ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಪ್ರಭು ಕೆಂಪೇಗೌಡ ಬಡಾವಣೆ: ಬಿಡಿಎ ಮೇಲ್ಮನವಿ ಪುರಸ್ಕರಿಸಿದ ಹೈಕೋರ್ಟ್‌

Published 23 ಫೆಬ್ರುವರಿ 2024, 1:13 IST
Last Updated 23 ಫೆಬ್ರುವರಿ 2024, 1:13 IST
ಅಕ್ಷರ ಗಾತ್ರ

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕಾಗಿ 12 ಗ್ರಾಮಗಳಲ್ಲಿ ಸುಮಾರು 4,043 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್‌ ‍ಎತ್ತಿಹಿಡಿದಿದೆ.

ಈ ಸಂಬಂಧ ಬಿಡಿಎ ಮತ್ತು 140ಕ್ಕೂ ಹೆಚ್ಚು ಪ್ರತ್ಯೇಕ ಅರ್ಜಿದಾರರು ಸಲ್ಲಿಸಿದ್ದ ಮೇಲ್ಮನವಿಗಳನ್ನು ಮುಖ್ಯ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್‌ ಹಾಗೂ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಪುರಸ್ಕರಿಸಿದೆ. 

‘ಅಧಿಸೂಚನೆಯಲ್ಲಿ ಸ್ವಾಧೀನಕ್ಕೆ ಗುರುತಿಸಲಾಗಿದ್ದ ಜಾಗದಲ್ಲಿ ನರ್ಸರಿ ಅಭಿವೃದ್ಧಿಯಾಗಿರುವುದು ಹಾಗೂ ಕಟ್ಟಡ ನಿರ್ಮಾಣವಾಗಿರುವುದೂ ಸೇರಿದಂತೆ ಇತರೆ ಕಾರಣಗಳಿಂದ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಬೇಕು ಎಂಬ ಬಗ್ಗೆ ಯಾರದಾದರೂ ಮನವಿ ಇದ್ದರೆ, ಅಂತಹ ಭೂ ಮಾಲೀಕರು ಮೂರು ತಿಂಗಳಲ್ಲಿ ಬಿಡಿಎಗೆ ಮನವಿ ಸಲ್ಲಿಸಬೇಕು. ಅಂತಹ ಮನವಿಗಳನ್ನು ಕಾನೂನು ಪ್ರಕಾರ ವಿಚಾರಣೆ ನಡೆಸಿ ಸೂಕ್ತ ಆದೇಶ ಹೊರಡಿಸಬೇಕು’ ಎಂದು ನ್ಯಾಯಪೀಠ ಬಿಡಿಎಗೆ ಆದೇಶಿಸಿದೆ.

‘ಸರ್ಕಾರದಿಂದ ಪೂರ್ವಾನುಮತಿ ಪಡೆಯದೇ ಇರುವುದೂ ಸೇರಿದಂತೆ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ನಿಯಮಗಳ ಪಾಲನೆ ಮಾಡಿಲ್ಲ. ಭೂ ಸ್ವಾಧೀನದಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ. ಹಾಗಾಗಿ, ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕಾಗಿ ನಡೆಸಿರುವ ಭೂ ಸ್ವಾಧೀನ ಪ್ರಕ್ರಿಯೆ ಕಾನೂನು ಬಾಹಿರವಾಗಿದೆ’ ಎಂದು ಇದೇ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ತೀರ್ಮಾನಿಸಿತ್ತು. ಭೂ ಸ್ವಾಧೀನಕ್ಕೆ ಹೊರಡಿಸಿದ್ದ ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆಯನ್ನು ರದ್ದುಪಡಿಸಿ 2014ರ ಜುಲೈ 11ರಂದು ಆದೇಶಿಸಿತ್ತು.

ಇದೀಗ ಈ ತೀರ್ಪನ್ನು ರದ್ದುಪಡಿಸಿರುವ ವಿಭಾಗೀಯ ನ್ಯಾಯಪೀಠವು ಭೂ ಸ್ವಾಧೀನ ಅಧಿಸೂಚನೆಯನ್ನು ಪುರಸ್ಕರಿಸಿದೆ. ಬಿಡಿಎ ಪರವಾಗಿ ಹಿರಿಯ ವಕೀಲ ಗುರುದಾಸ್‌ ಕಣ್ಣೂರು, ಬಿ.ವಚನ್‌, ಮುರುಗೇಶ್ ವಿ.ಚರಾಟಿ, ಕೆ.ಕೃಷ್ಣ, ಜಿ.ಲಕ್ಷ್ಮೀಶ ರಾವ್, ಗೌತಮ ಉಲ್ಲಾಳ್‌ ಮತ್ತು ಅಜಯಕುಮಾರ್ ಅವರ ತಂಡ ವಾದ ಮಂಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT