ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಎಂರನ್ನು ಇಳಿಸಿದರೆ ಪಕ್ಷವನ್ನೇ ಮುಳುಗಿಸುವ ಭಯವೇ?: ಡಿಕೆಶಿಗೆ ಅಶೋಕ ಪ್ರಶ್ನೆ

Published : 28 ಸೆಪ್ಟೆಂಬರ್ 2024, 5:21 IST
Last Updated : 28 ಸೆಪ್ಟೆಂಬರ್ 2024, 5:21 IST
ಫಾಲೋ ಮಾಡಿ
Comments

ಬೆಂಗಳೂರು: 'ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಅವರು ಇಡೀ ಕಾಂಗ್ರೆಸ್ ಪಕ್ಷವನ್ನೇ ಮುಳುಗಿಸಿ ಬಿಡುತ್ತಾರೆ ಅನ್ನುವ ಭಯವೇ ನಿಮಗೆ' ಎಂದು ಉಪಮುಖ್ಯಮಂತ್ರಿ, ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಪ್ರಶ್ನೆ ಮಾಡಿದ್ದಾರೆ.

'ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಎರಡೆರಡು ನ್ಯಾಯಾಲಯಗಳು ಛೀಮಾರಿ ಹಾಕಿ, ಲೋಕಾಯುಕ್ತ ಪೊಲೀಸರು ಎಫ್ಐಆರ್ ಹಾಕಿದ್ದರೂ ಮುಖ್ಯಮಂತ್ರಿಗಳ ರಾಜೀನಾಮೆ ಪಡೆಯಲಾಗದಂತಹ ನಿಮ್ಮಂತಹ ದುರ್ಬಲ ಕೆ.ಪಿ.ಸಿ.ಸಿ ಅಧ್ಯಕ್ಷರು ಬಹುಶಃ ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲೇ ಇರಲಿಲ್ಲ. ಇಂತಹ ನಾಮಕಾವಸ್ತೆ ಅಧ್ಯಕ್ಷಗಿರಿ ಇಟ್ಟುಕೊಂಡು ಏನು ಮಾಡುತ್ತೀರಿ?' ಎಂದು ವಾಗ್ದಾಳಿ ನಡೆಸಿದ್ದಾರೆ.

'ಮನೇಲಿ ಇಲಿ ಬೀದೀಲಿ ಹುಲಿ' ಎಂಬಂತೆ ನಿಮ್ಮ ಪೌರುಷ, ಅಬ್ಬರ ಮಾಧ್ಯಮಗಳ ಮುಂದೆ ಮಾತ್ರನಾ? ಅಥವಾ ಸಿದ್ದರಾಮಯ್ಯರನ್ನ ಇಳಿಸಿದರೆ ಅವರು ಕಾಂಗ್ರೆಸ್ ಪಕ್ಷವನ್ನೇ ಮುಳುಗಿಸಿ ಬಿಡುತ್ತಾರೆ ಎಂಬ ಭಯವೋ?' ಎಂದು ಕುಟುಕಿದ್ದಾರೆ.

2011ರಲ್ಲಿ ರಾಜ್ಯಪಾಲರ ಅಧಿಕಾರದ ಬಗ್ಗೆ ಸಿದ್ದರಾಮಯ್ಯ ಅವರ ಭಾಷಣದ ವಿಡಿಯೊ ಹಂಚಿಕೊಂಡ ಅಶೋಕ...

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ 2011ರಲ್ಲಿ ರಾಜ್ಯಪಾಲರ ಅಧಿಕಾರದ ಕುರಿತು ಸಿದ್ದರಾಮಯ್ಯ ಅವರ ಭಾಷಣದ ವಿಡಿಯೊ ತುಣುಕನ್ನು ಬಿಜೆಪಿ ನಾಯಕ ಅಶೋಕ ಹಂಚಿಕೊಂಡಿದ್ದಾರೆ.

'ಡೋಂಗಿರಾಮಯ್ಯನ ಇಡೀ ಜೀವನವೇ ಒಂದು ದೊಡ್ಡ ಡೋಂಗಿ. ಬುರುಡೆ ರಾಮಯ್ಯನ ಬದುಕೆಲ್ಲ ಬರೀ ಬುರುಡೆಯೇ. ಕಾಲಕ್ಕೆ ತಕ್ಕಂತೆ ತಮ್ಮ ಮೂಗಿನ ನೇರಕ್ಕೆ ಬಣ್ಣ ಬದಲಾಯಿಸುವ ಊಸರವಳ್ಳಿ ರಾಮಯ್ಯನ ಬೂಟಾಟಿಕೆ ಬಗ್ಗೆ ದೊಡ್ಡ ಪುಸ್ತಕವೇ ಬರೆಯಬಹುದು. 2011ರಲ್ಲಿ ರಾಜ್ಯಪಾಲರ ಅಧಿಕಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ನುಡಿದಿರುವ ನುಡಿಮುತ್ತುಗಳನ್ನು ಒಮ್ಮೆ ಕೇಳಿಸಿಕೊಳ್ಳಿ ಡಿಸಿಎಂ ಅವರೇ' ಎಂದು ಡಿ.ಕೆ.ಶಿವಮಾರ್‌ಗೆ ಟ್ಯಾಗ್ ಮಾಡಿದ್ದಾರೆ.

ಈ ಹಳೆಯ ವಿಡಿಯೊದಲ್ಲಿ ರಾಷ್ಟ್ರಪತಿಯ ಪ್ರತಿನಿಧಿಯಾದ ರಾಜ್ಯಪಾಲರ ಹಕ್ಕುಗಳ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದರು.

'ಒಂದು ಸರ್ಕಾರ ಸಂವಿಧಾನದ ಚೌಕಿಟ್ಟಿನೊಳಗೆ ಕೆಲಸ ಮಾಡುತ್ತಿದೆಯೋ ಅನ್ನೋದನ್ನು ನೋಡುವ ಉಸ್ತುವಾರಿ ರಾಜ್ಯಪಾಲರಿಗೆ ಇರುತ್ತದೆ. ಸರ್ಕಾರ ತಪ್ಪು ಮಾಡಿದಾಗ ಎಚ್ಚರಿಸುವ, ಬುದ್ದಿ ಹೇಳುವ ಹಾಗೂ ಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯಪಾಲರಿಗೆ ಇದೆ. ರಾಜ್ಯಪಾಲರು ತಮ್ಮ ಅಧಿಕಾರ ಚಲಾಯಿಸಿದಾಗ ಅದನ್ನು ರಾಜಕೀಯ ಪ್ರೇರಿತ, ದುರುದ್ದೇಶದಿಂದ, ಪೂರ್ವಯೋಜಿತ, ವಿರೋಧ ಪಕ್ಷದವರ ಸಂಚು ಎಂದು ಹೇಳಿದರೆ ಜನರು ಅದನ್ನು ನಂಬುವುದಿಲ್ಲ' ಎಂದು ಸಿದ್ದರಾಮಯ್ಯ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT