ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೇಲ್ಮನೆ ಚುನಾವಣೆ : ಸಚಿವರಿಗೇ ಮತ್ತೆ ಹೊಣೆ

ಔತಣ ಕೂಟದಲ್ಲಿ ಹಲವು ವಿಷಯಗಳ ಕುರಿತು ಚರ್ಚೆ
Published 22 ಮೇ 2024, 23:30 IST
Last Updated 22 ಮೇ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವರಿಗೆ ತಮ್ಮ ವ್ಯಾಪ್ತಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆ ನೀಡಿದಂತೆ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಗುರಿ ನೀಡಲಾಗಿದೆ.

ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬುಧವಾರ ಕರೆದಿದ್ದ ಔತಣ ಕೂಟದಲ್ಲಿ ಭಾಗವಹಿಸಿದ್ದ ಎಲ್ಲ ಸಚಿವರಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಈ ಜವಾಬ್ದಾರಿ ವಹಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸಚಿವರಿಗೆ ಹೊಣೆ ನೀಡುವ ಜತೆಗೆ, ಕೆಲ ಕ್ಷೇತ್ರಗಳಲ್ಲಿ ಸಚಿವರ ಮಕ್ಕಳಿಗೇ ಅವಕಾಶ ನೀಡುವ ಮೂಲಕ ಈ ಬಾರಿ ರಾಜ್ಯದಿಂದ ಅತಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಕಾರ್ಯತಂತ್ರ ರೂಪಿಸಲಾಗಿತ್ತು. ಜೂನ್‌ 3ರಂದು ಈಶಾನ್ಯ ಪದವೀಧರ ಕ್ಷೇತ್ರ, ಬೆಂಗಳೂರು ಪದವೀಧರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ, ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಲು ಆಯಾ ವ್ಯಾಪ್ತಿಯ ಸಚಿವರು ಸಮನ್ವಯದಿಂದ ಕೆಲಸ ಮಾಡುವಂತೆ ಇಬ್ಬರು ನಾಯಕರು ಸೂಚನೆ ನೀಡಿದ್ದಾರೆ. 

ವಿಧಾನಸಭೆಯಿಂದ ಆಯ್ಕೆಗೆ ಕಾರ್ಯತಂತ್ರ:

ವಿಧಾನಸಭೆಯಿಂದ ಪರಿಷತ್ತಿನ 11 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು, ಕಾಂಗ್ರೆಸ್‌ಗೆ 7 ಸ್ಥಾನ ಸಿಗಲಿವೆ. ಹಲವು ಸಚಿವರು ಕೆಲವರ ಹೆಸರು ಪ್ರಸ್ತಾಪಿಸಿ, ಅವರಿಗೆ ಅವಕಾಶ ನೀಡಬೇಕು ಎಂದು ಬೇಡಿಕೆ ಮಂಡಿಸಿದ್ದಾರ ಎಂದು ಗೊತ್ತಾಗಿದೆ.

ಹಾಲಿ ಸದಸ್ಯರಾದ ಹರೀಶ್‌ಕುಮಾರ್, ಅರವಿಂದ ಕುಮಾರ್ ಅರಳಿ ಅವರನ್ನು ಮುಂದುವರಿಸುವ ಕುರಿತು, ಈಚೆಗೆ ಪಕ್ಷ ಸೇರಿದ ಸಂಸದ ಸಂಗಣ್ಣ ಕರಡಿ, ಬಾಬುರಾವ್ ಚಿಂಚನಸೂರ್, ಮಾಲೀಕಯ್ಯ ಗುತ್ತೇದಾರ್‌ ಅವರನ್ನು ಪರಿಗಣಿಸುವ ಕೆಲವರು ಪ್ರಸ್ತಾಪ ಮಾಡಿದ್ದಾರೆ. ಮುಖ್ಯಮಂತ್ರಿ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೂ ಅವಕಾಶ ಕಲ್ಪಿಸಬೇಕು ಎಂಬ ಚರ್ಚೆಯೂ ನಡೆಯಿತು ಎಂದು ಮೂಲಗಳು ಹೇಳಿವೆ.

ಮುಂದೆ ಬರಲಿರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಿಗೆ ಸಿದ್ಧತೆ ನಡೆಸುವ, ಪಕ್ಷದ ಕಾರ್ಯಕರ್ತರನ್ನು ಈಗಿಂದಲೇ ಸಜ್ಜುಗೊಳಿಸುವ ಕುರಿತು ಚರ್ಚೆಗಳು ನಡೆದಿವೆ. 

ದಿನಕ್ಕೊಂದು ವಿಷಯ ತೆಗೆದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ನಡೆಗೆ ಹಲವು ಸಚಿವರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ತಕ್ಕ ಪ್ರತ್ಯುತ್ತರ ನೀಡುವ ಕುರಿತು ಚರ್ಚೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT