ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಷತ್‌ ಪ್ರವೇಶಕ್ಕೆ ಭಾರಿ ಪೈಪೋಟಿ: ಯತೀಂದ್ರಗೆ ಅವಕಾಶ ಕಲ್ಪಿಸಲು ಕೈ ನಾಯಕರ ಒಲವು

Published 20 ಮೇ 2024, 0:29 IST
Last Updated 20 ಮೇ 2024, 0:29 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ 12 ಸದಸ್ಯರ ಆಯ್ಕೆಗೆ ಜೂನ್‌ನಲ್ಲಿ ಚುನಾವಣೆ ನಡೆಯಲಿದ್ದು, ಮೂರೂ ಪಕ್ಷಗಳಲ್ಲಿ ಭಾರಿ ಪೈಪೋಟಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಮೇಲ್ಮನೆಗೆ ತರಲು ಕಾಂಗ್ರೆಸ್‌ ನಾಯಕರು ಒಲವು ತೋರುತ್ತಿದ್ದಾರೆ.

ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ 11 ಸದಸ್ಯರ ಅವಧಿ ಜೂನ್‌ 17ಕ್ಕೆ ಕೊನೆಗೊಳ್ಳಲಿದೆ. ಜಗದೀಶ್‌ ಶೆಟ್ಟರ್‌ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನದ ಅವಧಿ 2028ರ ಜೂನ್‌ 14ರವರೆಗೂ ಇದ್ದು, ಆ ಸ್ಥಾನದ ಭರ್ತಿಗೂ ಉಪ ಚುನಾವಣೆ ನಡೆಯಲಿದೆ.

ವಿಧಾನಸಭೆಯ ಬಲಾಬಲದ ಪ್ರಕಾರ, ಮೊದಲ 11 ಸ್ಥಾನಗಳಲ್ಲಿ ಏಳು ಕಾಂಗ್ರೆಸ್‌ ಪಾಲಾಗಲಿವೆ. ಬಿಜೆಪಿಗೆ ಮೂರು, ಜೆಡಿಎಸ್‌ಗೆ ಒಂದು ಸ್ಥಾನ ದೊರಕಲಿವೆ. ಶೆಟ್ಟರ್‌ ಪ್ರತಿನಿಧಿಸುತ್ತಿದ್ದ ಸ್ಥಾನ ಮತ್ತೆ ಕಾಂಗ್ರೆಸ್‌ ತೆಕ್ಕೆಗೆ ಹೋಗಲಿದೆ.

ಆಕಾಂಕ್ಷಿಗಳ ಭಾರ: ಕಾಂಗ್ರೆಸ್‌ ಸದಸ್ಯರಾದ ಸಣ್ಣ ನೀರಾವರಿ ಸಚಿವ ಎನ್‌.ಎಸ್‌.ಬೋಸರಾಜ್‌, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜ್‌, ಅರವಿಂದ ಕುಮಾರ್‌ ಅರಳಿ ಮತ್ತು ಕೆ. ಹರೀಶ್‌ ಕುಮಾರ್‌ ಜೂನ್‌ 17ಕ್ಕೆ ನಿವೃತ್ತರಾಗುತ್ತಿದ್ದಾರೆ.

‘ಪಕ್ಷಕ್ಕೆ ಸಿಗುವ ಏಳು ಸ್ಥಾನಗಳಲ್ಲಿ ಮೊದಲನೇ ಆಯ್ಕೆಯಾಗಿ ಯತೀಂದ್ರ ಸಿದ್ದರಾಮಯ್ಯ ಅವರನ್ನು ಪರಿಗಣಿಸುವ ಸಾಧ್ಯತೆ ಇದೆ. ಗೋವಿಂದರಾಜ್‌ ಮತ್ತು ಬೋಸರಾಜ್ ವರಿಷ್ಠರ ಮನವೊಲಿಸಿ ಮತ್ತೊಂದು ಅವಧಿಗೆ ಪ್ರಯತ್ನಿಸುತ್ತಿದ್ದಾರೆ’ ಎನ್ನುತ್ತವೆ ಮೂಲಗಳು.

ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್‌ ಬಾಬು, ಎರಡನೇ ಬಾರಿ ಕೆಪಿಸಿಸಿ ಖಜಾಂಚಿಯಾಗಿರುವ ವಿನಯ್‌ ಕಾರ್ತಿಕ್‌, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತ, ಕೆಪಿಸಿಸಿ ಆಡಳಿತ ವಿಭಾಗದ ಪ್ರಧಾನ ಕಾರ್ಯದರ್ಶಿ ವಿಜಯ್‌ ಕೆ. ಮುಳುಗುಂದ್, ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್‌, ರಾಷ್ಟ್ರೀಯ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌, ಡಿ. ದೇವರಾಜ ಅರಸು ಅವರ ಮೊಮ್ಮಗ ಸೂರಜ್‌ ಹೆಗ್ಡೆ, ಕೆಪಿಸಿಸಿ ಸಾಮಾಜಿಕ ನ್ಯಾಯ ಘಟಕದ ಅಧ್ಯಕ್ಷರಾದ ವಕೀಲ ಸಿ.ಎಸ್‌. ದ್ವಾರಕಾನಾಥ್‌ ಅವರು ವಿಧಾನಸಭೆಯಿಂದ ವಿಧಾನ ಪರಿಷತ್‌ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ.

ಪ್ರದೇಶ ಮಹಿಳಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಪುಷ್ಪಾ ಅಮರನಾಥ್‌, ಕವಿತಾ ರೆಡ್ಡಿ, ಆರತಿ ಕೃಷ್ಣ, ಮಹದೇವಪುರದ ಕಮಲಾಕ್ಷಿ ರಾಜಣ್ಣ ಮಹಿಳಾ ಕೋಟಾದಡಿ ಅವಕಾಶ ಕೇಳುತ್ತಿದ್ದಾರೆ. 20 ಮಂದಿ ಕೆಪಿಸಿಸಿ ಅಧ್ಯಕ್ಷರ ಅವಧಿಯಲ್ಲಿ ಕಚೇರಿ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವ ನಾರಾಯಣ ಕೂಡ ಆಕಾಂಕ್ಷಿ ಎಂದು ಮೂಲಗಳು ತಿಳಿಸಿವೆ.

ಅವಧಿ ಮುಗಿಯುವ (ಜೂನ್‌ 17) ಮುನ್ನವೇ ಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಜಿಗಿದಿರುವ ಕೆ.ಪಿ.ನಂಜುಂಡಿ ವಿಶ್ವಕರ್ಮ, ತೇಜಸ್ವಿನಿ ಗೌಡ ಕೂಡ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಹೊಸ ಮುಖಗಳಿಗೆ ಮಣೆ?:

ಬಿಜೆಪಿಯ ಆರು ಸದಸ್ಯರ ಅವಧಿ ಮುಗಿಯುತ್ತಿದೆ. ನಾಲ್ವರು ಮಾತ್ರ ಪಕ್ಷದಲ್ಲಿದ್ದಾರೆ. ರಘುನಾಥ್‌ ರಾವ್‌ ಮಲ್ಕಾಪೂರೆ, ಎನ್‌.ರವಿಕುಮಾರ್‌, ಎಸ್‌. ರುದ್ರೇಗೌಡ, ಪಿ.ಎ.ಮುನಿರಾಜುಗೌಡ ನಿವೃತ್ತರಾಗುತ್ತಿದ್ದಾರೆ. ಈ ಪೈಕಿ ರವಿಕುಮಾರ್‌ ಅವರಿಗೆ ಮತ್ತೊಂದು ಅವಧಿಗೆ ಅವಕಾಶ ದೊರಕುವ ಸಾಧ್ಯತೆ ಇದೆ.

ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಸಿ.ಟಿ.ರವಿ, ಜೆ.ಸಿ.ಮಾಧುಸ್ವಾಮಿ ಅವರನ್ನು ಮೇಲ್ಮನೆಗೆ ಕರೆತರುವ ಚರ್ಚೆ ಬಿಜೆಪಿಯಲ್ಲಿ ನಡೆದಿದೆ. ಹೊಸಬರಿಗೂ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನುತ್ತವೆ ಮೂಲಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT