ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ: ಆತಂಕ ಬೇಡ ಎಂದ ಎಸ್. ಸುರೇಶ್ ಕುಮಾರ್

Last Updated 22 ಫೆಬ್ರುವರಿ 2020, 6:31 IST
ಅಕ್ಷರ ಗಾತ್ರ

ಬೆಂಗಳೂರು: ಸೋರಿಕೆಯಾಗುತ್ತಿರುವ ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆಗಳಿಂದಾಗಿ ಮಾರ್ಚ್‌ 27ರಿಂದ ಆರಂಭವಾಗುವ ಮುಖ್ಯ ಪರೀಕ್ಷೆಯಲ್ಲೂ ಇದೇ ಪುನರಾವರ್ತನೆಯಾಗಬಹುದೇ ಎಂಬ ಆತಂಕ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಎಸ್. ಸುರೇಶ್ ಕುಮಾರ್ ಅವರು ಸ್ಪಷ್ಟೀಕರಣ ನೀಡಿದ್ದಾರೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಮಾತನಾಡಿರುವ ಅವರು, 'ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷಾ ಪ್ರಶ್ನೆಪ್ರತಿಕೆ ಸೋರಿಕೆಯಾಗಿದೆ ಎನ್ನುವ ಕುರಿತು ಎಲ್ಲೆಡೆ ವರದಿಯಾಗಿದ್ದು, ಈ ಪರೀಕ್ಷೆ ಮುಂಡೂಡಲಾಗುತ್ತದೆ ಎನ್ನುವ ಆತಂಕ ಮಕ್ಕಳಲ್ಲಿ ಎದುರಾಗಿದೆ. ಆದರೆ ಆಯಾ ದಿನಾಂಕಗಳಲ್ಲೇ ಆಯಾ ಪರೀಕ್ಷೆಗಳು ನಡೆಯುತ್ತವೆ. ಪೂರ್ವ ಸಿದ್ಧತಾ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆಗೂ ವ್ಯತ್ಯಾಸವಿದ್ದು, ಮುಖ್ಯ ಪರೀಕ್ಷೆಯ ಮಾದರಿ ಹೇಗಿರುತ್ತದೆ ಎನ್ನುವುದನ್ನು ತಿಳಿಸಲು ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಾಗುತ್ತಿದೆ' ಎಂದರು.

'ರಾಜ್ಯದಲ್ಲಿರುವ 15 ಸಾವಿರ ಪ್ರೌಢಶಾಲೆಗಳ ಪೈಕಿ ಈಗಾಗಲೇ 2 ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಸಂಘವು ಪರೀಕ್ಷೆ ನಡೆಸಿದೆ. ಇನ್ನುಳಿದ ಶಾಲೆಗಳಲ್ಲಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಕೆಎಸ್ಇಇಬಿ) ಪರೀಕ್ಷೆ ನಡೆಸುತ್ತಿದ್ದು, ಪ್ರಶ್ನೆ ಪತ್ರಿಕೆಗಳನ್ನು ಆಯಾ ಶಾಲೆಗಳಿಗೆ ಮೂರು ದಿನಗಳ ಮುಂಚೆಯೇ ಕಳುಹಿಸಲಾಗಿದೆ. ಆಯಾ ಶಾಲೆಗಳಲ್ಲೇ ಪರೀಕ್ಷೆಗಳು ನಡೆದು, ಮೌಲ್ಯಮಾಪನ ಕೂಡ ಆಗುತ್ತದೆ. ಪ್ರಶ್ನೆಪತ್ರಿಕೆ ಸೋರಿಕೆ ತಡೆಯುವುದು ಮುಖ್ಯೋಪಾಧ್ಯಾಯರ ನೈತಿಕ ಜವಾಬ್ದಾರಿ. ಮುಖ್ಯ ಪರೀಕ್ಷೆ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ' ಎಂದರು.

'ಈ ಹಿಂದೆ ನಡೆದುಕೊಂಡು ಬಂದಂತೆಯೇ ಈ ಬಾರಿಯ ಎಸ್ಸೆಸ್ಸೆಲ್ಸಿ ಕೂಡ ನಡೆಯಲಿದ್ದು, ಯಶಸ್ವಿಯಾಗಿ ಪರೀಕ್ಷೆಯನ್ನು ನಡೆಸುತ್ತೇವೆ ಎನ್ನುವ ಭರವಸೆ ನೀಡುತ್ತಿದ್ದೇನೆ. ವಿಶೇಷವಾಗಿ ಮಕ್ಕಳು ಮತ್ತು ಪೋಷಕರು ಯಾವುದೇ ಗೊಂದಲ, ಆಂತಕಕ್ಕೆ ಒಳಗಾಗುವುದು ಬೇಡ' ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ್ದ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಡಿ.ಶಶಿಕುಮಾರ್‌, ‘ಮಂಡಳಿ ಹೇಳುವಂತೆ ಇದು ಪಬ್ಲಿಕ್‌ ಪರೀಕ್ಷೆ ಅಲ್ಲ, ಮೌಲ್ಯಮಾಪನವೂ ಶಾಲಾ ಹಂತದಲ್ಲೇ ನಡೆಯುತ್ತದೆ. ಆದರೆ ಕಷ್ಟಪಟ್ಟು, ನಿಜವಾದ ಪರೀಕ್ಷೆ ಎಂಬಂತೆಯೇ ಭಾವಿಸಿ ಓದಿದ ವಿದ್ಯಾರ್ಥಿಗಳಿಗೂ, ಸೋರಿಕೆಯಾದ ಪ್ರಶ್ನೆಪತ್ರಿಕೆ ಓದಿಕೊಂಡು ಪರೀಕ್ಷೆ ಬರೆದವರಿಗೂ ವ್ಯತ್ಯಾಸ ಇಲ್ಲದಂತೆ ಮಾಡುವ ಇಂತಹ ದಂಧೆಯಿಂದ ಮಕ್ಕಳು ಮಾನಸಿಕ ಆಘಾತಕ್ಕೆ ಈಡಾಗುವ ಸಾಧ್ಯತೆ ಇದೆ. ಸಣ್ಣಪುಟ್ಟ ವಿಷಯಕ್ಕೂ ತ್ವರಿತವಾಗಿ ಸ್ಪಂದಿಸಿ, ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸುವ ಸಚಿವ ಎಸ್‌.ಸುರೇಶ್‌ ಕುಮಾರ್ ಇಷ್ಟು ಗಂಭೀರ ವಿಷಯದಲ್ಲಿ ಏಕೆ ಮೌನ ವಹಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಮೂಡಿರುವ ಸಂಶಯಗಳನ್ನು ಪರಿಹರಿಸುವ ಪ್ರಯತ್ನ ಮಾಡಬಹುದಿತ್ತಲ್ಲ’ ಎಂದು ಅವರು ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT