ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಕಂಡಕ್ಟರ್‌, ಬಾಹ್ಯಾಕಾಶ ಕಂಪನಿಗಳಿಗೆ ಸಚಿವ ಸಚಿವರ ಆಹ್ವಾನ

Published 6 ಅಕ್ಟೋಬರ್ 2023, 15:57 IST
Last Updated 6 ಅಕ್ಟೋಬರ್ 2023, 15:57 IST
ಅಕ್ಷರ ಗಾತ್ರ

ಬೆಂಗಳೂರು: ಅಮೆರಿಕ ಪ್ರವಾಸದಲ್ಲಿರುವ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಸೆಮಿಕಂಡಕ್ಟರ್‌, ಬಾಹ್ಯಾಕಾಶ ವಿಜ್ಞಾನ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಕಂಪನಿಗಳ ಕಚೇರಿಗಳಿಗೆ ಶುಕ್ರವಾರ ಭೇಟಿನೀಡಿ, ಕರ್ನಾಟಕದಲ್ಲಿ ಹೂಡಿಕೆಗೆ ಆಹ್ವಾನ ನೀಡಿದ್ದಾರೆ.

ಸಚಿವರ ನೇತೃತ್ವದ ನಿಯೋಗವು ಸೆಮಿಕಂಡಕ್ಟರ್‌ ಕ್ಷೇತ್ರದ ಎಲ್‌ಎಎಂ ರೀಸರ್ಚ್‌ ಕಂಪನಿ, ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದ ಲಿಯೋ ಲ್ಯಾಬ್ಸ್‌ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದ ಟೆಕಾಂಡ್‌ ಕಂಪನಿಗಳ ಕಚೇರಿಗಳಿಗೆ ಭೇಟಿನೀಡಿದ್ದು, ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡಿದೆ.

‘ಎಲ್‌ಎಎಂ ರೀಸರ್ಚ್‌ ಕಂಪನಿ 23 ವರ್ಷಗಳಿಂದಲೂ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸೆಮಿಕಂಡಕ್ಟರ್‌ ಕ್ಷೇತಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಆರಂಭಿಸುವ ಕುರಿತು ಪರಿಶೀಲಿಸುವ ಭರವಸೆಯನ್ನು ಕಂಪನಿಯ ಪ್ರಮುಖರು ನೀಡಿದ್ದಾರೆ’ ಎಂದು ಸಚಿವ ಎಂ.ಬಿ.‍ಪಾಟೀಲ ತಿಳಿಸಿದ್ದಾರೆ.

ರಾಜ್ಯದಲ್ಲಿ ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಆರಂಭಿಸಲು ಲಿಯೋ ಲ್ಯಾಬ್‌ ಒಲವು ತೋರಿದೆ. ‘ಸ್ಪೇಸ್‌ ಟೆಕ್‌ ಸೆಂಟರ್‌ ಆಫ್‌ ಎಕ್ಸಲೆನ್ಸ್‌’ ಸ್ಥಾಪನೆಯಲ್ಲಿ ಕೈಜೋಡಿಸುವುದಕ್ಕೂ ಆಸಕ್ತಿ ವ್ಯಕ್ತಪಡಿಸಿದೆ. ರಾಡಾರ್‌ಗಳನ್ನು ಸ್ಥಾಪಿಸುವ ಖಾಸಗಿಯವರಿಗೆ ರಾಜ್ಯ ಸರ್ಕಾರ ಅನುಮೋದನೆಗಳನ್ನು ನೀಡುವುದನ್ನು ಅಧ್ಯಯನ ನಡೆಸಿ, ಆ ಬಗ್ಗೆಯೂ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ತೆರೆಯುವ ಕುರಿತು ಟೆಕಾಂಡ್‌ ಕಂಪನಿ ಅಧಿಕಾರಿಗಳು ಚರ್ಚಿಸಿದ್ದಾರೆ. ಇದು ಸಾಧ್ಯವಾದರೆ ‘ಅಸೆಂಬ್ಲಿಂಗ್‌’ ಮತ್ತು ಹಾರ್ಡ್‌ವೇರ್‌ ಉತ್ಪಾದನಾ ಚಟುವಟಿಕೆಗಳನ್ನೂ ರಾಜ್ಯದಲ್ಲೇ ಪ್ರಾರಂಭಿಸಲು ಅವಕಾಶವಾಗಲಿದೆ. ಇ–ಆಡಳಿತ ಕ್ಷೇತ್ರದಲ್ಲೂ ಸರ್ಕಾರದ ಜತೆ ಕೈಜೋಡಿಸಲು ಕಂಪನಿ ಒಲವು ತೋರಿದೆ ಎಂದು ತಿಳಿಸಿದ್ದಾರೆ.

ಎಲ್ಎಎಂ ರೀಸರ್ಚ್ ಕಂಪನಿಯ ಉಪಾಧ್ಯಕ್ಷರಾದ ರಂಗೇಶ್ ರಾಘವನ್, ಕಾರ್ತಿಕ್ ರಾಮಮೋಹನ್, ಪ್ಯಾಟ್ ಲಾರ್ಡ್, ಲಿಯೋ ಲ್ಯಾಬ್ಸ್ ಕಂಪನಿಯ ಸಂಸ್ಥಾಪಕ ಡ್ಯಾನ್ ಸೀಪರ್ಲಿ, ರಚಿತ್ ಭಾಟಿಯಾ ಮತ್ತು ಟೆಕಾಂಡ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಾಹಿಲ್ ಚಾವ್ಲಾ ಮತ್ತು ಸಹ ಸಂಸ್ಥಾಪಕ ರಮೇಶ್ ಸಿಂಗ್ ಚರ್ಚೆಯಲ್ಲಿ ಭಾಗವಹಿಸಿದ್ದರು.

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಏಕ್‌ರೂಪ್ ಕೌರ್ ಮತ್ತು ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ನಿಯೋಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT