ಬೆಂಗಳೂರು: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ (ನೀಟ್-ಪಿಜಿ) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಪ್ರವರ್ಗವನ್ನು ಸರಿಯಾಗಿ ನಮೂದಿಸುವಲ್ಲಿ ತಪ್ಪೆಸಗಿದ್ದ ವಿದ್ಯಾರ್ಥಿನಿಯ ನೆರವಿಗೆ ಮುಂದಾಗಿರುವ ಹೈಕೋರ್ಟ್, ಆಕೆಯ ಪ್ರವರ್ಗದ ಹೆಸರು ಬದಲಾಯಿಸಲು ಅವಕಾಶ ಕಲ್ಪಿಸಿದೆ.
ಈ ಸಂಬಂಧ ಡಾ. ಲಕ್ಷ್ಮೀ ಪಿ ಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಿ.ನರೇಂದರ್ ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಎ ಪಾಟೀಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ ಅರ್ಜಿ ನಮೂನೆ ಕಲಂ 7ರಲ್ಲಿ ‘ಜನರಲ್‘ ಎಂದು ನಮೂದಿಸಿದ್ದನ್ನು ‘ಒಬಿಸಿ‘ ಎಂದು ತಿದ್ದುಪಡಿ ಮಾಡಲು ಅವಕಾಶ ನೀಡುವಂತೆ ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ನಿರ್ದೇಶಿಸಿದೆ. ಒಬಿಸಿಯ ಜ್ಯೇಷ್ಠತಾ ಪಟ್ಟಿಯಲ್ಲಿ ಪರಿಗಣಿಸಿ ಹೆಸರು ಸೇರ್ಪಡೆ ಮಾಡುವಂತೆಯೂ ಆದೇಶಿಸಿದೆ.
‘ಅರ್ಜಿದಾರರು ತಮ್ಮ ಹೆಸರನ್ನು ಒಬಿಸಿಯ-3 ಎ ಕೆಟಗರಿಯಡಿ ಸೇರ್ಪಡೆ ಮಾಡಬೇಕೆಂದು ಕೋರಿದ್ದಾರೆ. ಅಂತೆಯೇ, ಕೌನ್ಸೆಲಿಂಗ್ ಮುಕ್ತಾಯವಾಗಲು ಇನ್ನೂ 60 ದಿನಗಳಿವೆ. ಕೆಟಗರಿಯ ಅಡಿಯಲ್ಲಿ ಜ್ಯೇಷ್ಠತಾ ಪಟ್ಟಿಯನ್ನು ಪರಿಷ್ಕರಿಸಿದರೆ ಅರ್ಜಿದಾರರು ಪ್ರವೇಶಕ್ಕೆ ಅರ್ಹತೆ ಪಡೆಯುತ್ತಾರೆ. ಆದ್ದರಿಂದ, ಅರ್ಜಿದಾರರಿಗೆ ಒಂದು ಅವಕಾಶ ಕಲ್ಪಿಸುವುದು ನ್ಯಾಯೋಚಿತ‘ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣವೇನು?: ಅರ್ಜಿದಾರರು ಒಕ್ಕಲಿಗ ಜಾತಿಗೆ ಸೇರಿದವರಾಗಿದ್ದು, ಒಬಿಸಿ ಕೆಟಗರಿಗೆ ಒಳಪಡುತ್ತಾರೆ. ಆದರೆ, ಅವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಜನರಲ್ ಮೆರಿಟ್ ಎಂದು ಆಯ್ಕೆ ಮಾಡಿದ್ದರು. ಈ ತಪ್ಪನ್ನು ಸರಿಪಡಿಸಿಕೊಳ್ಳಲು ಸಂಬಂಧಿಸಿದ ಮಂಡಳಿಗೆ ಮನವಿ ಸಲ್ಲಿಸಿದ್ದರು. ಆದರೆ ಮಂಡಳಿ ಅವರ ಮನವಿಯನ್ನು ಪುರಸ್ಕರಿಸಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.