ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ಭದ್ರತೆಗೆ ಹೊಡೆತ; ಲಾಕ್‌ಡೌನ್‌ ನಿರ್ವಹಣೆಗೆ ರೈತರ ಅತೃಪ್ತಿ: ಸಮೀಕ್ಷೆ

Last Updated 21 ಸೆಪ್ಟೆಂಬರ್ 2021, 23:01 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ವರ್ಷ ದೇಶದಾದ್ಯಂತ ಹೇರಿದ್ದ ಕೋವಿಡ್‌ ಲಾಕ್‌ಡೌನ್‌ನಿಂದಾಗಿ, ಕರ್ನಾಟಕದ ರೈತರ ಆರೋಗ್ಯಕ್ಕಿಂತ ಹೆಚ್ಚಾಗಿ ಆದಾಯ ಗಳಿಕೆ ಹಾಗೂ ಜೀವನ ಭದ್ರತೆಗೆ ಹೊಡೆತ ಬಿದ್ದಿದೆ ಎಂದು ರೈತ ಸಮೀಕ್ಷಾ ವರದಿಯೊಂದು ಹೇಳಿದೆ.‌

ಲಾಕ್‌ಡೌನ್‌ ಅವಧಿಯಲ್ಲಿ ಪ್ರಮುಖ ಕಾಯ್ದೆಗಳಿಗೆ ಸಂಬಂಧಿಸಿ ಸುಗ್ರೀವಾಜ್ಞೆ ಹೊರಡಿಸಿದ್ದಕ್ಕೆ ಬಹುತೇಕ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೈತರೊಂದಿಗೆ ಚರ್ಚೆ ನಡೆಸದೇ ಕೈಗೊಂಡ ಕ್ರಮಕ್ಕೆ ಜಾತಿ, ಪ್ರದೇಶ ಮೀರಿ ರಾಜ್ಯದ ಯುವ ರೈತರಲ್ಲಿ ಆಕ್ಷೇಪ ವ್ಯಕ್ತವಾಗಿದೆ ಎಂದು ಸಮೀಕ್ಷಾ ವರದಿ ಹೇಳಿದೆ.

ಲಾಕ್‌ಡೌನ್‌ನಿಂದ ರೈತರ ಬದುಕಿನ ಮೇಲೆ ಆದ ಪರಿಣಾಮಗಳ ಬಗ್ಗೆ ಕೃಷಿ ಆರ್ಥಿಕ ತಜ್ಞ, ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಎನ್‌. ಪ್ರಕಾಶ್‌ ಕಮ್ಮರಡಿ ನೇತೃತ್ವದ ಅಧ್ಯಯನ ತಂಡವು ಕರ್ನಾಟಕದ ರೈತರ ಸ್ಥಿತಿಯ ಬಗ್ಗೆ ಸಮೀಕ್ಷೆ ನಡೆಸಿತ್ತು.

ಲಾಕ್‌ಡೌನ್‌ ಹೊಡೆತದಿಂದ ಶ್ರಮಿಕರು, ಬಡವರು, ರೈತರು ಹಾಗೂ ದುಡಿಯುವ ವರ್ಗದವರು ಇನ್ನೂ ಹೊರಬಂದಿಲ್ಲ. ವಿಶೇಷವಾಗಿ ರೈತ ಸಮುದಾಯದಲ್ಲಿ ಅವರ ಆರೋಗ್ಯಕ್ಕಿಂತ ಹೆಚ್ಚಾಗಿ ಅವರ ಆದಾಯ ಮತ್ತು ಜೀವನ ಭದ್ರತೆಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ಅಧ್ಯಯನ ವರದಿ ಹೇಳಿದೆ.

ಲಾಕ್‌ಡೌನ್‌ ಹೊಡೆತದಿಂದ ನಲುಗಿದ ಕರ್ನಾಟಕದ ರೈತರ ಬವಣೆ ಅರಿಯಲು ಈ ತಂಡವು, 2020–21ರ ಮುಂಗಾರಿಗೆ ಮುನ್ನ ಸಮೀಕ್ಷೆ ನಡೆಸಿತ್ತು.

ರಾಜ್ಯದ 30 ಜಿಲ್ಲೆಗಳಲ್ಲಿನ 128 ತಾಲ್ಲೂಕುಗಳಿಂದ 1285 ರೈತರ ಅಭಿಪ್ರಾಯ ಸಂಗ್ರಹಿಸಲಾಗಿದೆ.

ಹಿಡುವಳಿ ಗಾತ್ರ, ನೀರಾವರಿ ಮೂಲ, ಪ್ರಾದೇಶಿಕ ಹಿನ್ನೆಲೆ, ವಯಸ್ಸು–ವಿದ್ಯಾರ್ಹತೆ ಹಾಗೂ ಜಾತಿ ಮತ್ತು ಧರ್ಮದ ಆಧಾರದಲ್ಲಿ ರೈತರನ್ನು ಸಮೀಕ್ಷೆಗೆ ಆಯ್ದುಕೊಳ್ಳಲಾಗಿದೆ. ರೈತರಿಂದ ದೂರವಾಣಿ ಮೂಲಕ ಮಾಹಿತಿ ಪಡೆಯಲಾಗಿದೆ ಎಂದು ಪ್ರಕಾಶ್‌ ಕಮ್ಮರಡಿ ತಿಳಿಸಿದ್ದಾರೆ.

ಕರ್ನಾಟಕದ ರೈತರ ಸಾಮಾಜಿಕ–ಆರ್ಥಿಕ ಸ್ಥಿತಿ, ಲಾಕ್‌ಡೌನ್‌ ಸಂದರ್ಭದಲ್ಲಿ ಸರ್ಕಾರದಿಂದ ಸಿಕ್ಕ ಬೆಂಬಲ ಮತ್ತು ಸಾಮಾಜಿಕ ಭದ್ರತೆ, ಕೋವಿಡ್‌ ಮತ್ತು ಲಾಕ್‌ಡೌನ್‌ ಬಗ್ಗೆ ರೈತರ ಗ್ರಹಿಕೆ, ಲಾಕ್‌ಡೌನ್‌ ಸಂದರ್ಭದಲ್ಲಿನ ಯೋಜನೆಗಳ ಬಗ್ಗೆ ರೈತರ ಪ್ರತಿಕ್ರಿಯೆ, ಕೃಷಿ ಮುಂದುವರಿಸುವ ಬಗ್ಗೆ ಸಿದ್ಧತೆ ಹಾಗೂ ಷರತ್ತುಗಳ ಬಗ್ಗೆ ಆಯ್ದ ಪ್ರಶ್ನೆಗಳಿಗೆ ರೈತರು ಉತ್ತರಿಸಿದ್ದಾರೆ.

ಕೋವಿಡ್‌ ಲಾಕ್‌ಡೌನ್‌ನಿಂದಾಗಿ ತಮ್ಮ ಆದಾಯ ಗಳಿಕೆಗೆ ಹೊಡೆತ ಬಿದ್ದಿದೆ ಎಂದು ಶೇ 84ರಷ್ಟು ರೈತರು ಹೇಳಿದರೆ, ಶೇ 4ರಷ್ಟು ರೈತರು ಮಾತ್ರ ತಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದಿದ್ದಾರೆ.

ಆ ಸಂದರ್ಭದಲ್ಲಿ ಸರ್ಕಾರವು ಇತರ ದುಡಿಯುವ ವರ್ಗಕ್ಕೆ ನೀಡಿದಷ್ಟು ಗಮನವನ್ನು ತಮಗೆ ನೀಡಲಿಲ್ಲ ಎಂದು ಒಕ್ಕಲಿಗ ಸಮುದಾಯದ ಶೇ 60ರಷ್ಟು ರೈತರು ಹೇಳಿದರೆ, ಲಿಂಗಾಯತ ಹಾಗೂ ಬ್ರಾಹ್ಮಣ ಸಮುದಾಯ ರೈತರು (ಶೇ 54 ) ಹಾಗೂ ಮಲೆನಾಡು–ಕರಾವಳಿ ಭಾಗದ ರೈತರು (ಶೇ 57ರಷ್ಟು ) ರಾಜ್ಯದಲ್ಲಿ ಕೋವಿಡ್‌ ಪರಿಸ್ಥಿತಿಯನ್ನು ನಿರ್ವಹಿಸಿದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಶೇ 17ರಷ್ಟು ರೈತರು ಬೆಳೆ ಹಾನಿಗೆ ಪರಿಹಾರ ಪಡೆದಿದ್ದಾರೆ. ಮೊದಲ ಲಾಕ್‌ಡೌನ್‌ ಸಂದರ್ಭದಲ್ಲಿ ಶೇ 16ರಷ್ಟು ರೈತರಿಂದ ಮಾತ್ರ ಕೃಷಿ ಉತ್ಪನ್ನ ಖರೀದಿಸಲಾಗಿದೆ.

ಬೆಳೆವಿಮೆ ಸೌಲಭ್ಯ ಪಡೆದವರು ಶೇ 20ರಷ್ಟು ಇದ್ದರೆ, ಅಧ್ಯಯನಕ್ಕೆ ಆಯ್ದುಕೊಂಡ ರೈತರ ಪೈಕಿ ಶೇ 55 ರಷ್ಟು ರೈತರು ಪ್ರಧಾನಮಂತ್ರಿ–ಕಿಸಾನ್‌ ಯೋಜನೆಯ ಪ್ರಯೋಜನ ಪಡೆದಿದ್ದಾರೆ.

ನರೇಗಾ ಅಡಿಯಲ್ಲಿ ಕೆಲಸ ಪಡೆದವರ ಸಂಖ್ಯೆ ಶೇ 23. ಇತರ ವರ್ಗದ ರೈತರಿಗೆ ಹೋಲಿಸಿದರೆ ಈ ಬಡ ರೈತರಿಗೆ ಇದರ ಸೌಲಭ್ಯ ಅಷ್ಟಾಗಿ ಸಿಕ್ಕಿಲ್ಲ.

ಸಾಮಾಜಿಕ ಭದ್ರತೆಯ ಇತರ ಯೋಜನೆಗಳಿಗಿಂತ ರೈತರಿಗೆ ಉಚಿತವಾಗಿ ಪಡಿತರ ವಿತರಿಸಿದ್ದು ನೆರವಾಗಿದೆ. ಶೇ 76ರಷ್ಟು ರೈತರು ಇದರ ಪ್ರಯೋಜನ ಪಡೆದಿದ್ದಾರೆ.ಪಿಎಂ–ಕಿಸಾನ್‌ ನಿಧಿ ನೆರವು ಹಾಗೂ ಪಡಿತರ ವಿತರಣೆ ಹೊರತುಪಡಿಸಿದರೆ ಉಳಿದಂತೆ ಸಾಮಾಜಿಕ ಭದ್ರತೆಗಾಗಿನಯಾವುದೇ ಕಾರ್ಯಕ್ರಮದ ಬಗ್ಗೆ ರೈತರು ಸಮಾಧಾನ ವ್ಯಕ್ತಪಡಿಸಿಲ್ಲ.

ಲಾಕ್‌ಡೌನ್‌ ಸಂದರ್ಭದಲ್ಲಿ ಹೊಸ ಕೃಷಿ ಕಾಯ್ದೆಗಳನ್ನು ರೂಪಿಸುವುದರೊಂದಿಗೆ ಎಪಿಎಂಸಿ, ಭೂಸುಧಾರಣೆ ಹಾಗೂ ವಿದ್ಯುತ್‌ ಕಾಯ್ದೆ ತಿದ್ದುಪಡಿಗಾಗಿ ಸುಗ್ರೀವಾಜ್ಞೆ ಹೊರಡಿಸಿದ್ದಕ್ಕೆ ಶೇ 60 ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮೀಕ್ಷೆಗೆ ಆಯ್ದುಕೊಂಡ ರೈತರ ಪೈಕಿ ಅರ್ಧದಷ್ಟು ಜನರು ಮಾತ್ರ ಕೃಷಿಯಲ್ಲಿ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಪ್ರದೇಶ; ಸಮೀಕ್ಷೆಗೆ ಆಯ್ದುಕೊಂಡ ರೈತರ ಪ್ರಮಾಣ
ಮಧ್ಯ ಕರ್ನಾಟಕ; ಶೇ 17.6
ಕಲ್ಯಾಣ ಕರ್ನಾಟಕ; ಶೇ 20.7
ಮಲೆನಾಡು ಮತ್ತು ಕರಾವಳಿ; ಶೇ 24.7
ಮುಂಬೈ ಕರ್ನಾಟಕ; ಶೇ 10.5
ಹಳೆ ಮೈಸೂರು; ಶೇ 26.5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT