ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಂತ್ರಿ ಡೆವಲಪರ್ಸ್’ನಿಂದ ವಂಚನೆ: ತಂದೆ–ಮಗ ಬಂಧನ

ಫ್ಲ್ಯಾಟ್ ಹೆಸರಿನಲ್ಲಿ ನೂರಾರು ಕೋಟಿ ಹಣ ಸಂಗ್ರಹ
Last Updated 10 ಸೆಪ್ಟೆಂಬರ್ 2022, 19:40 IST
ಅಕ್ಷರ ಗಾತ್ರ

ಬೆಂಗಳೂರು: ಫ್ಲ್ಯಾಟ್‌ ಮಾರಾಟದ ಹೆಸರಿನಲ್ಲಿ ಗ್ರಾಹಕರಿಂದ ನೂರಾರು ಕೋಟಿ ರೂಪಾಯಿ ಹಣ ಪಡೆದು ವಂಚಿಸಿದ್ದ ಆರೋಪದಡಿ ‘ಮಂತ್ರಿ ಡೆವಲಪರ್ಸ್’ ಕಂಪನಿ ಸ್ಥಾಪಕ ಸುಶೀಲ್ ಪಾಂಡುರಂಗ ಮಂತ್ರಿ ಹಾಗೂ ಅವರ ಮಗ ಪ್ರತೀಕ್ ಅವರನ್ನು ಸಿಐಡಿ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

ಕಬ್ಬನ್ ಪಾರ್ಕ್ ಠಾಣೆಯಲ್ಲಿ 2019ರಲ್ಲಿ ದಾಖಲಾಗಿದ್ದ ನಾಲ್ಕು ವಂಚನೆ ಪ್ರಕರಣಗಳ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಅಧಿಕಾರಿಗಳು, ಕೆಲವು ಪುರಾವೆಗಳನ್ನು ಆಧರಿಸಿ ತಂದೆ– ಮಗನನ್ನು ಶುಕ್ರವಾರ ಬೆಳಿಗ್ಗೆ ವಶಕ್ಕೆ ಪಡೆದಿದ್ದರು. ರಾತ್ರಿ ಇಬ್ಬರನ್ನೂ ಬಂಧಿಸಿದ ಅಧಿಕಾರಿಗಳು, ನ್ಯಾಯಾಧೀಶರ ಎದುರು ಹಾಜರುಪಡಿಸಿದರು. ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಗ್ರಾಹಕರಿಂದ ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸಿ ವಂಚಿಸಿದ ಆರೋಪದಡಿ ಸುಶೀಲ್‌ ಪಾಂಡುರಂಗ ಮಂತ್ರಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಇತ್ತೀಚೆಗಷ್ಟೇ ಬಂಧಿಸಿತ್ತು. ಈ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿದ್ದ ಸುಶೀಲ್ ಇದೀಗ ಸಿಐಡಿ ಬಲೆಗೆ ಬಿದ್ದಿದ್ದಾರೆ.

‘ಮಂತ್ರಿ ಡೆವಲಪರ್ಸ್ ಕಂಪನಿ ಕಟ್ಟಿರುವ ಸುಶೀಲ್, ಕಂಪನಿಯ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕರು (ಎಂ.ಡಿ) ಆಗಿದ್ದಾರೆ. ಇವರ ಮಗ ಪ್ರತೀಕ್, ಕಂಪನಿ ನಿರ್ದೇಶಕರಾಗಿದ್ದಾರೆ. ಇಬ್ಬರೂ ಸೇರಿ ಒಳಸಂಚು ಮಾಡಿ ಗ್ರಾಹಕರನ್ನು ವಂಚಿಸಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ನ್ಯಾಯಾಂಗ ಬಂಧನದಲ್ಲಿರುವ ಇಬ್ಬರೂ ಆರೋಪಿಗಳನ್ನು ಕಸ್ಟಡಿಗೆ ಪಡೆದುಕೊಳ್ಳಲು ಸೋಮವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು. ಕಸ್ಟಡಿಗೆ ಸಿಕ್ಕ ಬಳಿಕ ಹೆಚ್ಚಿನ ವಿಚಾರಣೆ ನಡೆಸಿ, ಮತ್ತಷ್ಟು ಮಾಹಿತಿ ಕಲೆಹಾಕಲಾಗುವುದು’ ಎಂದು ಮೂಲಗಳು ತಿಳಿಸಿವೆ.

25ಕ್ಕೂ ಹೆಚ್ಚು ಪ್ರಕರಣ: ‘1999ರಲ್ಲಿ ಮಂತ್ರಿ ಡೆವಲಪರ್ಸ್ ಕಂಪನಿ ಸ್ಥಾಪನೆಯಾಗಿದೆ. ಕಂಪನಿ ಹೆಸರಿನಲ್ಲಿ ಫ್ಲ್ಯಾಟ್‌ ನೀಡುವುದಾಗಿ ಹೇಳಿ ಹಣ ಪಡೆದು ವಂಚಿಸಿರುವ ಆರೋಪದಡಿ ಸುಶೀಲ್ ಹಾಗೂ ಇತರರ ವಿರುದ್ಧ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ 2018ರಿಂದಲೇ ಪ್ರಕರಣಗಳು ದಾಖಲಾಗುತ್ತಿದ್ದವು’ ಎಂದು ಸಿಐಡಿ ಮೂಲಗಳು ತಿಳಿಸಿವೆ.

‘ಸುಶೀಲ್ ಹಾಗೂ ಇತರರ ವಿರುದ್ಧ 25ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೆಲವು ಪ್ರಕರಣಗಳ ವಿರುದ್ಧ ಆರೋಪಿಗಳು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಇನ್ನು ಕೆಲವು ಎಫ್‌ಐಆರ್‌ಗಳನ್ನು ನ್ಯಾಯಾಲಯ ರದ್ದುಪಡಿಸಿತ್ತು. ಕಬ್ಬನ್ ಪಾರ್ಕ್‌ನಲ್ಲಿ ದಾಖಲಾಗಿದ್ದ ನಾಲ್ಕು ಪ್ರಕರಣಗಳ ತನಿಖೆ ಮಾತ್ರ ನಡೆಯುತ್ತಿತ್ತು. ಇದೀಗ ಅದೇ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ’ ಎಂದು ಹೇಳಿವೆ.

‘ಸಾವಿರಕ್ಕೂ ಹೆಚ್ಚು ಗ್ರಾಹಕರಿಗೆ ವಂಚನೆ ಆಗಿರುವ ಮಾಹಿತಿ ಇದೆ. ಇದರ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ವಂಚನೆ ಮೊತ್ತವೆಷ್ಟು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ’ ಎಂದು ತಿಳಿಸಿವೆ.

ಬ್ಯಾಂಕ್ ಸಿಬ್ಬಂದಿ ಶಾಮೀಲು?

‘ಆರೋಪಿಗಳ ವಂಚನೆ ಕೃತ್ಯದಲ್ಲಿ ಕೆಲವು ಬ್ಯಾಂಕ್‌ಗಳ ಸಿಬ್ಬಂದಿಯೂ ಶಾಮೀಲಾಗಿರುವ ಮಾಹಿತಿ ಇದ್ದು, ಅವರೆಲ್ಲರನ್ನೂ ವಿಚಾರಣೆ ನಡೆಸಬೇಕಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ವಿವಿಧ ಯೋಜನೆಗಳಡಿ ಅಪಾರ್ಟ್‌ಮೆಂಟ್‌ ಸಮುಚ್ಚಯ ನಿರ್ಮಿಸಿದ್ದ ಆರೋಪಿಗಳು, ಬಗೆ ಬಗೆಯ ಆಮಿಷವೊಡ್ಡಿ ಫ್ಲ್ಯಾಟ್‌ ಮಾರಾಟಕ್ಕೆ ಜಾಹೀರಾತುಗಳನ್ನು ನೀಡಿದ್ದರು. ಆರೋಪಿಗಳ ಮಾತು ನಂಬಿದ್ದ ಹಲವು ಗ್ರಾಹಕರು, ಫ್ಲ್ಯಾಟ್‌ ಖರೀದಿಸಲು ಮುಂದಾಗಿದ್ದರು.’

‘ಕಂಪನಿ ಪರವಾಗಿದ್ದ ಕೆಲ ಬ್ಯಾಂಕ್ ಸಿಬ್ಬಂದಿ, ಗ್ರಾಹಕರ ಹೆಸರಿನಲ್ಲಿ ತ್ವರಿತವಾಗಿ ಸಾಲ ಮಂಜೂರು ಮಾಡಿದ್ದರು. ಸಾಲದ ಮೊತ್ತವನ್ನು ಕಂಪನಿ ಖಾತೆಗೆ ಒಂದೇ ಬಾರಿಗೆ ಜಮೆ ಮಾಡಿ ವಂಚನೆಗೆ ಸಹಕರಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT