ಉಡುಪಿ: ಗಗನಕ್ಕೇರಿರುವ ತರಕಾರಿಗಳ ಬೆಲೆ ಸದ್ಯಕ್ಕೆ ಇಳಿಯುವ ಲಕ್ಷಣಗಳು ಕಾಣುತ್ತಿಲ್ಲ. ಕ್ಯಾರೆಟ್, ಬೀನ್ಸ್, ಟೊಮೆಟೊ ದರ ಶತಕದ ಗಡಿ ದಾಟಿದ್ದು ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಇಳಿಯದ ಟೊಮೆಟೊ ದರ: ಕಳೆದ ವಾರ ಕೆ.ಜಿ.ಗೆ ₹80ರಿಂದ ₹100ಕ್ಕೆ ಮಾರಾಟವಾಗಿದ್ದ ಟೊಮೆಟೊ ದರ ಈ ವಾರವೂ ಬಹುತೇಕ ಸ್ಥಿರತೆ ಕಾಯ್ದುಕೊಂಡಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹85 ರಿಂದ ₹100ರವರೆಗೆ ಮಾರಾಟವಾಯಿತು. ಜಿಲ್ಲೆಯಲ್ಲಿ ಟೊಮೆಟೊ ಬೆಳೆಯುವುದಿಲ್ಲ. ಜಿಲ್ಲೆಗೆ ಹೊರ ಜಿಲ್ಲೆಗಳು ಹಾಗೂ ನೆರೆಯ ರಾಜ್ಯಗಳಿಂದ ಟೊಮೆಟೊ ಬರುತ್ತದೆ.
ಚಿಕ್ಕಮಗಳೂರಿನಿಂದ ಹೆಚ್ಚಿನ ಪ್ರಮಾಣದಲ್ಲಿ ಹಾಗೂ ನೆರೆಯ ಶಿವಮೊಗ್ಗ, ದಾವಣಗೆರೆ, ಕೋಲಾರ ಹಾಗೂ ಹೊರ ರಾಜ್ಯಗಳಿಂದಲೂ ಜಿಲ್ಲೆಗೆ ಹೆಚ್ಚಿನ ಟೊಮೆಟೊ ಪೂರೈಕೆಯಾಗುತ್ತದೆ. ಪ್ರಸ್ತುತ ಹೊರ ರಾಜ್ಯಗಳಿಗೆ ಕರ್ನಾಟಕದ ಟೊಮೆಟೊ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುತ್ತಿರುವುದರಿಂದ ಜಿಲ್ಲೆಯ ಬೇಡಿಕೆಯಷ್ಟು ಟೊಮೆಟೊ ಪೂರೈಕೆ ಆಗುತ್ತಿಲ್ಲ. ಬೇಡಿಕೆ ಹೆಚ್ಚಾಗಿರುವ ಕಾರಣ ಸಹಜವಾಗಿ ಬೆಲೆಯೂ ಏರಿದೆ.
ಸಾಮಾನ್ಯವಾಗಿ ಮಳೆಗಾಲದಲ್ಲಿ ಟೊಮೆಟೊ ದರ ಕಡಿಮೆಯಾಗುತ್ತದೆ. ಆದರೆ, ಈ ಬಾರಿ ಶತಕದ ಗಡಿ ಮುಟ್ಟಿರುವುದು ಗ್ರಾಹಕರಿಗೆ ಹಾಗೂ ವ್ಯಾಪಾರಿಗಳಿಗೆ ಹೊರೆಯಾಗಿದೆ. ದರ ಹೆಚ್ಚಳವಾಗಿರುವ ಕಾರಣಕ್ಕೆ ಗ್ರಾಹಕರು ತೀರಾ ಕಡಿಮೆ ಪ್ರಮಾಣದಲ್ಲಿ ಟೊಮೆಟೊ ಖರೀದಿಸುತ್ತಿದ್ದಾರೆ.
ದುಬಾರಿ ದರ ಇದ್ದರೂ ಗುಣಮಟ್ಟದ ಟೊಮೆಟೊ ಪೂರೈಕೆಯಾಗುತ್ತಿಲ್ಲ. ಸಗಟುರೂಪದಲ್ಲಿ ಖರೀದಿ ಮಾಡಿ ತಂದು ಚಿಲ್ಲರೆಯಾಗಿ ಮಾರಾಟ ಮಾಡುವಾಗ ಶೇ 30ರಷ್ಟು ಟೊಮೆಟೊ ಖರೀದಿಯಾಗದೆ ಉಳಿಯುತ್ತಿದ್ದು ಲಾಭದ ಪ್ರಮಾಣ ಕಡಿಮೆಯಾಗಿದೆ ಎನ್ನುತ್ತಾರೆ ವ್ಯಾಪಾರಿ ಸುರೇಶ್.
ಕ್ಯಾರೆಟ್ ದರ ಕೂಡ ಶತಕ ದಾಟಿದ್ದು ಮೂರು ವಾರಗಳಿಂದ ಬಹುತೇಕ ಸ್ಥಿರವಾಗಿದೆ. ಬೀನ್ಸ್ ದರವೂ ಕೆ.ಜಿ.ಗೆ ₹110 ಮಟ್ಟಿದ್ದು ಮಧ್ಯಮ ವರ್ಗದವರಿಗೆ ಎರಡೂ ತರಕಾರಿಗಳು ತುಟ್ಟಿಯಾಗಿವೆ ಎನ್ನುತ್ತಾರೆ ಗ್ರಾಹಕರಾದ ಜಯಲಕ್ಷ್ಮೀ.
ತಿಂಗಳ ಹಿಂದೆ ₹300 ತಂದರೆ ಬ್ಯಾಗ್ ತುಂಬ ತರಕಾರಿ ಮನೆಗೆ ಕೊಂಡೊಯ್ಯುತ್ತಿದ್ದೆ. ಈಗ ಅರ್ಧ ಬ್ಯಾಗ್ ಕೂಡ ತುಂಬುತ್ತಿಲ್ಲ. ಕ್ಯಾರೆಟ್, ಬೀನ್ಸ್, ಟೊಮೆಟೊ ಅಗತ್ಯಕ್ಕಿಂತ ಕಡಿಮೆ ಖರೀದಿಸುತ್ತಿದ್ದೇವೆ ಎನ್ನುತ್ತಾರೆ ಅವರು.
ಈರುಳ್ಳಿ ದರ ಅಲ್ಪ ಕುಸಿದಿದ್ದು ಕೆ.ಜಿ.ಗೆ ₹25ರಿಂದ ₹30, ಬೆಂಡೆಕಾಯಿ ₹40, ತೊಂಡೆಕಾಯಿ ₹50, ಈರೇಕಾಯಿ ₹50, ಸೋರೆಕಾಯಿ ₹40, ಬೀಟ್‌ರೂಟ್ ₹55, ಕ್ಯಾಪ್ಸಿಕಂ ₹70, ಆಲೂಗಡ್ಡೆ ₹35, ಬದನೆಕಾಯಿ ₹45, ಕುಂಬಳಕಾಯಿ ₹35, ಸಾಂಬಾರ್ ಸೌತೆ ₹20, ಹೂಕೋಸು ₹35, ಎಲೆಕೋಸು ₹15 ದರ ಇತ್ತು.
ಹಣ್ಣುಗಳ ದರ ಹೆಚ್ಚಳ:
ಬಹುತೇಕ ಹಣ್ಣುಗಳ ದರ ಹೆಚ್ಚಾಗಿದ್ದು ಕೆ.ಜಿ. ಸೇಬಿಗೆ ₹250ರಿಂದ ₹300, ದಾಳಿಂಬೆ ₹240, ಸಪೋಟ ₹130, ಬಾಳೆಹಣ್ಣು ₹85, ಕಿತ್ತಳೆಹಣ್ಣು ₹120, ಅನಾನಸು ₹40, ಪಪ್ಪಾಯ ₹40, ಮೋಸಂಬಿ ₹90, ಮಾವು ನೀಲಂ ₹70, ಮಲ್ಲಿಕಾ ₹90, ಬಾಗನ್‌ಪಲ್ಲಿ ₹70 ದರ ಇದೆ.
ದಿನಸಿ ಪದಾರ್ಥಗಳ ದರ ಬಹುತೇಕ ಹೆಚ್ಚಾಗಿದ್ದು ಬೇಳೆಕಾಳುಗಳ ದರವಂತೂ ಶೇ 25ರಿಂದ 30ರಷ್ಟು ಹೆಚ್ಚಾಇದೆ. ತಿಂಗಳ ಹಿಂದೆ ₹120ರಿಂದ ₹130ಕ್ಕೆ ಸಿಗುತ್ತಿದ್ದ ತೊಗರಿಬೇಳೆ ಪ್ರಸ್ತುತ 160ಕ್ಕೆ ಏರಿಕೆಯಾಗಿದೆ. ಉದ್ದಿನಬೇಳೆಯೂ ₹100ರಿಂದ ₹130ಕ್ಕೆ ಅಲಸಂದೆ ₹100ರಿಂದ ₹120ಕ್ಕೆ ಹುರುಳಿಕಾಳು ₹70ರಿಂದ ₹100ಕ್ಕೆ ಜಿಗಿದಿದೆ. ಜೀರಿಗೆ ದರವಂತೂ ದುಪ್ಪಟ್ಟಾಗಿದ್ದು ₹300 ಇದ್ದ ಬೆಲೆ ಸದ್ಯ ₹550 ರಿಂದ 600ರವರೆಗೂ ಮಾರಾಟವಾಗುತ್ತಿದೆ. ಒಂದುಕಡೆ ತರಕಾರಿ ಬೆಲೆ ಮತ್ತೊಂದು ಕಡೆ ಬೇಳೆಕಾಳುಗಳ ದರ ಹೆಚ್ಚಳದಿಂದ ಗ್ರಾಹಕರ ಜೇಬಿಗೆ ಭಾರವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.