ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಷ್ಟಾಚಾರ ಉಲ್ಲಂಘಿಸಿದ ಅಧಿಕಾರಿ ವಿರುದ್ಧ ಕ್ರಮ: ಸಚಿವ ಮಾಧುಸ್ವಾಮಿ

ಶಾಸಕ ಸಾ.ರಾ.ಮಹೇಶ್‌ ಹಕ್ಕುಚ್ಯುತಿ ಪ್ರಸ್ತಾವಕ್ಕೆ ಉತ್ತರ
Last Updated 21 ಸೆಪ್ಟೆಂಬರ್ 2021, 22:46 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ವಚ್ಛ ಮೈಸೂರು ಯೋಜನೆಯ ಬ್ಯಾಗ್‌ ಖರೀದಿ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು. ಶಿಷ್ಟಾಚಾರ ಉಲ್ಲಂಘಿಸಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ವಿಧಾನಸಭೆಯಲ್ಲಿ ಮಂಗಳವಾರ ಜೆಡಿಎಸ್‌ನ ಸಾ.ರಾ.ಮಹೇಶ್‌ ಅವರ ಹಕ್ಕುಚ್ಯುತಿ ಪ್ರಸ್ತಾವಕ್ಕೆ ಉತ್ತರಿಸಿದ ಅವರು, ‘ಈ ಪ್ರಕರಣದಲ್ಲಿ ಹಕ್ಕುಚ್ಯುತಿ ಆಗಿಲ್ಲ. ಶಿಷ್ಟಾಚಾರ ಉಲ್ಲಂಘನೆ ಆಗಿದೆ ಅಷ್ಟೇ’ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ ಕುಮಾರ್‌, ‘ಮಹೇಶ್‌ ಅವರ ಪ್ರಾಸ್ತಾವಿಕ ಮಂಡನೆ ಹಕ್ಕುಚ್ಯುತಿ ವ್ಯಾಪ್ತಿಗೆ ಬರುವುದಿಲ್ಲ’ ಎಂದರು.

ಜೆಡಿಎಸ್‌ನ ಎ.ಟಿ.ರಾಮಸ್ವಾಮಿ, ‘ನನ್ನನ್ನು ವರ್ಗಾವಣೆ ಮಾಡಿಸಿದ್ದು ಸಾ.ರಾ.ಮಹೇಶ್ ಎಂದು ಹಿಂದಿನ ಜಿಲ್ಲಾಧಿಕಾರಿ ಆರೋಪ ಮಾಡಿದ್ದರು. ಇದು ಹಕ್ಕುಚ್ಯುತಿಯ ಉಲ್ಲಂಘನೆ. ಜತೆಗೆ, 15ನೇ ಹಣಕಾಸು ಆಯೋಗದ ಅನುದಾನವನ್ನು ಮಾರ್ಪಾಡು ಮಾಡಿದ್ದಾರೆ. ಇದಕ್ಕೆ ನಿಯಮಾವಳಿಯಲ್ಲಿ ಅವಕಾಶ ಇಲ್ಲ’ ಎಂದರು.

ಸಾ.ರಾ.ಮಹೇಶ್‌, ‘ಸ್ವಚ್ಛ ಮೈಸೂರು ಯೋಜನೆಯಡಿ 14.5 ಲಕ್ಷ ಬ್ಯಾಗ್‌ ಖರೀದಿ ಮಾಡಲಾಗಿದೆ. ₹4 ಮೊತ್ತದ ಬ್ಯಾಗ್‌ಗೆ ₹69 ಪಾವತಿ ಮಾಡಲಾಗಿದೆ. ಪುರಸಭೆಯ ಯೋಜನೆಗೆ ತಡೆಹಿಡಿದು ಹಿಂದಿನ ಜಿಲ್ಲಾಧಿಕಾರಿಯವರೇ ಈ ಖರೀದಿ ಪ್ರಕ್ರಿಯೆ ನಡೆಸಿದ್ದಾರೆ. ಈ ಮೂಲಕ ನನ್ನ ಹಕ್ಕುಚ್ಯುತಿ ಮಾಡಿದ್ದಾರೆ’ ಎಂದು ಆರೋಪಿಸಿದರು.

ಗೂಳಿಹಟ್ಟಿ ಹಕ್ಕುಚ್ಯುತಿ: ‘ಆಪರೇಷನ್‌ ಹಸ್ತ ಹೆಸರಿನಲ್ಲಿ ಸುದ್ದಿ ಪ್ರಕಟಿಸಿರುವ ಕನ್ನಡದ ಪತ್ರಿಕೆಯೊಂದು, ನಾನು ಕಾಂಗ್ರೆಸ್‌ ಸೇರುತ್ತೇನೆ ಎಂದು ವರದಿ ಮಾಡಿದೆ. ನಾನು ಮಾರಾಟಕ್ಕೆ ಇದ್ದೇನೆ ಎಂದು ಬಿಂಬಿಸುವ ಮೂಲಕ ನನ್ನ ಹಕ್ಕುಚ್ಯುತಿ ಮಾಡಿದೆ’ ಎಂದು ಬಿಜೆಪಿಯ ಗೂಳಿಹಟ್ಟಿ ಶೇಖರ್‌ ಹಕ್ಕುಚ್ಯುತಿ ಪ್ರಸ್ತಾವ ಮಂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಸುದ್ದಿಯ ಕೊನೆಗೆ ಪ್ರಶ್ನಾರ್ಥಕ ಚಿಹ್ನೆ ಬಳಸುವ ಮೂಲಕ ಹಾಗೂ ಬಲ್ಲ ಮೂಲಗಳಿಂದ ತಿಳಿದುಬಂದಿದೆ ಎಂದು ಹೇಳಿ ವರದಿ ಪ್ರಕಟಿಸುವ ಪರಿಪಾಟ ಹೆಚ್ಚುತ್ತಿದೆ. ಇದರಿಂದ ಶಾಸಕರ ಘನತೆಗೆ ಧಕ್ಕೆ ಆಗುತ್ತದೆ. ಖಚಿತ ಮೂಲಗಳಿದ್ದರೆ ಹೆಸರು ಹಾಕಿ ಮಾಧ್ಯಮಗಳು ವರದಿ ಪ್ರಕಟಿಸಿದರೆ ನಮ್ಮ ಅಭ್ಯಂತರ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT