ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನ್ಯಾಯಾಲಯ ಏನೇ ತೀರ್ಪು ಕೊಟ್ಟರೂ ಸಿಎಂ ಜೊತೆ ಹೈಕಮಾಂಡ್: ಜಿ. ಪರಮೇಶ್ವರ

Published : 28 ಆಗಸ್ಟ್ 2024, 8:05 IST
Last Updated : 28 ಆಗಸ್ಟ್ 2024, 8:05 IST
ಫಾಲೋ ಮಾಡಿ
Comments

ಬೆಂಗಳೂರು: ‘ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಲ್ಲಿಸಿರುವ ರಿಟ್‌ ಅರ್ಜಿಯಲ್ಲಿ ನ್ಯಾಯಾಲಯ ಏನೇ ತೀರ್ಪು ಕೊಟ್ಟರೂ ಮುಖ್ಯಮಂತ್ರಿಯವರ ಜೊತೆ ಹೈಕಮಾಂಡ್ ನಿಲ್ಲಲಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ರಾಜ್ಯಪಾಲರ ನಿರ್ಣಯವನ್ನು ಕೋರ್ಟ್ ಪರಿಗಣಿಸುವುದಿಲ್ಲ ಎಂಬ ನಿರೀಕ್ಷೆ ಇದೆ‌. ಮುಖ್ಯಮಂತ್ರಿಯವರ ಸಹಿ, ಯಾವುದೇ ರೀತಿಯ ದಾಖಲೆಗಳು ಇಲ್ಲ. ನೋಂದಣಿಯಲ್ಲಿಯೂ ಅವರ ಹೆಸರು ಉಲ್ಲೇಖವಾಗಿಲ್ಲ. ಅದೆಲ್ಲವನ್ನು ಗಮನಿಸಿ ನ್ಯಾಯಾಲಯ ತೀರ್ಮಾನ ಕೊಡುತ್ತದೆ ಎಂದು ನಿರೀಕ್ಷೆಯಿದೆ’ ಎಂದರು.

‘ನಾವೆಲ್ಲರೂ ಮುಖ್ಯಮಂತ್ರಿ ಜೊತೆ ಇರುತ್ತೇವೆ. ಇದೇ 29ರಂದು ನ್ಯಾಯಾಲಯದಲ್ಲಿ ಮುಡಾ ಪ್ರಕರಣ ವಿಚಾರಣೆಗೆ ಬರಲಿದೆ. ಏನು ತೀರ್ಪು ಏನು ಬರುತ್ತದೆ ಎಂಬುದರ ಮೇಲೆ ಚರ್ಚೆ ಆಗಲಿದೆ’ ಎಂದರು.

‘ನಾನು ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿ. ಪಕ್ಷದಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ವಹಿಸಿದರು ಪ್ರಾಮಾಣಿಕವಾಗಿ ಮಾಡಿದ್ದೇನೆ’ ಎಂದೂ ಪರಮೇಶ್ವರ ಹೇಳಿದರು.

‘ರಾಹುಲ್ ಗಾಂಧಿ ಅವರು ನನ್ನನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿಸಿದ್ದು ನಿಜ. ಪಕ್ಷದ ವಿಚಾರದಲ್ಲಿ ಅವರು ನನಗೆ ಏನು ಹೇಳಬೇಕು, ಹೇಳಿದ್ದಾರೆ. ಅದನ್ನು ಬಿಟ್ಟು ಬೇರೆ ಏನೂ ಮಾತನಾಡಿಲ್ಲ’ ಎಂದರು.

ಪ್ರಭಾವ ಬಳಸಿಲ್ಲ: ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟ್‌ಗೆ ಕೆಐಎಡಿಬಿ ನಿವೇಶನ ನೀಡಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕೆಐಎಡಿಬಿ ನಿವೇಶನ ಅಕ್ರಮವಾಗಿ ಪಡೆದಿದ್ದಾರೆಯೇ, ಇಲ್ಲವೇ ಎಂಬುದನ್ನು ರಾಜ್ಯಪಾಲರು ಪರಿಶೀಲಿಸಲಿ. ಅವರು ಕಾನೂನು ಬಾಹಿರವಾಗಿ ಪಡೆದಿದ್ದಾರೆ ಎಂದಾದರೆ ರಾಜ್ಯಪಾಲರು ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳಲಿ.‌ ಖರ್ಗೆ ಅವರು ತಮ್ಮ ಪ್ರಭಾವ ಬಳಸಿ, ಟ್ರಸ್ಟ್‌ಗೆ ನಿವೇಶನ ಪಡೆದಿಲ್ಲ’ ಎಂದರು‌.

‘ಇಂತಹ ಪ್ರಾಜೆಕ್ಟ್ ಮಾಡುತ್ತಿದ್ದೇವೆ ಎಂದು ಹೇಳಿ, ಅರ್ಜಿ ಸಲ್ಲಿಸಿದಾಗ ನಿವೇಶನ ಕೊಟ್ಟಿದ್ದಾರೆ.‌ ಹಾಗೆಂದು ಕಡಿಮೆ ಬೆಲೆಗೆ ಕೊಡಲು ಸಾಧ್ಯ ಇಲ್ಲ. ಅಲ್ಲಿನ ಮಾರುಕಟ್ಟೆ ದರ ಏನಿರುತ್ತದೆಯೋ ಅದರ ಪ್ರಕಾರ ನೀಡಿರುತ್ತಾರೆ. ಖರ್ಗೆ ಕುಟುಂಬದವರ ಪ್ರಭಾವ ಇದ್ದರೆ ಅದನ್ನು ರಾಜ್ಯಪಾಲರು ಪರಿಶೀಲಿಸಲಿ’ ಎಂದು ಹೇಳಿದರು.

‘ಬಿಜೆಪಿ ಆಡಳಿತ‌ ನಡೆಸುತ್ತಿರುವ ಸರ್ಕಾರಗಳು, ಕೇಂದ್ರ ಸರ್ಕಾರದ ಮೇಲೆಯೂ ಭ್ರಷ್ಟಚಾರದ ಆರೋಪಗಳಿಲ್ಲವೇ? ನಮ್ಮ ಸರ್ಕಾರದ ಮೇಲೆ ಬಂದಿರುವ ಆರೋಪಗಳು ನಿರಾಧಾರ ಎಂಬುದನ್ನು ನಾವು ಸಾಬೀತುಪಡಿಸುತ್ತೇವೆ’ ಎಂದೂ ಹೇಳಿದರು.

ಮೈತ್ರಿ ಪಕ್ಷಗಳ ನಾಯಕರ ಪ್ರಾಸಿಕ್ಯೂಷನ್‌ಗೆ ಒತ್ತಾಯಿಸಿ ರಾಜಭವನ ಚಲೊ ಹಮ್ಮಿಕೊಂಡಿರುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ, ‘ರಾಜ್ಯಪಾಲರ ನಡೆಯ ಬಗ್ಗೆ ಒಂದಷ್ಟು ಚರ್ಚೆ ಮಾಡಿ ತೀರ್ಮಾನಗಳನ್ನು ಮಾಡಿದ್ದೇವೆ. ಪಕ್ಷದ ಅಧ್ಯಕ್ಷರು ಈಗಾಗಲೇ ತಿಳಿಸಿದ್ದಾರೆ. ಪಕ್ಷದ ವತಿಯಿಂದ ರಾಜ್ಯದಾದ್ಯಂತ ಪ್ರತಿಭಟನೆ ಮಾಡುತ್ತೇವೆ’ ಎಂದರು.

‘ಅಲ್ಲದೆ, ಎಲ್ಲ ಸಚಿವರು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ರಾಜ್ಯಪಾಲರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ. ಅಷ್ಟರೊಳಗೆ ಕೋರ್ಟ್‌ನಲ್ಲಿ ಏನೆಲ್ಲ ತೀರ್ಮಾನ ಆಗುತ್ತದೆ ಎಂಬುದನ್ನು ನೋಡಬೇಕಿದೆ. ಆ ನಂತರ ರಾಷ್ಟ್ರಪತಿಯವರನ್ನು ಭೇಟಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ’ ಎಂದೂ ಹೇಳಿದರು.

‘ಬಿಜೆಪಿಯವರು ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡುವುದಾದರೆ, ನಾವು ಕೂಡಾ ರಾಷ್ಟ್ರಮಟ್ಟದಲ್ಲೇ ಮಾಡಬೇಕಲ್ಲವೇ? ನಮ್ಮ ಪಕ್ಷ ಮಾತ್ರ ಮಾಡುತ್ತದೆಯಾ ಅಥವಾ ‘ಇಂಡಿಯಾ’ ಮೈತ್ರಿಕೂಟದಲ್ಲಿರುವ ಪಕ್ಷಗಳನ್ನೂ ಸೇರಿಸಿ ಪ್ರತಿಭಟನೆ ಮಾಡಬೇಕೇ ಎಂಬುದನ್ನು ಹೈಕಮಾಂಡ್ ತೀರ್ಮಾನಿಸಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT