ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾಮಠ: ಮೇಲ್ಮನವಿ ಸಲ್ಲಿಕೆಗೆ ನಿಮಗಿರುವ ಅಧಿಕಾರವೇನು?-ಏಕಾಂತಯ್ಯಗೆ ಹೈಕೋರ್ಟ್‌

ಮಾಜಿ ಸಚಿವ ಏಕಾಂತಯ್ಯಗೆ ಹೈಕೋರ್ಟ್‌ ಪ್ರಶ್ನೆ
Published 16 ಆಗಸ್ಟ್ 2023, 21:14 IST
Last Updated 16 ಆಗಸ್ಟ್ 2023, 21:14 IST
ಅಕ್ಷರ ಗಾತ್ರ

ಬೆಂಗಳೂರು: ‘ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನಿಮಗಿರುವ ಸ್ವತಂತ್ರ ಹಕ್ಕುಗಳೇನು?, ಸರ್ಕಾರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿದ್ದ ಆದೇಶವನ್ನು ಈಗಾಗಲೇ ಹಿಂಪಡೆದಿದೆ. ಅಂದಿನ ಆಡಳಿತಾಧಿಕಾರಿ ತಮ್ಮ ಅವಧಿಯಲ್ಲಿ ನಿಮ್ಮನ್ನು ವಿದ್ಯಾಪೀಠಕ್ಕೆ ಉಪಾಧ್ಯಕ್ಷರನ್ನಾಗಿ ಮಾಡಿದ್ದರು. ಅವರೀಗ ಇಡೀ ಚಿತ್ರಣದಿಂದಲೇ ಹೊರಗಿರುವಾಗ ನಿಮ್ಮ ಅಳಲು ತೋಡಿಕೊಳ್ಳಲು ಇರುವ ಕಾನೂನುಬದ್ಧ ಅಧಿಕಾರವಾದರೂ ಏನು...’?

‘ಚಿತ್ರದುರ್ಗದ, ‘ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ’ಕ್ಕೆ (ಎಸ್‌ಜೆಎಂ) ಈ ಹಿಂದಿನ ರಾಜ್ಯ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದ್ದ ಆದೇಶವನ್ನು ರದ್ದುಪಡಿಸಿದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಒಟ್ಟು ಏಳು ಮೇಲ್ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಎಂ.ಜಿ.ಎಸ್‌.ಕಮಾಲ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ಮುಂದುವರಿಸಿತು.

ವಿಚಾರಣೆ ವೇಳೆ ಮೇಲ್ಮನವಿದಾರ ಮಾಜಿ ಸಚಿವ ಎಚ್‌.ಏಕಾಂತಯ್ಯ ಪರ ವಾದ ಮಂಡಿಸಿದ ಸುಪ್ರೀಂ ಕೋರ್ಟ್‌ ವಕೀಲ ಸುಘೋಷ್‌ ಸುಬ್ರಹ್ಮಣ್ಯಂ ಅವರಿಗೆ ನ್ಯಾಯಪೀಠ ಕೇಳಿದ ಪ್ರಶ್ನೆಗಳಿವು. 

ವಿವಿಧ ರಾಜ್ಯಗಳ ಹೈಕೋರ್ಟ್‌ ಪೂರ್ವ ನಿದರ್ಶನಗಳನ್ನು ಪ್ರಸ್ತುತಪಡಿಸಿದ ಸುಘೋಷ್‌, ‘ಏಕಾಂತಯ್ಯ ಅವರಿಗೀಗ 90 ವರ್ಷ. ಅವರು ಮುರುಘಾ ಮಠದಲ್ಲೇ ಓದಿ ಬೆಳೆದವರು. ಮಠದ ಏಳಿಗೆಗಾಗಿ ಸದಾ ಹಂಬಲಿಸುವ ನಿಷ್ಠಾವಂತ ಭಕ್ತ. ಸಚಿವರಾಗಿದ್ದವರು. ಮೇಲಾಗಿ, ಶ್ರೀ ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠದ (ಎಸ್‌ಜೆಎಂ) ಉಪಾಧ್ಯಕ್ಷರಾಗಿದ್ದವರು. ಹೀಗಾಗಿ, ಸುದುದ್ದೇಶದಿಂದ ಈ ಮೇಲ್ಮನವಿ ಸಲ್ಲಿಸಲು ಅರ್ಹರಾಗಿದ್ದಾರೆ, ಮಾತ್ರವಲ್ಲ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸುವ ಅರ್ಹತೆ ಹೊಂದಿದ್ದಾರೆ‘ ಎಂದು ಪ್ರತಿಪಾದಿಸಿದರು.

ಮತ್ತೊಬ್ಬ ಮೇಲ್ಮನವಿದಾರರೂ ಆದ ವಿಧಾನಪರಿಷತ್‌ ಸದಸ್ಯ ಕೆ.ಎಸ್.ನವೀನ್‌ ಪರ ಹಿರಿಯ ವಕೀಲ ಕೆ.ಜಿ.ರಾಘವನ್‌ ಸುದೀರ್ಘ ಮೂರುವರೆ ಗಂಟೆಗಳಿಗೂ ಹೆಚ್ಚು ಕಾಲ ವಾದ ಮಂಡಿಸಿ, ‘ ಆದರೆ, ಮಠದ ಪೀಠಾಧಿಪತಿ ಕಳಂಕಿತರಾಗಿ ಕ್ರಿಮಿನಲ್ ಪ್ರಕರಣದಲ್ಲಿ ಜೈಲು ಸೇರಿರುವ ಕಾರಣ ಸರ್ಕಾರ ಮಠದ ಚರ ಮತ್ತು ಸ್ಥಿರಾಸ್ತಿ ರಕ್ಷಣೆಗೆ ಸೂಕ್ತವಾದ ನಿಲುವು ತೆಗೆದುಕೊಂಡಿತ್ತು. ರಾಜ್ಯದಲ್ಲಿ ಧಾರ್ಮಿಕ ಮಠವೊಂದಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿದ್ದನ್ನು ನಾವು ಸೋಸಲೆ ವ್ಯಾಸರಾಯರ ಮಠದ ಚರಿತ್ರೆಯಲ್ಲಿ ಗಮನಿಸಬಹುದು. ಸಂವಿಧಾನದ 162ನೇ ವಿಧಿಯಡಿ ಸರ್ಕಾರ ಇಂತಹ ಅಧಿಕಾರ ಬಳಕೆ ಮಾಡುವುದು ಸೂಕ್ತವಾಗಿಯೇ ಇದೆ‘ ಎಂದರು.

‘ಸಿವಿಲ್‌ ಪ್ರಕ್ರಿಯಾ ಸಂಹಿತೆ–1908ರ ಕಲಂ 92ರ ಅನುಸಾರ ಅಸಲು ದಾವೆ ಹೂಡಿ ಪರಿಹಾರ ಪಡೆಯಿರಿ ಎಂದು ಏಕಸದಸ್ಯ ನ್ಯಾಯಪೀಠ ಹೇಳಿರುವುದು ಸಮರ್ಥನೀಯವಲ್ಲ. ಕಾನೂನಾತ್ಮಕ ಅಂಶಗಳನ್ನು ಗಮನಿಸಿದಾಗ ಏಕಸದಸ್ಯ ನ್ಯಾಯಪೀಠ  ರಿಟ್ ಅರ್ಜಿಯ ವಿಚಾರಣೆ ನಡೆಸಲು ಸಾಕಷ್ಟು ಸಮಯ ತೆಗೆದುಕೊಂಡಿದೆ. ಆದರೆ, ವಾಸ್ತವವನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಿದೆ. ಹಾಗಾಗಿ, ಏಕಸದಸ್ಯ ನ್ಯಾಯಪೀಠದ ಆದೇಶ ರದ್ದುಪಡಿಸಬೇಕು‘ ಎಂದು ಕೋರಿದರು.

ಬೆಳಗ್ಗೆ 10 ಗಂಟೆಗೇ ವಿಚಾರಣೆ ಆರಂಭಿಸಿದ ನ್ಯಾಯಪೀಠ ದಿನದ ಬೆಳಗಿನ ಕಲಾಪದ ಅವಧಿ ಮುಕ್ತಾಯವಾಗುವತನಕ ನಡೆಸಿತು. ಮಧ್ಯಾಹ್ನ 2.30ಕ್ಕೆ ಪುನಃ ಶಿವಮೂರ್ತಿ ಶರಣರ ಪರ ಹಾಜರಿದ್ದ ಹಿರಿಯ ವಕೀಲ ಜಯಕುಮಾರ್ ಎಸ್‌.ಪಾಟೀಲ್‌ ಅವರ ವಾದ ಆಲಿಕೆ ಮುಂದುವರಿಸುವುದಾಗಿ ತಿಳಿಸಿತು. ಆದರೆ, ಮಧ್ಯಾಹ್ನದ ಕಲಾಪದಲ್ಲಿ ವಿಚಾರಣೆ ಕೈಗೆತ್ತಿಕೊಳ್ಳದೆ ಗುರುವಾರಕ್ಕೆ (ಆ.17) ನಿಗದಿಗೊಳಿಸಿ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT