ಮೈಸೂರು: ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ‘ಬದಲಿ ನಿವೇಶನ’ ಪಡೆಯಲು ಉಳ್ಳವರು ದೊಡ್ಡ ಮಟ್ಟದಲ್ಲೇ ಪ್ರಭಾವ ಬಳಸುತ್ತಿರುವುದು ದಾಖಲೆಗಳಿಂದ ಬಹಿರಂಗಗೊಂಡಿದೆ.
ಇಲ್ಲಿನ ಅಶೋಕಪುರಂನವರಾದ, ನವದೆಹಲಿಯ ಕರ್ನಾಟಕ ಭವನದ ನೌಕರ ಸಿ. ಮೋಹನ್‌ಕುಮಾರ್ ಅವರು ‘ಜಿ–ಪ್ರವರ್ಗ’ (ಜಿ ಕೆಟಗರಿ)ದಲ್ಲಿ ತಮಗೆ ಹಂಚಿಕೆಯಾದ ನಿವೇಶನಕ್ಕೆ ‘ಬದಲಿ ನಿವೇಶನ’ ಮಂಜೂರು ಮಾಡಿಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ನಗರಾಭಿವೃದ್ಧಿ ಸಚಿವ ಮೊದಲಾದವರ ಮೂಲಕ ಪ್ರಭಾವ ಬಳಸಿದ್ದಾರೆ. ಈ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತ (ಆರ್‌ಟಿಐ) ಗಂಗರಾಜು ಅವರು ದಾಖಲೆಗಳನ್ನು ಪಡೆದಿದ್ದು, ಅವು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.
ದಾಖಲೆಗಳ ಪ್ರಕಾರ: ಮೋಹನ್‌ಕುಮಾರ್ ಅವರಿಗೆ ಸಾತಗಳ್ಳಿ 2ನೇ ಹಂತ ಬಡಾವಣೆಯಲ್ಲಿ 50x80 ಅಡಿ ಅಳತೆಯ ನಿವೇಶನ (ಸಂಖ್ಯೆ 5,312) ‘ಜಿ–ಪ್ರವರ್ಗ’ದಲ್ಲಿ ಮಂಜೂರಾಗಿದ್ದು, ಪಟ್ಟಿಯಲ್ಲಿ ತಪ್ಪಾಗಿದ್ದ ಹೆಸರು ಸರಿಪಡಿಸುವಂತೆ 2005ರಲ್ಲಿ ಆಗಿನ ಶಾಸಕ ಡಿ.ಕೆ.ಶಿವಕುಮಾರ್ ಶಿಫಾರಸು ಪತ್ರ ಕೊಟ್ಟಿದ್ದರು.
2010ರ ಜುಲೈ 17ರಂದು ಆಗಿನ ನಗರಾಭಿವೃದ್ಧಿ ಸಚಿವರ ಟಿಪ್ಪಣಿ ಆಧರಿಸಿ ಇಲಾಖೆಯ ಮುಖ್ಯ ಕಾರ್ಯದರ್ಶಿಯು ಮುಡಾಕ್ಕೆ ಪತ್ರ ಬರೆದು, ಬದಲಿ ನಿವೇಶನಕ್ಕೆ ಪರಿಶೀಲಿಸುವಂತೆ ತಿಳಿಸಿದ್ದರು. ಅದಕ್ಕೆ ಅದೇ ತಿಂಗಳ 29ರಂದು ಪ್ರತಿಕ್ರಿಯಿಸಿದ ಮುಡಾ ಕಾರ್ಯದರ್ಶಿ, ‘ಬದಲಿ ನಿವೇಶನ ನೀಡಲು ಅವಕಾಶವಿಲ್ಲ’ ಎಂದಿದ್ದರು.
ಬಳಿಕವೂ ಮೋಹನ್‌ಕುಮಾರ್ ಅರ್ಜಿ ಸಲ್ಲಿಸಿದ್ದರು. 2010ರ ಆ.18ರಂದು ಆಗಿನ ವಿಧಾನಸಭೆ ವಿರೋಧ
ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಂದ ಪತ್ರ ಬರೆಸಿದ್ದರು. ‘ಅರ್ಜಿದಾರರು ಕರ್ನಾಟಕ ಭವನದಲ್ಲಿ 4ನೇ ದರ್ಜೆ ನೌಕರರಾಗಿದ್ದು, ಅವರ ಕುಟುಂಬ ಏಕಾಂಗಿಯಾಗಿ ಸಾತಗಹಳ್ಳಿ 2ನೇ ಹಂತದಲ್ಲಿ ಮನೆ ಕಟ್ಟಿ ವಾಸವಿರಲು ಸಾಧ್ಯವಿರುವುದಿಲ್ಲ. ಅಲ್ಲಿ ಮನೆಗಳು ನಿರ್ಮಾಣವಾಗಿಲ್ಲ. ಮಾನವೀಯ ದೃಷ್ಟಿಯಿಂದ ಅಭಿವೃದ್ಧಿ ಹೊಂದಿದ ಬಡಾವಣೆಯಾದ ವಿಜಯನಗರ 3ನೇ ಹಂತ ಅಥವಾ ದಟ್ಟಗಳ್ಳಿಯಲ್ಲಿ ನಿವೇಶನ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದೆ’ ಎಂದು ಪತ್ರ ನೀಡಿದ್ದರು.
ಮುಖ್ಯಮಂತ್ರಿಯಾದ ಮೇಲೂ: ಮತ್ತೆ 2014ರ ಜ.6ರಂದು ಆಗಿನ ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ ಅವರಿಂದಲೂ ಮುಡಾಕ್ಕೆ ಪತ್ರ ಬಂದಿತ್ತು. ‘ಅವರ ಕೋರಿಕೆ ಅರ್ಜಿ ಸ್ವಯಂ ವೇದ್ಯವಾಗಿದ್ದು, ಅಗತ್ಯ ಕ್ರಮಕ್ಕೆ ಕೋರುವಂತೆ ಮುಖ್ಯಮಂತ್ರಿಯಿಂದ ನಿರ್ದೇಶಿತನಾಗಿದ್ದೇನೆ’ ಎಂದು ತಿಳಿಸಿದ್ದರು. ಆಗಲೂ ಬದಲಿ ನಿವೇಶನ ದೊರೆತಿರಲಿಲ್ಲ. ಬಳಿಕ ಅವರು, 2019ರಲ್ಲೂ ಅರ್ಜಿ ಹಾಕಿದ್ದರು. 2020ರಲ್ಲಿ ಹಾಗೂ 2021ರಲ್ಲಿ ಆಗಿನ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರ ಮೂಲಕವೂ ಒತ್ತಡ ತಂದಿದ್ದರು. ಆಗಲೂ ‘ಕಾನೂನಿನಲ್ಲಿ ಅವಕಾಶವಿಲ್ಲ’ ಎಂದು ಮುಡಾ ತಿಳಿಸಿದೆ.
‘ಬದಲಿ ನಿವೇಶನಕ್ಕಾಗಿ ಪ್ರಭಾವಿಗಳು ಹೇಗೆಲ್ಲಾ ಪ್ರಭಾವ ಬಳಸುತ್ತಾರೆ ಎಂಬು
ದಕ್ಕೆ ಇದು ನಿದರ್ಶನ. ಅವಕಾಶ ಇಲ್ಲವೆಂದು ಅಧಿಕಾರಿಗಳು ತಿಳಿಸಿದರೂ ಹಲವು ಬಾರಿ ಶಿಫಾರಸು ಪತ್ರಗಳನ್ನು ಕೊಡಿಸಿದ್ದಾರೆ. ಅಧಿಕಾರಿಗಳು ಬದಲಾಗುತ್ತಿದ್ದಂತೆಯೇ ಅರ್ಜಿ ಕೊಡಿಸಿದ್ದಾರೆ. ರಾಜಕಾರಣಿಗಳಿಗೆ ಉಳ್ಳವರ ಬಗೆಗಿರುವ ಕಾಳಜಿ ಬಡವರ ಪರ ಏಕಿಲ್ಲ?’ ಎಂದು ಆರ್‌ಟಿಐ ಕಾರ್ಯಕರ್ತ ಗಂಗರಾಜು ಕೇಳಿದರು.
‘ಅಧಿಕಾರಿಗಳ ದಿಕ್ಕು ತಪ್ಪಿಸಲು ಪದೇ ಪದೇ ಅರ್ಜಿ ಸಲ್ಲಿಸುತ್ತಿರುವ ವ್ಯಕ್ತಿಯನ್ನು ಈ ನಾಯಕರು ಬೆಂಬಲಿಸಿದ್ದಾರೆ. ಒಬ್ಬ ಸರ್ಕಾರಿ ನೌಕರ, ಅಧಿಕಾರಿಗಳ ಮೇಲೆ ಒತ್ತಡ ಹೇರುವುದು, ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿರುವುದು ಹಾಗೂ ಪ್ರಭಾವ ಬಳಸುವುದು ಎಷ್ಟು ಸರಿ?’ ಎಂಬ ಪ್ರಶ್ನೆ ಅವರದು.
‘ಹಂಚಿಕೆಯಾದ ನಿವೇಶನಕ್ಕೆ ಬದಲಿಯಾಗಿ ‘ಅಭಿವೃದ್ಧಿ ಹೊಂದಿದ ಹಾಗೂ ಒಳ್ಳೆಯ ಮೌಲ್ಯವುಳ್ಳ ಸ್ಥಳದಲ್ಲಿ ನಿವೇಶನ ಪಡೆದುಕೊಳ್ಳಲು ಹಲವರು ಪ್ರಯತ್ನಿಸುತ್ತಿರುವುದು ಹಾಗೂ ಅದರಲ್ಲಿ ಹಲವರು ಸಫಲವಾಗಿರುವ ಉದಾಹರಣೆಯೂ ಇದೆ. ಈ ಬಗ್ಗೆಯೂ ತನಿಖೆ ನಡೆಯಬೇಕು’
ಎನ್ನುತ್ತಾರೆ ಮುಡಾದ ವ್ಯವಹಾರಗಳನ್ನು ಬಲ್ಲವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.