ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ತಿರಸ್ಕರಿಸಿದ್ದ ಬಸವೇಶ್ವರ ಜಲವಿದ್ಯುತ್‌ ಯೋಜನೆಗೆ ಸರ್ಕಾರ ಅನುಮತಿ

ನಿಯಮ ಗಾಳಿಗೆ ತೂರಿ
Last Updated 6 ಫೆಬ್ರುವರಿ 2019, 10:01 IST
ಅಕ್ಷರ ಗಾತ್ರ

ಬೆಂಗಳೂರು: ಶಿವನಸಮುದ್ರದಲ್ಲಿ ಕಿರು ಜಲವಿದ್ಯುತ್‌ ಯೋಜನೆಯೊಂದನ್ನು ವಿಸ್ತರಿಸುವ ಪ್ರಸ್ತಾಪಕ್ಕೆ ಸ್ವತಃ ಮುಖ್ಯಮಂತ್ರಿ ಅಧ್ಯಕ್ಷತೆಯ ರಾಜ್ಯ ವನ್ಯಜೀವಿ ಮಂಡಳಿ ಸಭೆ ಅನುಮತಿ ನಿರಾಕರಿಸಿದ್ದರೂ, ಅರಣ್ಯ ಇಲಾಖೆ ನಿಯಮಗಳನ್ನು ಗಾಳಿಗೆ ತೂರಿ ಮತ್ತೆ ಅನುಮತಿ ನೀಡಿದೆ.

ಕಾವೇರಿ ನದಿಯಲ್ಲಿ ಅನುಷ್ಠಾನಗೊಳ್ಳಲಿರುವ ಈ ಯೋಜನೆಯಿಂದ ನದಿಯ ಜಲಾನಯನ ಪ್ರದೇಶದ ಕಾಡುಗಳಿಗೆ ಹಾನಿ ಆಗಲಿದೆ. ಇಲ್ಲಿನ ವನ್ಯಜೀವಿಗಳ ಆವಾಸ ಸ್ಥಾನಕ್ಕೂ ಧಕ್ಕೆ ಉಂಟಾಗಲಿದೆ. ಹಾಗಾಗಿ ಅನುಮತಿ ಹಿಂಪಡೆಯಬೇಕು ಎಂದು ವನ್ಯಜೀವಿ ಕಾರ್ಯಕರ್ತರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರ ಗ್ರಾಮದಲ್ಲಿ ಬಸವೇಶ್ವರ ಕಿರು ಜಲವಿದ್ಯುತ್‌ ಯೋಜನೆಗೆ (ಬಿಎಸ್‌ಎಚ್‌ಪಿ) ರಂಗನಾಥ ಸ್ವಾಮಿ ಕಿರು ಜಲವಿದ್ಯುತ್‌ ಯೋಜನೆಗಾಗಿ ನೀಡಿರುವ 0.497 ಹೆಕ್ಟೇರ್‌ ಬಳಸಿಕೊಳ್ಳುವ ಬಗ್ಗೆ ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಕೆಯಾಗಿತ್ತು.

ಸ್ಥಳ ಪರಿಶೀಲನೆ ನಡೆಸಿದ್ದ ಆಗಿನ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ಸಮಿತಿ, ‘ಇಲ್ಲಿನ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರು ಜಲವಿದ್ಯುತ್‌ ಯೋಜನೆಗಳಿಂದಾಗಿ ವನ್ಯಜೀವಿ ಆವಾಸ ಸ್ಥಾನಗಳು ಈಗಾಗಲೇ ಛಿದ್ರವಾಗಿವೆ. ಹೊಸ ಯೋಜನೆಗೆ ಅನುಮತಿ ನೀಡಿದರೆ ಇಲ್ಲಿ ಮಾನವ– ವನ್ಯಜೀವಿ ಸಂಘರ್ಷ ಹೆಚ್ಚುತ್ತದೆ.

ಆನೆ ಕಾರಿಡಾರ್‌ಗಳ ಬಳಿ ಯಾವುದೇ ಹೊಸ ಯೋಜನೆಗೆ ಅನುಮತಿ ನೀಡುವುದು ಹೈಕೋರ್ಟ್‌ ನೇಮಿಸಿದ್ದ ಆನೆ ಕಾರ್ಯಪಡೆಯ ಶಿಫಾರಸುಗಳಿಗೂ ವಿರುದ್ಧವಾದುದು’ ಎಂದು ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2015ರ ಜುಲೈ 28ರಂದು ವರದಿಯಲ್ಲಿ ಸಲ್ಲಿಸಿತ್ತು.

2015ರ ಸೆ.11ರಂದು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದ್ದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲೂ ಈ ಪ್ರಸ್ತಾವಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಈ ಸಭೆಯಲ್ಲಿಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು, ‘ ಜಲವಿದ್ಯುತ್‌ ಯೋಜನೆ ವಿಸ್ತರಣೆಗೆ ಗುರುತಿಸಿರುವ ಪ್ರದೇಶವೂ ಪ್ರಸ್ತಾವಿತ ಪರಿಸರ ಸೂಕ್ಷ್ಮ ವಲಯದಲ್ಲಿದೆ. ಈ ಪ್ರದೇಶದಲ್ಲಿ ಈಗಾಗಲೇ ಎಂಟು ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಗುತ್ತಿಗೆ ಅವಧಿ ಮುಗಿದ ಬಳಿಕ ಈ ಯೋಜನೆಗಳನ್ನೂ ಸ್ಥಗಿತಗೊಳಿಸಬೇಕು’ ಎಂದು ಸಲಹೆ ನೀಡಿದ್ದರು.

***

ತರಕರಡಿ ಆವಾಸ ಸ್ಥಾನ

ವನ್ಯಜೀವಿಗಳ ಕಿರು ಜಲ ವಿದ್ಯುತ್ ಯೋಜನೆಯನ್ನು ವಿಸ್ತರಿಸಲು ಉದ್ದೇಶಿಸಿರುವ ಪ್ರದೇಶವು ಆನೆ, ಚಿರತೆ, ಕಾಡುಪಾಪ, ಚಿಪ್ಪುಹಂದಿ, ಕರಡಿ, ತರಕರಡಿ, ಕಿರುಬ ಬೆಕ್ಕು, ಹುಲಿ ಮುಂತಾದ ಸಸ್ತನಿಗಳ ಆವಾಸ ಸ್ಥಾನ.

‘ತರಕರಡಿಯಂತಹ ಅ‍ಪರೂಪದ ಸಸ್ತನಿಗಳು ರಾಜ್ಯದಲ್ಲಿ ಎರಡು ಮೂರು ತಾಣಗಳಲ್ಲಿ ಮಾತ್ರ ಕಂಡುಬರುತ್ತವೆ. ಅದರಲ್ಲೂ ಈ ಪ್ರಭೇದವು ರಾಜ್ಯದಲ್ಲಿ ಪತ್ತೆಯಾಗಿದ್ದು ಕೂಡಾ ಶಿವನಸಮುದ್ರದ ಬಳಿಯೇ’ ಎಂದು ವನ್ಯಜೀವಿ ಕಾರ್ಯಕರ್ತರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT