ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಡಿ: ತಾಂಡಾ ಶಾಲೆಯ ಮಕ್ಕಳಿಗಿಲ್ಲ ಬಿಸಿಯೂಟ

ಹಾಲಿನ ರುಚಿ ನೋಡದ ಮಕ್ಕಳು, ಬಿಸಿಯೂಟ ತಯಾರಿಕೆಗೆ ಇಲ್ಲದ ಪ್ರತ್ಯೇಕ ಕೋಣೆ
Published 3 ಜುಲೈ 2023, 23:30 IST
Last Updated 3 ಜುಲೈ 2023, 23:30 IST
ಅಕ್ಷರ ಗಾತ್ರ

ವಾಡಿ (ಕಲಬುರಗಿ ಜಿಲ್ಲೆ): ಚಿತ್ತಾಪುರ ತಾಲ್ಲೂಕಿನ ನಾಲವಾರ ಸಮೀಪದ ಸಕ್ಕುನಾಯಕ ತಾಂಡಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸರ್ಕಾರದ ಬಿಸಿಯೂಟ ಯೋಜನೆಯಿಂದ ವಂಚಿತರಾಗಿದ್ದಾರೆ.

ಶಾಲೆಗಳು ಆರಂಭಗೊಂಡು 35 ದಿನಗಳಾದರೂ ಇಲ್ಲಿನ 20ಕ್ಕೂ ಅಧಿಕ ವಿದ್ಯಾರ್ಥಿಗಳು ಬಿಸಿಯೂಟ ಹಾಗೂ ಹಾಲಿನಿಂದ ವಂಚಿತರಾಗಿದ್ದಾರೆ. ಅಡುಗೆ ಕೋಣೆ ಕೊರತೆ ನೆಪದಿಂದ ಬಿಸಿಯೂಟ ತಯಾರಿಸುವುದನ್ನು ಕೈಬಿಡಲಾಗಿದೆ. ಮಧ್ಯಾಹ್ನದ ಊಟಕ್ಕೆ ಮಕ್ಕಳು ಮನೆಗಳನ್ನೇ ಆಶ್ರಯಿಸುವಂತಾಗಿದೆ.

ಕಡಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಕ್ಕುನಾಯಕ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ ಇದೆ. ಸಕ್ಕುನಾಯಕ ಹಾಗೂ ರೇವುನಾಯಕ ತಾಂಡಾದ 20ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ.

ಬಹುತೇಕ ವಲಸೆ ಕುಟುಂಬಗಳಿಗೆ ಸೇರಿದ ಈ ಬಡ ವಿದ್ಯಾರ್ಥಿಗಳಿಗೆ ಬಿಸಿಯೂಟ ಹಾಗೂ ಹಾಲು ದೊರಕುತ್ತಿಲ್ಲ.  ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸೋನಿಬಾಯಿ ಪವಾರ ಅವರೂ ಇದೇ ತಾಂಡಾದವರಾಗಿದ್ದಾರೆ. ಶಾಲೆಗೆ ಕೋಣೆ, ವಿದ್ಯುತ್, ಕುಡಿಯುವ ನೀರಿನ ಕೊರತೆಗಳಿವೆ.

ಕೋಣೆ ಕೊರತೆ, ಬಿಸಿಯೂಟ ಸ್ಥಗಿತ: ಶಾಲೆಯಲ್ಲಿ ಒಂದೇ ಕೋಣೆಯಿದ್ದು, ಪ್ರತ್ಯೇಕವಾಗಿ ಬಿಸಿಯೂಟದ ಕೋಣೆ ಇಲ್ಲದಿರುವುದರಿಂದ ಒಂದೇ ಕೊಠಡಿಯಲ್ಲಿ 5 ತರಗತಿಗಳು ಹಾಗೂ ಬಿಸಿಯೂಟವನ್ನು ತಯಾರಿಸಲಾಗುತ್ತಿತ್ತು. ಮುಖ್ಯಶಿಕ್ಷಕರು ಕೋಣೆಗಳ ಕೊರತೆ ಹಾಗೂ ಕುಡಿಯುವ ನೀರಿನ ಸಮಸ್ಯೆಯ ಕಾರಣ ಬಿಸಿಯೂಟ ಸ್ಥಗಿತಗೊಳಿಸಿದ್ದಾರೆ. ಇಲ್ಲಿನ ವಲಸೆ ಕಾರ್ಮಿಕರ ಮಕ್ಕಳಿಗೆ ಅಜ್ಜಿಯಂದಿರೇ ಆಸರೆಯಾಗಿದ್ದಾರೆ. 

ಶಾಲೆಯ ಕೊಠಡಿಯ ಪಕ್ಕವೇ ಎರಡು ಕೋಣೆಗಳ ನಿರ್ಮಾಣ ಕೆಲಸ ಅರ್ಧಕ್ಕೆ ನಿಂತಿದೆ. ಶಾಲೆಗಾಗಿ ಕೊರೆಸಿರುವ ಕೊಳವೆಬಾವಿ ಕೆಟ್ಟು ನಿಂತಿದ್ದು, ಬಿಸಿಯೂಟ ತಯಾರಿಕೆಗೆ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಕೊಳವೆಬಾವಿ ದುರಸ್ತಿಗೆ ಸ್ಥಳೀಯ ಕಡಬೂರು ಗ್ರಾಮ ಪಂಚಾಯಿತಿ ಆಡಳಿತ ನಿರ್ಲಕ್ಷ್ಯ ವಹಿಸಿರುವುದರಿಂದ ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬಿಸಿಯೂಟ ಹಾಗೂ ಹಾಲನ್ನು ಪೂರೈಕೆ ಮಾಡಬೇಕು ಎಂದು ಸ್ಥಳೀಯ ಮುಖಂಡ ಸುಮೀತ ರಾಠೋಡ ಒತ್ತಾಯಿಸಿದ್ದಾರೆ.

ಎಸ್‌ಡಿಎಂಸಿ ಸದಸ್ಯರ ಸಭೆಯ ನಿರ್ಣಯದಂತೆ ಬಿಸಿಯೂಟ ನಿಲ್ಲಿಸಲಾಗಿದೆ. ಬಿಸಿಯೂಟ ಬದಲು ಪಡಿತರ ಧಾನ್ಯ ನೀಡುವಂತೆ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ.
–ಗುರುನಾಥ ಚಿತ್ತಗಿ, ಮುಖ್ಯಶಿಕ್ಷಕ
ಬಿಸಿಯೂಟ ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವಂತಿಲ್ಲ. ಶಾಲೆಗೆ ಭೇಟಿ ನೀಡಿ ಬಿಸಿಯೂಟ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು.
–ಪ್ರಕಾಶ ನಾಯ್ಕೋಡಿ, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ, ಚಿತ್ತಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT