ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಡೂರಿನ ದೇಗುಲ ಬಳಿ ಗಣಿಗಾರಿಕೆ: ವಿವರಣೆ ಕೇಳಿದ ಎನ್‌ಜಿಟಿ

Published : 29 ಆಗಸ್ಟ್ 2024, 15:54 IST
Last Updated : 29 ಆಗಸ್ಟ್ 2024, 15:54 IST
ಫಾಲೋ ಮಾಡಿ
Comments

ನವದೆಹಲಿ: ಬಳ್ಳಾರಿ ಜಿಲ್ಲೆಯ ಸಂಡೂರಿನ 1200 ವರ್ಷಗಳಷ್ಟು ಪುರಾತನವಾದ ಕುಮಾರಸ್ವಾಮಿ ದೇವಸ್ಥಾನದ ಸಮೀಪದಲ್ಲಿ ಗಣಿಗಾರಿಕೆ ನಡೆಸಲು ಕರ್ನಾಟಕ ಸರ್ಕಾರ ತಾತ್ವಿಕ ಅನುಮೋದನೆ ಕೋರಿರುವ ಪ್ರಕರಣದ ಸಂಬಂಧ ಕೇಂದ್ರ ಪರಿಸರ ಸಚಿವಾಲಯ ಹಾಗೂ ಕರ್ನಾಟಕ ಗಣಿ ಇಲಾಖೆಯಿಂದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ವಿವರಣೆ ಕೇಳಿದೆ. 

ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ನ್ಯಾಯಮೂರ್ತಿ ಪ್ರಕಾಶ್‌ ಶ್ರೀವಾಸ್ತವ ನೇತೃತ್ವದ ಪ್ರಧಾನ ಪೀಠವು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಭಾರತೀಯ ಪುರಾತತ್ವ ಸರ್ವೆಕ್ಷಣಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾಧಿಕಾರಿಗೆ ನೋಟಿಸ್‌ ನೀಡಿದೆ. 

ಕುಮಾರಸ್ವಾಮಿ ಬೆಟ್ಟದ ಬಳಿಯಲ್ಲಿ 70 ಎಕರೆಯಲ್ಲಿ ಗಣಿಗಾರಿಕೆ ನಡೆಸಲು ತಾತ್ವಿಕ ಅನುಮೋದನೆ ನೀಡುವಂತೆ ಕೇಂದ್ರ ಪರಿಸರ ಸಚಿವಾಲಯಕ್ಕೆ ಕರ್ನಾಟಕ ಅರಣ್ಯ ಇಲಾಖೆ ಮೇ 17ರಂದು ಪ್ರಸ್ತಾವ ಸಲ್ಲಿಸಿತ್ತು.

‘ಈ ದೇವಸ್ಥಾನವು 7 ಅಥವಾ 8ನೇ ಶತಮಾನದ್ದು. ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಅಡಿಯಲ್ಲಿ ಸಂರಕ್ಷಿತ ಸ್ಮಾರಕವಾಗಿದೆ. ಸಂರಕ್ಷಿತ ತಾಣಗಳ 2 ಕಿ.ಮೀ. ಸುತ್ತಮುತ್ತ ಗಣಿಗಾರಿಕೆ ನಡೆಸುವಂತಿಲ್ಲ ಎಂದು 1978ರಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಗಣಿಗಾರಿಕೆಯಿಂದ ದೇವಸ್ಥಾನಕ್ಕೆ ಹಾನಿಯಾಗಲಿದೆ. ಈ ಯೋಜನೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಯೋಜನೆ ವಿರೋಧಿಸಿ ಅವರು 2023ರಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಇದರ ನಡುವೆಯೇ, ರಾಜ್ಯ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯದ ನಡೆ ಪರಿಸರ ಕಾಯ್ದೆಯ ಉಲ್ಲಂಘನೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT