇಶನ ದೊಡ್ಡನೆಕ್ಕುಂದಿ ಕೆರೆ ಅಂಗಳದಲ್ಲಿ ಗಿಡ ನೆಟ್ಟು, ಪೋಷಿಸಲು ಸೂಚನೆ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.