ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯ ಪುಸ್ತಕ ಪರಿಷ್ಕರಣೆ| ಮೈಸೂರು ಒಡೆಯರ್‌ ಪಠ್ಯಗಳಿಗೂ ಕತ್ತರಿ!

ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್‌ ಸೇರಿದಂತೆ ಆರು ಪುಟ ಕೈಬಿಟ್ಟ ಚಕ್ರತೀರ್ಥ ಸಮಿತಿ
Last Updated 21 ಜೂನ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ 7ನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರಲ್ಲಿರುವ ‘ಮೈಸೂರು ಒಡೆಯರ್’ ಪಾಠದಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್, 10ನೇ ಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಆಗ ದಿವಾನರಾಗಿದ್ದಸರ್.ಎಂ. ವಿಶ್ವೇಶ್ವರಯ್ಯ, ಸರ್. ಮಿರ್ಜಾ ಇಸ್ಮಾಯಿಲ್ ಹಾಗೂ ಕಮಿಷನರ್‌ಗಳಾದ ಮಾರ್ಕ್ ಕಬ್ಬನ್, ಎಲ್.ಬಿ. ಬೌರಿಂಗ್ ಅವರ ಪಠ್ಯಗಳನ್ನೂ ಕೈಬಿಟ್ಟಿದೆ!

ಟಿಪ್ಪು ವ್ಯಕ್ತಿತ್ವ ಮತ್ತು ಸಾಧನೆಯಿಂದ ಮಿರ್ಜಾ ಇಸ್ಮಾಯಿಲ್‌ವರೆಗಿನ ಸುಮಾರು ಆರು ಪುಟಗಳ ಪಠ್ಯವನ್ನು ಚಕ್ರತೀರ್ಥ ಸಮಿತಿ ಕೈಬಿಟ್ಟಿದೆ. ಆ ಪಾಠದಲ್ಲಿ ಮೈಸೂರಿನ ಇತಿಹಾಸದಲ್ಲಿ 19ನೇ ಶತಮಾನದ ಆರಂಭದಿಂದ 20‌ನೇ ಶತಮಾನದ ಮಧ್ಯಂತರದವರೆಗೆ ಪ್ರಮುಖ ಪಾತ್ರ ವಹಿಸಿದ ಪ್ರಮುಖರ ಪರಿಚಯ ನೀಡಲಾಗಿತ್ತು. ಜೊತೆಗೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಮತ್ತು ಸಾಧನೆಗಳನ್ನೂ ಪರಿಚಯಿಸಲಾಗಿತ್ತು‌. ಅಷ್ಟೂ ಭಾಗಕ್ಕೆ ಕತ್ತರಿ ಹಾಕಲಾಗಿದೆ. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯು ಪರಿಷ್ಕರಿಸಿದ್ದ ಪಠ್ಯದಲ್ಲಿ ಈ ಭಾಗ ಇತ್ತು.

‘ಬರಗೂರು ನೇತೃತ್ವದ ಸಮಿತಿ ಮೈಸೂರು ಒಡೆಯರ್ ಕುರಿತು ಹೆಚ್ಚಿನ ಸ್ಥಳಾವಕಾಶ ನೀಡದೆ, ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಚರಿತ್ರೆಗೆ ಆದ್ಯತೆ ನೀಡಿತ್ತು’ ಎಂದು ಈ ಹಿಂದೆ ಶಿಕ್ಷಣ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಕುರಿತ ವೈಭವೀಕರಣವಿದೆ ಎಂದು
ಕತ್ತರಿ ಪ್ರಯೋಗಿಸಲು ಹೋಗಿರುವ ಚಕ್ರತೀರ್ಥ ಸಮಿತಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಮುಖ ಸಾಧನೆಗಳನ್ನು ಕುರಿತು ಸುಮಾರು ಎರಡು ಪುಟಗಳ ವಿವರಗಳೂ ಸೇರಿದಂತೆ ಮೈಸೂರು ಒಡೆಯರ್ ಕಾಲಘಟ್ಟದ ಇತಿಹಾಸವನ್ನು ತೆಗೆದುಹಾಕಿದೆ.

ಮಹಾತ್ಮ ಗಾಂಧಿಯವರಿಂದ 'ರಾಜರ್ಷಿ' ಎಂದು ಕರೆಸಿಕೊಂಡ ನಾಲ್ವಡಿಯವರು ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣ ಮಾಡಿದ್ದನ್ನು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದ್ದನ್ನು, ಮೊದಲ ಬಾರಿಗೆ ಮಹಿಳೆ ಯರಿಗೆ ಮತದಾನದ ಹಕ್ಕು ನೀಡಿದ್ದನ್ನೂ ಒಳಗೊಂಡಂತೆ ಶಿಕ್ಷಣ, ಸಾಹಿತ್ಯ, ಕೈಗಾರಿಕೆ, ಬ್ಯಾಂಕ್ ಮುಂತಾದ ಕ್ಷೇತ್ರಗಳ ಪ್ರಗತಿಗೆ ಕಾರಣವಾದದ್ದನ್ನು ಬರಗೂರು ನೇತೃತ್ವದ ಪಠ್ಯಪುಸ್ತಕದಲ್ಲಿ ವಿವರಿಸಲಾ ಗಿತ್ತು. ಚಕ್ರತೀರ್ಥ ಸಮಿತಿಯು ಈ ಎಲ್ಲ ವಿವರಗಳನ್ನೂ ಕೈಬಿಟ್ಟಿದೆ. ಅಷ್ಟೇ ಅಲ್ಲದೆ, ವಿಶ್ವೇಶ್ವರಯ್ಯನವರನ್ನು
ಕುರಿತ ವಿವರಗಳಿಗೂ ಕತ್ತರಿ ಹಾಕಿದೆ. ಇದೇ ಗತಿ ಮಿರ್ಜಾ ಇಸ್ಮಾಯಿಲ್ ಅವರ ಪಠ್ಯಕ್ಕೂ ಒದಗಿದೆ.

7ನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರಲ್ಲಿದ್ದ 'ಭಕ್ತಿ ಪಂಥ ಮತ್ತು ಸೂಫಿ ಪರಂಪರೆ 'ಎಂಬ ಪಾಠದಿಂದ ಅಕ್ಕಮಹಾದೇವಿ, ಶಿಶುನಾಳ ಶರೀಫರು, ಕನಕದಾಸರು ಮತ್ತು ಪುರಂದರದಾಸರನ್ನು ಕುರಿತ ಎಲ್ಲ ವಿವರಗಳನ್ನೂ ತೆಗೆದುಹಾಕಲಾಗಿದೆ. ಉತ್ತರ ಭಾರತದವರನ್ನು ಮಾತ್ರ ಉಳಿಸಿಕೊಂಡು ಕರ್ನಾಟಕದ ಅಸ್ಮಿತೆಗೆ ಧಕ್ಕೆ ತರಲಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ. ಆರನೇ ತರಗತಿಯ ಸಮಾಜ ವಿಜ್ಞಾನ ಭಾಗ–1ರಲ್ಲಿ ಬರಗೂರು ಸಮಿತಿಯು ಚಂದ್ರಗುಪ್ತ ಮೌರ್ಯನನ್ನು ಕುರಿತು ನೀಡಿದ್ದ ಅಂಶಗಳನ್ನು ತಿರುಚಿ, ಚಕ್ರತೀರ್ಥ ಸಮಿತಿ ಚಾಣಕ್ಯನನ್ನು ವೈಭವೀಕರಿಸಿದೆ ಎಂಬ ಟೀಕೆ ವ್ಯಕ್ತವಾಗಿದೆ.

ಕಯ್ಯಾರರ ಬದಲು ‘ಪೈ’!

7ನೇ ತರಗತಿಯ ಸಮಾಜ ವಿಜ್ಞಾನ ಭಾಗ– 2ರಲ್ಲಿ ‘ಕರ್ನಾಟಕ ಏಕೀಕರಣ ಹಾಗೂ ಗಡಿ ವಿವಾದಗಳು’ ಪಾಠದಲ್ಲಿ ‘ಕಯ್ಯಾರ ಕಿಞ್ಞಣ್ಣ ರೈ ಅವರು ಕರ್ನಾಟಕದಲ್ಲಿ ಕಾಸರಗೋಡು ವಿಲೀನಗೊಳ್ಳಬೇಕೆಂದು ಕೊನೆಯವರೆಗೂ ಹೋರಾಡಿದರು’ ಎಂದಿತ್ತು. ಚಕ್ರತೀರ್ಥ ಸಮಿತಿಯು ಈ ವಾಕ್ಯವನ್ನು ‘ಕನ್ನಡದ ಮೊದಲ ‘ರಾಷ್ಟ್ರಕವಿ’ ಮಂಜೇಶ್ವರ ಗೋವಿಂದ ಪೈ ಅವರು ಕರ್ನಾಟಕದಲ್ಲಿ ಕಾಸರಗೋಡು ವಿಲೀನಗೊಳ್ಳಬೇಕೆಂದು ಕೊನೆಯವರೆಗೂ ಹೋರಾಡಿದರು’ ಎಂದು ಬದಲಿಸಿದೆ.

ಕರ್ನಾಟಕ ಏಕೀಕರಣಕ್ಕೆ ಪೈ ಅವರ ಪ್ರಯತ್ನ ಇದ್ದರೂ, ರೈ ಅವರ ವಿಷಯ ತೆಗೆದು ಪೈ ಅವರ ವಿಷಯ ಸೇರಿಸುವ ಅಗತ್ಯವಿರಲಿಲ್ಲ. ಏಕೆಂದರೆ, ಏಕೀಕರಣದ ಹೋರಾಟದಲ್ಲಿ ಕಯ್ಯಾರ ಕಿಞ್ಞಣ್ಣ ರೈ ಅವರ ಪಾತ್ರ ಹಿರಿದಾಗಿದ್ದು, ಅವರ ಹೆಸರನ್ನು ಕೈಬಿಟ್ಟಿರುವುದಕ್ಕೆ ಆಕ್ಷೇಪಗಳು ಕೇಳಿಬಂದಿವೆ.


ಟಿಪ್ಪು ಕುರಿತು ತಿರುಚಿದ ಮಾಹಿತಿ

ಬರಗೂರು ಸಮಿತಿ ಪರಿಷ್ಕರಿಸಿದ್ದ ಪಠ್ಯದಲ್ಲಿ ‘ಟಿಪ್ಪು ಸಹಾಯಕ್ಕೆ ಯಾರೂ ಬರಲಿಲ್ಲವಾದರೂ ಏಕಾಂಗಿಯಾಗಿ ಬ್ರಿಟಿಷರನ್ನು ಎದುರಿಸಿದನು. ಅಂತಿಮವಾಗಿ ಬ್ರಿಟಿಷರು ಮಂಗಳೂರು ಒಪ್ಪಂದ ಮಾಡಿಕೊಂಡರು’ ಎಂದು ಇದೆ. ಆದರೆ, ಚಕ್ರತೀರ್ಥ ಸಮಿತಿ ‘ಟಿಪ್ಪು ಏಕಾಂಗಿಯಾಗಿ ಬ್ರಿಟಿಷರನ್ನು ಎದುರಿಸಲಾಗದೆ ಮಂಗಳೂರು ಒಪ್ಪಂದ ಮಾಡಿಕೊಂಡನು’ ಎಂದು ಇತಿಹಾಸವನ್ನೇ ತಿರುಚಿದೆ ಎಂಬ ಆರೋಪ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT