ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌ ಚುನಾವಣೆ: 11 ಸ್ಥಾನಗಳಿಗೆ ಅಭ್ಯರ್ಥಿ ಪ್ರಕಟ

ಮೂರು ಪಕ್ಷಗಳ ಅಭ್ಯರ್ಥಿಗಳು ಅವಿರೋಧ ಆಯ್ಕೆ ನಿಚ್ಚಳ
Published 2 ಜೂನ್ 2024, 23:46 IST
Last Updated 2 ಜೂನ್ 2024, 23:46 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಇದೇ 13ರಂದು ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜೆಡಿಎಸ್‌ ಕೂಡ ಅಭ್ಯರ್ಥಿಯನ್ನು ಆಖೈರು ಮಾಡಿದೆ. ಎಲ್ಲರೂ ಅವಿರೋಧವಾಗಿ ಆಯ್ಕೆ ಆಗುವುದು ಬಹುತೇಕ ನಿಚ್ಚಳವಾಗಿದೆ.

ನಾಮಪತ್ರ ಸಲ್ಲಿಕೆಗೆ ಸೋಮವಾರ (ಜೂನ್ 3) ಕಡೆಯ ದಿನವಾಗಿದ್ದು, ಮೂರೂ ‍ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯನ್ನು ಭಾನುವಾರ ಅಂತಿಮಗೊಳಿಸಿವೆ. ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮತೋಲನ ಮತ್ತು ಪಕ್ಷ ನಿಷ್ಠೆಯನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್‌ ಮತ್ತು ಬಿಜೆಪಿ ಒತ್ತು ನೀಡಿವೆ.

ಒಟ್ಟು 11 ಸ್ಥಾನಗಳಲ್ಲಿ ಆಯಾ ಪಕ್ಷಗಳ ಶಾಸಕರ ಸಂಖ್ಯಾ ಬಲಕ್ಕೆ ಅನುಗುಣವಾಗಿ ಕಾಂಗ್ರೆಸ್‌ 7, ಬಿಜೆಪಿ 3 ಮತ್ತು ಜೆಡಿಎಸ್‌ ಒಂದು ಸ್ಥಾನ ಗೆಲ್ಲಲು ಅವಕಾಶವಿದೆ.

ಕಾಂಗ್ರೆಸ್‌ನ ಏಳು ಸ್ಥಾನಗಳಿಗೆ 300ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದರು. ಈ ಅವಕಾಶ ಗಿಟ್ಟಿಸಿಕೊಳ್ಳಲು ಹಲವರು ನಾನಾ ದಾರಿಗಳ ಮೂಲಕ ಹೈಕಮಾಂಡ್‌ ನಾಯಕರ ಮೇಲೆ ತೀವ್ರ ಒತ್ತಡ ಹೇರಿದ್ದರು. ಈ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.

ಹಾಲಿ ಸದಸ್ಯರ ಪೈಕಿ, ಸಣ್ಣ ನೀರಾವರಿ ಸಚಿವ ಎನ್‌.ಎಸ್‌.ಬೋಸರಾಜು ಮತ್ತು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜ್ ಅವರಿಗೆ ಮತ್ತೆ ಅವಕಾಶ ಸಿಕ್ಕಿದೆ. ಉಳಿದಂತೆ, ವಿಧಾನಸಭೆ ಚುನಾವಣೆಯಲ್ಲಿ ತಂದೆ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಡಾ.ಯತೀಂದ್ರ, ಕಲಬುರಗಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ್ ಗುತ್ತೇದಾರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಎ. ವಸಂತಕುಮಾರ್, ಪರಿಷತ್‌ ಮಾಜಿ ಸದಸ್ಯ ಐವನ್‌ ಡಿಸೋಜ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷೆ ಬಿಲ್ಕಿಸ್‌ ಬಾನು ಅವರಿಗೆ ಕಾಂಗ್ರೆಸ್‌ ಮಣೆ ಹಾಕಿದೆ.

ವಿಧಾನಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿ ಜಗದೀಶ ಶೆಟ್ಟರ್‌ ಬಿಜೆಪಿಗೆ ಮರಳಿದ ಕಾರಣಕ್ಕೆ ತೆರವಾಗಿದ್ದ ಸ್ಥಾನಕ್ಕೆ ಮುಂದೆ ನಡೆಯಲಿರುವ ಉಪ ಚುನಾವಣೆಗೆ ಬಸನಗೌಡ ಬಾದರ್ಲಿ ಅವರನ್ನು ಅಭ್ಯರ್ಥಿಯೆಂದು ಕಾಂಗ್ರೆಸ್ ಘೋಷಿಸಿದೆ. ರಾಯಚೂರಿನವರಾದ ಬಾದರ್ಲಿ ಅವರು ರಾಜ್ಯ ಯುವ ಕಾಂಗ್ರೆಸ್‌ ಸಮಿತಿ ಮಾಜಿ ಅಧ್ಯಕ್ಷ.

ಟಿಕೆಟ್‌ ಗಿಟ್ಟಿಸಿಕೊಂಡ ಎಂಟು ಮಂದಿಯಲ್ಲಿ ನಾಲ್ವರು (ಎನ್‌.ಎಸ್‌. ಬೋಸರಾಜು, ಜಗದೇವ್ ಗುತ್ತೇದಾರ್‌, ವಸಂತಕುಮಾರ್, ಬಸನಗೌಡ ಬಾದರ್ಲಿ) ಕಲ್ಯಾಣ ಕರ್ನಾಟಕ ಭಾಗದವರು. ಈ ಪೈಕಿ, ಜಗದೇವ್ ಗುತ್ತೇದಾರ್‌ ಅವರನ್ನು ಹೊರತುಪಡಿಸಿ ಉಳಿದ ಮೂವರು ರಾಯಚೂರು ಜಿಲ್ಲೆಯವರು.

ಜಗದೇವ್ ಗುತ್ತೇದಾರ್‌ ಮತ್ತು ವಸಂತಕುಮಾರ್ ಅವರ ಆಯ್ಕೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೈ ಮೇಲಾಗಿದೆ ಎಂದು ಕಾಂಗ್ರೆಸ್‌ ವಲಯದಲ್ಲಿ ವಿಶ್ಲೇಷಿಸಲಾಗಿದೆ. ಗೋವಿಂದರಾಜ್‌ ಮತ್ತು ಐವನ್‌ ಡಿಸೋಜ ಅವರು ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಸಚಿವರಾದ ದಿನೇಶ್‌ ಗುಂಡೂರಾವ್, ಕೃಷ್ಣ ಬೈರೇಗೌಡ, ರವಿ ಬೋಸರಾಜು ಮುಂತಾದವರ ಒತ್ತಡ, ತೆಲಂಗಾಣ ಮತ್ತು ಆಂಧ್ರಪ್ರದೇಶ ಚುನಾವಣೆಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರೆಂಬ ಕಾರಣಕ್ಕೆ ಬೋಸರಾಜು ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ ಎಂದು ಗೊತ್ತಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಸಿಂಧನೂರು ಕ್ಷೇತ್ರದಿಂದ ಟಿಕೆಟ್‌ ಸಿಗದ ಕಾರಣಕ್ಕೆ ಬಂಡೆದ್ದು ಬಸನಗೌಡ ಬಾದರ್ಲಿ ನಾಮಪತ್ರ ಸಲ್ಲಿಸಿದ್ದರು. ಪಕ್ಷದ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಮುಂದೆ ಅವಕಾಶ ನೀಡುವ ಭರವಸೆ ನೀಡಿ ಬಾದರ್ಲಿ ಅವರ ಮನವೊಲಿಸಿ, ನಾಮಪತ್ರ ವಾಪಸ್‌ ಪಡೆಯುವಂತೆ ಮಾಡಿದ್ದರು. ಬಾದರ್ಲಿ  ಲೋಕಸಭೆ ಚುನಾವಣೆಗೆ ಕೊಪ್ಪಳ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಟಿಕೆಟ್‌ ಕೈತಪ್ಪಿತ್ತು. ಸದ್ಯ ಪರಿಷತ್‌ನಲ್ಲಿ ಅವಕಾಶ ಕಲ್ಪಿಸಲು ಹೈಕಮಾಂಡ್‌ ನಾಯಕರು ನಿರ್ಧರಿಸಿದ್ದಾರೆ.

ಅಚ್ಚರಿಯ ಆಯ್ಕೆ: ಮುಸ್ಲಿಂ ಕೋಟಾದಿಂದ ಇಸ್ಮಾಯಿಲ್‌ ತಮಟಗಾರ, ಅಲ್ತಾಫ್ ಹಳ್ಳೂರ, ಆಗಾ ಸುಲ್ತಾನ್ ನಡುವೆ ಪೈಪೋಟಿ ಎದುರಾಗಿತ್ತು. ತಮಟಗಾರ ಪರ ಸಚಿವ ಜಮೀರ್‌ ಅಹ್ಮದ್ ಖಾನ್ ಲಾಬಿ ನಡೆಸಿದ್ದರು. ಕೊನೆ ಕ್ಷಣದಲ್ಲಿ ಈ ಪೈಪೋಟಿ ಮತ್ತು ಮಹಿಳೆ ಎಂಬ ಕಾರಣಕ್ಕೆ ಬಿಲ್ಕಿಸ್‌ ಬಾನು ಅವರಿಗೆ ಅದೃಷ್ಟ ಒಲಿದಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಎನ್‌.ರವಿಕುಮಾರ್‌
ಎನ್‌.ರವಿಕುಮಾರ್‌
ಎಂ ಜಿ ಮುಳೆ
ಎಂ ಜಿ ಮುಳೆ
ಜವರಾಯಿಗೌಡ
ಜವರಾಯಿಗೌಡ
ಎನ್.ಎಸ್. ಬೋಸರಾಜು
ಎನ್.ಎಸ್. ಬೋಸರಾಜು
ಡಾ.ಯತೀಂದ್ರ ಸಿದ್ದರಾಮಯ್ಯ
ಡಾ.ಯತೀಂದ್ರ ಸಿದ್ದರಾಮಯ್ಯ
ಕೆ. ಗೋವಿಂದರಾಜ್
ಕೆ. ಗೋವಿಂದರಾಜ್
ಐವಾನ್‌ ಡಿಸೋಜ
ಐವಾನ್‌ ಡಿಸೋಜ
ಸಿ.ಟಿ.ರವಿ
ಸಿ.ಟಿ.ರವಿ
ಸಿ.ಟಿ.ರವಿ ರವಿಕುಮಾರ್ ಮುಳೆಗೆ ಮಣೆ
ಬಿಜೆಪಿ ಗೆಲ್ಲಲು ಅವಕಾಶವಿರುವ ಮೂರು ಸ್ಥಾನಗಳಿಗೆ ಮಾಜಿ ಸಚಿವ ಸಿ.ಟಿ.ರವಿ ವಿಧಾನ ಪರಿಷತ್‌ನ ಹಾಲಿ ಸದಸ್ಯ ಎನ್.ರವಿಕುಮಾರ್ ಮತ್ತು ಮಾಜಿ ಶಾಸಕ ಎಂ.ಜಿ ಮುಳೆ ಅವರಿಗೆ ಟಿಕೆಟ್‌ ಪ್ರಕಟಿಸಿದೆ. ಎನ್‌.ರವಿಕುಮಾರ್ ಅವರಿಗೆ ಎರಡನೇ ಅವಧಿಗೆ ಅವಕಾಶ ಸಿಕ್ಕಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಸಿ.ಟಿ.ರವಿ ಅವರನ್ನು ಮೇಲ್ಮನೆಗೆ ಕಳುಹಿಸಲು ವರಿಷ್ಠರು ತೀರ್ಮಾನಿಸಿದ್ದಾರೆ. ಪರಿಷತ್ತಿನಲ್ಲಿ ವಿರೋಧಪಕ್ಷದ ನಾಯಕ ಕೋಟ ಶ್ರೀನಿವಾಸಪೂಜಾರಿ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರು ಸಂಸದರಾಗಿ ಆಯ್ಕೆಯಾದರೆ ತೆರವಾಗುವ ವಿರೋಧಪಕ್ಷದ ನಾಯಕ ಸ್ಥಾನಕ್ಕೆ ರವಿ ಆಯ್ಕೆ ಆಗುವ ಸಾಧ್ಯತೆಗಳಿವೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಪರಿಷತ್ತಿನಲ್ಲಿ ವಿರೋಧಪಕ್ಷದ ಮುಖ್ಯ ಸಚೇತಕ ಆಗಿರುವ ಎನ್‌.ರವಿಕುಮಾರ್‌ ಅವರು ಸದನದ ಒಳಗೆ ಮತ್ತು ಪಕ್ಷದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿರುವುದು ಹಾಗೂ ಪಕ್ಷದ ಸಂಘಟನೆಯಲ್ಲಿ ಉತ್ತಮ ಕೆಲಸ ಮಾಡಿರುವ ಕಾರಣಕ್ಕೆ ಎರಡನೇ ಬಾರಿ ಅವಕಾಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಬಸವಕಲ್ಯಾಣ ಕ್ಷೇತ್ರದ ಮಾಜಿ ಶಾಸಕ ಮತ್ತು ಮರಾಠ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಂ.ಜಿ.ಮುಳೆ ಅವರ ಆಯ್ಕೆ ಪಕ್ಷದಲ್ಲಿ ಅಚ್ಚರಿ ಮೂಡಿಸಿದೆ. ಹಿಂದೆ ಜೆಡಿಎಸ್‌ನಲ್ಲಿದ್ದು ಕಳೆದ ಉಪ ಚುನಾವಣೆಯಲ್ಲಿ ಬಿಜೆಪಿ ಸೇರಿದ್ದರು. ರವಿ ಒಕ್ಕಲಿಗ ಸಮಾಜ ಎನ್‌.ರವಿಕುಮಾರ್‌ ಕೋಲಿ ಸಮಾಜ ಮತ್ತು ಮುಳೆ ಅವರು ಹಿಂದುಳಿದ ಮರಾಠ ಸಮಾಜಕ್ಕೆ ಸೇರಿದ್ದಾರೆ. ಈ ಮೂಲಕ ಪಕ್ಷ ನಿಷ್ಠೆ ಸಿದ್ಧಾಂತ ಬದ್ಧತೆ ಜಾತಿ ಸಮೀಕರಣ ತೂಗಿ ಆಯ್ಕೆ ಮಾಡಿದ್ದಾರೆ. ಬಿಜೆಪಿಯಲ್ಲಿ 40ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದರು ಈ ಪೈಕಿ 15 ಆಕಾಂಕ್ಷಿಗಳ ಪಟ್ಟಿಯನ್ನು ಬಿಜೆಪಿ ರಾಜ್ಯ ಘಟಕವು ವರಿಷ್ಠರಿಗೆ ಕಳುಹಿಸಿತ್ತು. ಸಂಸದೆ ಸುಮಲತಾ ಜೆ.ಸಿ.ಮಾಧುಸ್ವಾಮಿ ಸೇರಿ ಹಲವರ ಹೆಸರು ಚರ್ಚೆಯಲ್ಲಿತ್ತು. ಮಾಧುಸ್ವಾಮಿ ಅವರ ಹೆಸರು ಅಂತಿಮಗೊಳಿಸಲು ಬಿ.ಎಸ್. ಯಡಿಯೂರಪ್ಪ ವರಿಷ್ಠರಿಗೆ ಮನವಿ ಮಾಡಿದ್ದರು. ಆದರೆ ಅವರು ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗದ ಕಾರಣ ವರಿಷ್ಠರು ಬೇಸರಗೊಂಡಿದ್ದು ಮನವಿ ಪುರಸ್ಕಾರವಾಗಿಲ್ಲ ಎಂದು ಮೂಲಗಳು ಹೇಳಿವೆ.
ಜವರಾಯಿಗೌಡ ಜೆಡಿಎಸ್‌ ಅಭ್ಯರ್ಥಿ
ಜೆಡಿಎಸ್‌ ತನಗೆ ಲಭಿಸುವ ಒಂದು ಸ್ಥಾನಕ್ಕೆ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಸ್ಪರ್ಧಿಸಿ ಸೋತಿರುವ ಟಿ.ಎನ್‌. ಜವರಾಯಿಗೌಡ ಅವರನ್ನು ಆಯ್ಕೆಮಾಡಿದೆ. ‘ವಿಧಾನ ಪರಿಷತ್‌ನ ಹಾಲಿ ಸದಸ್ಯ ಬಿ.ಎಂ.ಫಾರೂಕ್‌ ರಾಜ್ಯಸಭೆಯ ಮಾಜಿ ಸದಸ್ಯ ಡಿ. ಕುಪೇಂದ್ರ ರೆಡ್ಡಿ ಮತ್ತು ಜವರಾಯಿಗೌಡ ಪರಿಷತ್‌ ಸದಸ್ಯ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಮತ್ತು ಇತರ ಪ್ರಮುಖರ ಜತೆ ಚರ್ಚಿಸಿದ ಬಳಿಕ ಜವರಾಯಿಗೌಡ ಅವರ ಹೆಸರನ್ನು ಅಂತಿಮಗೊಳಿಸಿದ್ದಾರೆ’ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ. ನಾಮಪತ್ರ ಸಲ್ಲಿಕೆಗೆ ಸೋಮವಾರ ಕೊನೆಯ ದಿನ. ಜೆಡಿಎಸ್‌ ಅಧಿಕೃತವಾಗಿ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿಲ್ಲ. ಸೋಮವಾರ ಬೆಳಿಗ್ಗೆ ವಿಧಾನಸೌಧದಲ್ಲಿ ಪಕ್ಷದ ಶಾಸಕರ ಸಭೆ ನಡೆಸಿ ಅಭ್ಯರ್ಥಿ ಹೆಸರು ಘೋಷಿಸಲಾಗುತ್ತದೆ. ಆ ಬಳಿಕ ಜವರಾಯಿಗೌಡ ಅವರೊಂದಿಗೆ ಪಕ್ಷದ ಪ್ರಮುಖರು ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಅಭ್ಯರ್ಥಿಗಳ ಪಟ್ಟಿ

ಕಾಂಗ್ರೆಸ್‌:

 • ಎನ್‌.ಎಸ್‌. ಬೋಸರಾಜು (ಹಿಂದುಳಿದ– ರಾಜು ಕ್ಷತ್ರಿಯ)

 • ಡಾ. ಯತೀಂದ್ರ (ಹಿಂದುಳಿದ– ಕುರುಬ)

 • ಜಗದೇವ್ ಗುತ್ತೇದಾರ್‌ (ಹಿಂದುಳಿದ– ಈಡಿಗ)

 • ಕೆ. ಗೋವಿಂದರಾಜ್ (ಒಕ್ಕಲಿಗ)

 • ಎ. ವಸಂತಕುಮಾರ್ (ಪರಿಶಿಷ್ಟ ಜಾತಿ– ಬಲ)

 • ಬಿಲ್ಕಿಸ್‌ ಬಾನೊ (ಮುಸ್ಲಿಂ)

 • ಐವನ್‌ ಡಿಸೋಜ (ಕ್ರಿಶ್ಚಿಯನ್)

 • ಜಗದೀಶ ಶೆಟ್ಟರ್‌ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬಸನಗೌಡ ಬಾದರ್ಲಿ (ಲಿಂಗಾಯತ)

ಬಿಜೆಪಿ:

 • ಸಿ.ಟಿ.ರವಿ (ಒಕ್ಕಲಿಗ)

 • ಎನ್‌.ರವಿಕುಮಾರ್ (ಹಿಂದುಳಿದ– ಗಂಗಾಮತಸ್ಥ)

 • ಎಂ.ಜಿ.ಮುಳೆ (ಹಿಂದುಳಿದ–ಮರಾಠ)

ಜೆಡಿಎಸ್‌: ಟಿ.ಎನ್‌. ಜವರಾಯಿಗೌಡ (ಒಕ್ಕಲಿಗ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT