ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷರತ್ತು ಪಾಲನೆ ಪರಿಶೀಲನೆಗೆ ಐಐಎಂ–ಬಿ: ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್‌ ಆದೇಶ

Last Updated 31 ಮಾರ್ಚ್ 2021, 16:35 IST
ಅಕ್ಷರ ಗಾತ್ರ

ಬೆಂಗಳೂರು: ನಮ್ಮ ಮೆಟ್ರೊ ರೈಲು ಯೋಜನೆಗೆ ಕೇಂದ್ರ ಸರ್ಕಾರ ವಿಧಿಸಿದ್ದ ಷರತ್ತುಗಳನ್ನು ಪಾಲಿಸಿರುವುದಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ, ವರದಿಯೊಂದನ್ನು ಸಿದ್ಧಪಡಿಸಲು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌– ಬೆಂಗಳೂರು (ಐಐಎಂಬಿ) ಸಂಸ್ಥೆಯನ್ನು ನೇಮಕ ಮಾಡುವಂತೆ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) ಹೈಕೋರ್ಟ್‌ ಆದೇಶಿಸಿದೆ.

ಡಿ.ಟಿ. ದೇವರೆ ಮತ್ತು ಬೆಂಗಳೂರು ಪರಿಸರ ಟ್ರಸ್ಟ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠ, ಬುಧವಾರ ಈ ಆದೇಶ ನೀಡಿದೆ. ಈ ಸಂಬಂಧ ಕರಡು ಮಾರ್ಗಸೂಚಿಗಳನ್ನು ಏಪ್ರಿಲ್‌ 8ರೊಳಗೆ ಸಲ್ಲಿಸುವಂತೆಯೂ ನ್ಯಾಯಾಲಯ ಐಐಎಂ–ಬಿಗೆ ಸೂಚಿಸಿದೆ.

ನಮ್ಮ ಮೆಟ್ರೊ ಮೊದಲನೇ ಹಂತಕ್ಕೆ 2006 ಮೇ 11ರಂದು ಮಂಜೂರಾತಿ ನೀಡಿದ್ದು, 2010ರ ಡಿಸೆಂಬರ್‌ 24ರಂದು ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಎರಡನೇ ಹಂತದ ಕಾಮಗಾರಿಗೆ 2014ರ ಫೆಬ್ರುವರಿ 21ರಂದು ಮಂಜೂರಾತಿ ನೀಡಿದ್ದು, 2017ರ ಫೆಬ್ರುವರಿ 24ರಂದು ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಈ ಒಪ್ಪಂದಗಳಲ್ಲಿ ವಿಧಿಸಿದ್ದ ಷರತ್ತಿನಂತೆ ಸಮಗ್ರ ಸಾರಿಗೆ ಯೋಜನೆ ಮತ್ತು ಸಂಚಾರ ವ್ಯವಸ್ಥೆಯ ಸುಧಾರಣೆ ಕುರಿತು ಯೋಜನೆಗಳನ್ನು ರೂಪಿಸುವಂತೆ ಆದೇಶಿಸಲು ಅರ್ಜಿದಾರರು ಮನವಿ ಮಾಡಿದ್ದಾರೆ.

‘ನಮ್ಮ ಮೆಟ್ರೊ ಮೊದಲನೇ ಮತ್ತು ಎರಡನೇ ಹಂತಗಳ ಕಾಮಗಾರಿಗೆ ಮಂಜೂರಾತಿ ನೀಡಿರುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಒದಗಿಸಿರುವ ದಾಖಲೆಗಳನ್ನು ಐಐಎಂ–ಬಿ ಪರಿಶೀಲನೆ ನಡೆಸಬೇಕು. ಬಿಎಂಆರ್‌ಸಿಎಲ್‌ ಹಾಗೂ ರಾಜ್ಯ ಸರ್ಕಾರದ ಬಳಿ ಇರುವ ದಾಖಲೆಗಳನ್ನೂ ಪರಿಶೀಲಿಸಬೇಕು. ಪೂರ್ಣಗೊಂಡಿರುವ ಕಾಮಗಾರಿಗಳನ್ನೂ ತಪಾಸಣೆ ನಡೆಸಬೇಕು. ಒಪ್ಪಂದಗಳಲ್ಲಿರುವ ಷರತ್ತುಗಳ ಅನುಸಾರ ಕ್ರಮ ಕೈಗೊಂಡಿರುವ ಕುರಿತು ಐಐಎಂ–ಬಿ ವರದಿ ಸಲ್ಲಿಸಬೇಕು. ಈ ವಿಷಯದಲ್ಲಿ ರಾಜ್ಯ ಸರ್ಕಾರ ಮತ್ತು ಬಿಎಂಆರ್‌ಸಿಎಲ್‌ ತಮ್ಮ ಹೊಣೆಯನ್ನು ನಿರ್ವಹಿಸಿರುವ ಬಗ್ಗೆಯೂ ಮಾಹಿತಿ ನೀಡಬೇಕು’ ಎಂದು ಹೈಕೋರ್ಟ್‌ ಸೂಚಿಸಿದೆ.

ಒಪ್ಪಂದದ ಷರತ್ತುಗಳನ್ನು ಪಾಲನೆ ಮಾಡಲಾಗುತ್ತಿದೆ ಎಂದು ಹಿಂದಿನ ವಿಚಾರಣೆ ವೇಳೆ ತಿಳಿಸಿದ್ದ ರಾಜ್ಯ ಸರ್ಕಾರ, ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರವನ್ನು ರಚಿಸಿ 2020ರ ಸೆಪ್ಟೆಂಬರ್‌ 29ರಂದು ಹೊರಡಿಸಿದ್ದ ಆದೇಶದ ಪ್ರತಿಯನ್ನು ಸಲ್ಲಿಸಿತ್ತು. ಆದರೆ, ಸಂಚಾರ ವ್ಯವಸ್ಥೆಯ ಸುಧಾರಣೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ ಎಂದು ನ್ಯಾಯಪೀಠ ಪ್ರತಿಕ್ರಿಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT