ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ– ನಟಿಯರ ನಶೆಗೆ ‘ಗಾಂಜಾ ಮೊಗ್ಗು’ !

ಎನ್‌ಸಿಬಿ ಅಧಿಕಾರಿಗಳ ಬಲೆಗೆ ರೆಸಾರ್ಟ್ ಚಾಲಕ | ಅಮೆರಿಕ– ಕೆನಡಾದಿಂದ ಬರುತ್ತಿದ್ದ ಡ್ರಗ್
Last Updated 1 ಸೆಪ್ಟೆಂಬರ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ನಡೆಯುತ್ತಿದೆ ಎನ್ನಲಾದ ಡ್ರಗ್ ದಂಧೆ ಬಗ್ಗೆ ಎನ್‌ಸಿಬಿ ಹಾಗೂ ಸಿಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿರುವ ಬೆನ್ನಲ್ಲೇ, ಕೆಲ ನಟ–ನಟಿಯರು ನಶೆ ಏರಿಸಿಕೊಳ್ಳಲು ‘ಗಾಂಜಾ ಮೊಗ್ಗು’ ಖರೀದಿಸುತ್ತಿದ್ದ ಸಂಗತಿ ಹೊರಬಿದ್ದಿದೆ.

ಅಮೆರಿಕ, ಕೆನಡಾದಿಂದ ಗಾಂಜಾ ಮೊಗ್ಗು ಆಮದು ಮಾಡಿಕೊಂಡು ಮುಂಬೈ ಹಾಗೂ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಎನ್‌ಸಿಬಿ ಅಧಿಕಾರಿಗಳು ಭೇದಿಸಿದ್ದು, ಮೂರುವರೆ ಕೆ.ಜಿ ಗಾಂಜಾ ಮೊಗ್ಗು ಜಪ್ತಿ ಮಾಡಿದ್ದಾರೆ.

ಜಾಲದಲ್ಲಿದ್ದ ಪ್ರಮುಖ ಆರೋಪಿ ಕೊಲ್ಕತ್ತಾದ ಎಫ್‌. ಅಹ್ಮದ್ ಎಂಬಾತನನ್ನು ಬಂಧಿಸಲಾಗಿದೆ. ರೆಸಾರ್ಟ್‌ವೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಹ್ಮದ್, ಸ್ಯಾಂಡಲ್‌ವುಡ್‌ನಲ್ಲಿರುವ ಕೆಲ ನಟ–ನಟಿಯರಿಗೆ ಗಾಂಜಾ ಮೊಗ್ಗು ಸರಬರಾಜು ಮಾಡುತ್ತಿದ್ದ. ಈ ಬಗ್ಗೆ ಅಧಿಕಾರಿಗಳ ಎದುರು ಆತ ತಪ್ಪೊಪ್ಪಿಕೊಂಡಿದ್ದಾನೆ.

‘ನಶೆ ಏರಿಸಿಕೊಳ್ಳಲು ಗಾಂಜಾ ಮೊಗ್ಗಿಗೆ ಮುಂಬೈ ಹಾಗೂ ಬೆಂಗಳೂರಿನಲ್ಲಿ ಬೇಡಿಕೆ ಹೆಚ್ಚಿದೆ. ಆರೋಪಿಗಳು ವ್ಯವಸ್ಥಿತವಾಗಿ ಗಾಂಜಾ ಮೊಗ್ಗು ಸರಬರಾಜು ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಲಾಯಿತು’ ಎಂದು ಎನ್‌ಸಿಬಿಯ ಉಪ ನಿರ್ದೇಶಕ ಕೆ.ಪಿ.ಎಸ್. ಮಲ್ಹೋತ್ರಾ ತಿಳಿಸಿದರು.

‘ವಿದೇಶದಲ್ಲಿರುವ ಡ್ರಗ್ ಪೆಡ್ಲರ್‌ಗಳನ್ನು ಡಾರ್ಕ್‌ನೆಟ್ ಮೂಲಕ ಸಂಪರ್ಕಿಸುತ್ತಿದ್ದ ಆರೋಪಿಗಳು, ಅಂಚೆ ಮೂಲಕ ಗಾಂಜಾ ಮೊಗ್ಗುಗಳನ್ನು ಮುಂಬೈಗೆ ತರಿಸಿಕೊಳ್ಳುತ್ತಿದ್ದರು. ಅಂಚೆ ಹಾಗೂ ಕೊರಿಯರ್ ಮೂಲಕ ಗ್ರಾಹಕರ ವಿಳಾಸಕ್ಕೆ ಮೊಗ್ಗು ಕಳುಹಿಸುತ್ತಿದ್ದರು. ಇಂತಹ ಕಚೇರಿಗಳ ಮೇಲೆಯೇ ದಾಳಿ ಮಾಡಿ ಮೊಗ್ಗುಗಳ ಪೊಟ್ಟಣಗಳನ್ನು ಜಪ್ತಿ ಮಾಡಲಾಗಿದೆ’ ಎಂದೂ ಹೇಳಿದರು.

ಗೋವಾದಲ್ಲೂ ಗ್ರಾಹಕರು: ‘ಬೆಂಗಳೂರು, ಮುಂಬೈ ಮಾತ್ರವಲ್ಲದೇ ಗೋವಾದಲ್ಲೂ ಗಾಂಜಾ ಮೊಗ್ಗುಗಳ ಗ್ರಾಹಕರಿದ್ದಾರೆ. ಆರೋಪಿ ಅಹ್ಮದ್‌ನೇ ಅವರಿಗೆ ಮೊಗ್ಗು ಪೂರೈಕೆ ಮಾಡುತ್ತಿದ್ದ. ಈ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದೂ ಮಲ್ಹೋತ್ರಾ ತಿಳಿಸಿದರು.

ಕ್ರಿಪ್ಟೊ ಕರೆನ್ಸಿಯಲ್ಲಿ ವ್ಯವಹಾರ

‘ಹಲವು ತಿಂಗಳಿನಿಂದ ಗಾಂಜಾ ಮೊಗ್ಗು ದಂಧೆ ನಡೆಸುತ್ತಿದ್ದ ಆರೋಪಿಗಳು, ಕ್ರಿಪ್ಟೊ ಕರೆನ್ಸಿ (ಡಿಜಿಟಲ್ ಕರೆನ್ಸಿ) ಮೂಲಕ ವ್ಯವಹಾರ ನಡೆಸುತ್ತಿದ್ದರು’ ಎಂದು ಮಲ್ಹೋತ್ರಾ ತಿಳಿಸಿದರು.

‘ಕಾಲಕ್ಕೆ ತಕ್ಕಂತೆ ಕುಮಾರಸ್ವಾಮಿ ಹೇಳಿಕೆ ಬದಲು’

‘ಸಮ್ಮಿಶ್ರ ಸರ್ಕಾರ ಬಿದ್ದಾಗಲೇ ಡ್ರಗ್‌‌ ಮಾಫಿಯಾ‌ ಬಗ್ಗೆ ಕುಮಾರಸ್ವಾಮಿ ಬಹಿರಂಗ ಪಡಿಸಬೇಕಿತ್ತು. ಸಿದ್ದರಾಮಯ್ಯ ತಂತ್ರಗಾರಿಕೆಯಿಂದ ಸರ್ಕಾರ ಬಿತ್ತು ಅಂತಿದ್ದರು. ಈಗ ಡ್ರಗ್‌‌ ಮಾಫಿಯಾದಿಂದ ಅಂತಿದ್ದಾರೆ. ಅವರ ಹೇಳಿಕೆ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ’ ಎಂದು ಕೈಗಾರಿಕಾ ಸಚಿವ ಜಗದೀಶ‌ ಶೆಟ್ಟರ‌ ವ್ಯಂಗ್ಯವಾಡಿದರು.

‘ಮುಖ್ಯಮಂತ್ರಿಯಾಗಿದ್ದವರಿಗೆ ಮಾಹಿತಿ ಇರುತ್ತದೆ. ಆಗಲೇ ಅವರು ಈ ಬಗ್ಗೆ ಬಹಿರಂಗ ಪಡಿಸಬೇಕಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT