ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಅರಿವು' ಸಾಲ ಯೋಜನೆಗೆ ಹೆಚ್ಚುವರಿ ಅನುದಾನ: ಸಿಎಂ ಸಿದ್ದರಾಮಯ್ಯ ಸೂಚನೆ

Published 10 ಅಕ್ಟೋಬರ್ 2023, 8:21 IST
Last Updated 10 ಅಕ್ಟೋಬರ್ 2023, 8:21 IST
ಅಕ್ಷರ ಗಾತ್ರ

ಬೆಂಗಳೂರು: 'ಅಲ್ಪಸಂಖ್ಯಾತ ಸಮುದಾಯಗಳ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಅರಿವು' ಸಾಲ ಯೋಜನೆಯಡಿ ವೈದ್ಯಕೀಯ ಕಲಿಯುವ ವಿದ್ಯಾರ್ಥಿಗಳಿಗೆ ನೀಡುವ ಸಾಲದ ಮೊತ್ತ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ವಸತಿ, ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್‌ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಸಂಖ್ಯೆ ಹೆಚ್ಚಳ ಹಾಗೂ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಮಾಣ ಹೆಚ್ಚಳ ಮಾಡಿರುವುದಕ್ಕೆ ಅನುಗುಣವಾಗಿ ಹೆಚ್ಚುವರಿ ಹುದ್ದೆಗಳ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸುವಂತೆ ಕೂಡಾ ಅವರು ತಿಳಿಸಿದರು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ನಿಗದಿತ ಗುರಿಗೆ ಎದುರಾಗಿ ನಿರೀಕ್ಷೆಗೂ ಮೀರಿ ಅರ್ಜಿಗಳು ಸ್ವೀಕೃತ ಆಗಿರುವುದರಿಂದ ಅರ್ಹ ಫಲಾನುಭವಿಗಳ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ, ಅನುದಾನ ಲಭ್ಯತೆಗೆ ಅನುಸಾರವಾಗಿ ಸೌಲಭ್ಯ ವಿತರಿಸಬೇಕು 'ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆ'ಯಡಿ ಅಲ್ಪಸಂಖ್ಯಾತರ ಕಾಲನಿಗಳ ಅಭಿವೃದ್ಧಿಗೆ ₹ 1,000 ಕೋಟಿಯ ಕ್ರಿಯಾ ಯೋಜನೆ ರೂಪಿಸಿ, ಕಾಮಗಾರಿಗಳ ಆದ್ಯತಾ ಪಟ್ಟಿ ಅನ್ವಯ ಕೆಲಸ ಕೈಗೆತ್ತಿಕೊಳ್ಳಬೇಕು ಎಂದು‌ ಮುಖ್ಯಮಂತ್ರಿ ಸಲಹೆ ನೀಡಿದರು.

ಅಲ್ಪಸಂಖ್ಯಾತರ ಇಲಾಖೆಯಡಿ ಆಯವ್ಯಯದಲ್ಲಿ ಘೋಷಿಸಲಾದ 19 ಘೋಷಣೆಗಳ ಪೈಕಿ 16 ಘೋಷಣೆಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಆದೇಶ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಫಲಾನುಭವಿ ವಂತಿಗೆ ಪ್ರಮಾಣ ಹೆಚ್ಚಾಗಿರುವುದರಿಂದ ಮತ್ತು ಫಲಾನುಭವಿಗಳ ವಂತಿಗೆ ಪಾವತಿ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ಸಂಪನ್ಮೂಲ ಕ್ರೋಡೀಕರಣಕ್ಕೆ ನೀತಿ ರೂಪಿಸಲು ಪ್ರಸ್ತಾವನೆ ಸಲ್ಲಿಸುವಂತೆಯೂ ಮುಖ್ಯಮಂತ್ರಿ ತಿಳಿಸಿದರು.

ಒಂದು ಲಕ್ಷ ವಸತಿ ಯೋಜನೆಯಡಿ ನಿರ್ಮಾಣಗೊಂಡ ಮನೆಗಳಿಗೆ ಅಗತ್ಯ ಮೂಲಸೌಕರ್ಯವನ್ನು ಆದ್ಯತೆಯ ಮೇರೆಗೆ ಕಲ್ಪಿಸಬೇಕು ಎಂದೂ ಮುಖ್ಯಮಂತ್ರಿ ಸೂಚಿಸಿದರು.

ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್‌ ಅಹ್ಮದ್‌ ಖಾನ್‌, ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್‌, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್‌ ಅಹ್ಮದ್‌, ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT