ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಅಬ್ಬರ| ಮೈದುಂಬಿದ ಕಾವೇರಿ, ಕುಮಾರಧಾರ

ತುಂಗಾ ಜಲಾಶಯದಿಂದ ನೀರು ಹೊರಕ್ಕೆ * ಭಾರಿ ಮಳೆಗೆ ಒಬ್ಬರ ಸಾವು
Published 6 ಜುಲೈ 2023, 23:30 IST
Last Updated 6 ಜುಲೈ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಕರಾವಳಿ, ಮಲೆನಾಡಿನ ಬಹುತೇಕ ಕಡೆಗಳಲ್ಲಿ, ದಕ್ಷಿಣ ಮತ್ತು ಉತ್ತರ ಒಳನಾಡಿನ ಹಲವೆಡೆ ಗುರುವಾರ ಭಾರಿ ಮಳೆ ಸುರಿದಿದೆ. ಕೆಲವು ಕಡೆ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದರೆ, ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.

ಕೊಡಗಿನಲ್ಲಿ ಕಾವೇರಿ ಮೈದುಂಬಿ ಹರಿಯುತ್ತಿದ್ದರೆ, ದಕ್ಷಿಣ ಕನ್ನಡದಲ್ಲಿ ಕುಮಾರಧಾರ ಉಕ್ಕಿ ಹರಿಯುತ್ತಿದೆ. ರಾಜ್ಯದ ವಿವಿಧ ಜಲಾಶಯಗಳಲ್ಲಿ ಒಳ ಹರಿವು ಏರಿಕೆಯಾಗುತ್ತಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ಒಬ್ಬರು ಮೃತಪಟ್ಟಿದ್ದರೆ, ಮತ್ತೊಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮಲ್ಲಾರಿಯಲ್ಲಿ ಸೇತುವೆ ಮುರಿದಿದೆ.

ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಕಾವೇರಿ, ಕನ್ನಿಕೆ ಹಾಗೂ ಸುಜ್ಯೋತಿ ನದಿಗಳ ಸಂಗಮ ಸ್ಥಳವಾದ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಭಾಗಮಂಡಲ ಮತ್ತು ನಾಪೋಕ್ಲು ರಸ್ತೆ ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಭಾರಿ ಮಳೆಯ ಮುನ್ಸೂಚನೆ ಇರುವುದರಿಂದ ಕೊಡಗು ಜಿಲ್ಲಾಡಳಿತ ಜುಲೈ 7ರಂದು ಜಿಲ್ಲೆಯ ಎಲ್ಲ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದೆ.

ಶಿವಮೊಗ್ಗ ಜಿಲ್ಲೆಯ ಗಾಜನೂರಿನ ತುಂಗಾ ಜಲಾಶಯದ 22 ಕ್ರಸ್ಟ್‌ ಗೇಟ್‌ಗಳ ಪೈಕಿ 10 ಗೇಟ್‌ಗಳನ್ನು ತೆರೆಯಲಾಗಿದೆ. ಜಲಾಶಯಕ್ಕೆ 23,200 ಕ್ಯುಸೆಕ್ ಒಳಹರಿವು ಇದ್ದು, ಅಷ್ಟೇ ಪ್ರಮಾಣದ ನೀರು ನದಿಗೆ ಹರಿಸಲಾಗುತ್ತಿದೆ. ಮುಂಗಾರು ಬಿರುಸು ಪಡೆದಿರುವುದರಿಂದ ಕೃಷಿ ಚುಟುವಟಿಕೆ ಚುರುಕು ಪಡೆದಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿದಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಕಡಲ್ಕೊರೆತ ಹೆಚ್ಚಿದೆ. ಕೆಲವೆಡೆ ಗುಡ್ಡ ಕುಸಿತವೂ ಆಗಿದೆ.

ಕೊಡಗು ಜಿಲ್ಲೆಯ ಭಾಗಮಂಡಲದ ತ್ರಿವೇಣಿ ಸಂಗಮ ಗುರುವಾರ ಭರ್ತಿಯಾಯಿತು
ಕೊಡಗು ಜಿಲ್ಲೆಯ ಭಾಗಮಂಡಲದ ತ್ರಿವೇಣಿ ಸಂಗಮ ಗುರುವಾರ ಭರ್ತಿಯಾಯಿತು

ವ್ಯಕ್ತಿ ಸಾವು: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲ್ಲೂಕಿನ ಮಾಂಟ್ರಾಡಿಯ ಗದ್ದೆ ಹುಣಿಯಲ್ಲಿ ಬುಧವಾರ ರಾತ್ರಿ ನಡೆದುಕೊಂಡು ಹೋಗುತ್ತಿದ್ದ ಅಂಗವಿಕಲ ನಿರಂಜನ್ ಜೈನ್ (42) ಕೆರೆಗೆ ಜಾರಿಬಿದ್ದು ಮೃತಪಟ್ಟಿದ್ದಾರೆ. ಅವರ ಮೃತದೇಹ ಗುರುವಾರ ಪತ್ತೆಯಾಗಿದೆ.

ಸುಳ್ಯ ತಾಲ್ಲೂಕಿನ ಅಲೆಟ್ಟಿಯ ಕೂರ್ನಡ್ಕ ಬಳಿ ಕಾಲುಸಂಕ ದಾಟುತ್ತಿದ್ದಾಗ ಆಯತಪ್ಪಿ ಬಿದ್ದ ಕೇರಳದ ಕೂಲಿ ಕಾರ್ಮಿಕ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಉಡುಪಿಯ ಹಲವು ಗ್ರಾಮಗಳ ಮನೆಗಳಿಗೆ ಮಳೆಯ ನೀರು ನುಗ್ಗಿದ್ದರಿಂದ ಜನ ಜೀವನ ಅಸ್ತವ್ಯಸ್ತ ವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್‌ಗಳ ನೆರವಿನಿಂದ 200ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಲ್ಲಿ ಬಿರುಗಾಳಿಗೆ 29ಕ್ಕೂ ಹೆಚ್ಚು ಮರಗಳು ಮುರಿದು ಬಿದ್ದವು. ಇದರಿಂದ ವ್ಯಕ್ತಿಯೊಬ್ಬರ ತಲೆಗೆ ಏಟಾಗಿದ್ದು, ಕೆಲ ಅಂಗಡಿ, ಮನೆಗಳಿಗೆ ಹಾನಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT