ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೆಲ್‌ನಲ್ಲಿ ಮೌನಕ್ಕೆ ಜಾರಿದ ಪ್ರಜ್ವಲ್‌! 2ನೇ ಬಾರಿಗೆ ವೈದ್ಯಕೀಯ ಪರೀಕ್ಷೆ

ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ
Published 5 ಜೂನ್ 2024, 16:05 IST
Last Updated 5 ಜೂನ್ 2024, 16:05 IST
ಅಕ್ಷರ ಗಾತ್ರ

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬುಧವಾರ ಬೌರಿಂಗ್‌ ಆಸ್ಪತ್ರೆಯಲ್ಲಿ 2ನೇ ಬಾರಿಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು.

‘ಆಸ್ಪತ್ರೆಯ ತಜ್ಞ ವೈದ್ಯರ ನೇತೃತ್ವದಲ್ಲಿ ಮೂರು ಹಂತದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ’ ಎಂದು ಮೂಲಗಳು ಹೇಳಿವೆ. ಜೂನ್‌ 1ರಂದು ನ್ಯಾಯಾಲಯಕ್ಕೆ ಹಾಜರು ಪಡಿಸುವುದಕ್ಕೂ ಮೊದಲು ಸಹ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು.

‘ಹಾಸನ ಜಿಲ್ಲೆಯ ಹೊಳೆನರಸೀಪುರ ಹಾಗೂ ಬೆಂಗಳೂರಿನ ಬಸವನಗುಡಿಯಲ್ಲಿರುವ ಪ್ರಜ್ವಲ್‌ ಅವರ ಮನೆಯಲ್ಲಿ ಗುರುವಾರ ಬೆಳಿಗ್ಗೆ ಮಹಜರ್‌ ನಡೆಸಲಾಗುವುದು. ಹಾಸನದಲ್ಲಿ ಪ್ರಜ್ವಲ್‌ ನೆಲೆಸಿದ್ದ ಸರ್ಕಾರಿ ವಸತಿಗೃಹದಲ್ಲಿ ಈಗಾಗಲೇ ಅಗತ್ಯ ದಾಖಲೆಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಮೂಲಗಳು ಹೇಳಿವೆ.

ಅತ್ಯಾಚಾರ ಪ್ರಕರಣ ದಾಖಲಾಗುತ್ತಿದ್ದಂತೆಯೇ ಪ್ರಜ್ವಲ್‌, ಜರ್ಮನಿಗೆ ತೆರಳಿ ತಲೆಮರೆಸಿಕೊಂಡಿದ್ದರು. ನ್ಯಾಯಾಲಯ ಬಂಧನ ವಾರಂಟ್ ಜಾರಿ ಮಾಡಿದ ಬಳಿಕ ನಗರಕ್ಕೆ ವಾಪಸ್‌ ಆಗಿದ್ದರು. ಮೇ 31ರಂದು ಮಧ್ಯರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅವರನ್ನು ಎಸ್‌ಐಟಿ ಬಂಧಿಸಿತ್ತು.

‘ಜೂನ್‌ 1ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ, 6 ದಿನ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಗುರುವಾರ ಸಂಜೆಗೆ ಎಸ್‌ಐಟಿ ಕಸ್ಟಡಿ ಅಂತ್ಯವಾಗಲಿದೆ’ ಎಂದು ಮೂಲಗಳು ಹೇಳಿವೆ.

‘ಈ ಪ್ರಕರಣದಲ್ಲಿ ಪುರುಷತ್ವ ಸಾಮರ್ಥ್ಯದ ಪರೀಕ್ಷೆ ನಡೆಸುವ ಅವಶ್ಯಕತೆಯಿದ್ದು, ಆರೋಪಿಯನ್ನು ಮತ್ತೆ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು’ ಎಂದು ಮೂಲಗಳು ಹೇಳಿವೆ.

ಸೆಲ್‌ನಲ್ಲಿ ಮೌನಕ್ಕೆ ಜಾರಿದ ಪ್ರಜ್ವಲ್‌

‘ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಮಾಹಿತಿ ತಿಳಿದುಕೊಂಡು ಪ್ರಜ್ವಲ್‌ ಸೆಲ್‌ನಲ್ಲಿ ಮೌನಕ್ಕೆ ಜಾರಿದ್ದಾರೆ. ಬುಧವಾರ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಎಸ್‌ಐಟಿ ಕಚೇರಿಯಲ್ಲಿ ಮತ್ತೆ ವಿಚಾರಣೆ ನಡೆಸಲಾಯಿತು. ಮೊದಲ ಎರಡು ದಿನ ತನಿಖೆಗೆ ಸಹಕಾರ ನೀಡಿರಲಿಲ್ಲ. ಯಾವುದೇ ಪ್ರಶ್ನೆ ಕೇಳಿದರೂ ಗೊತ್ತಿಲ್ಲ. ವಕೀಲರನ್ನು ಕೇಳಿ ಹೇಳುತ್ತೇನೆ. ನ್ಯಾಯಾಲಯಕ್ಕೆ ತಿಳಿಸುತ್ತೇನೆ ಎನ್ನುತ್ತಿದ್ದರು. ಈಗ ತನಿಖೆಗೆ ಸಹಕಾರ ನೀಡುತ್ತಿದ್ದಾರೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT