ಬೆಂಗಳೂರು: ಅಂಕಗಳನ್ನು ಬಹಿರಂಗಪಡಿಸದೆ ಕೇವಲ ಪರ್ಸೆಂಟೈಲ್ ಆಧಾರದಲ್ಲಿ ನೀಟ್–ಪಿಜಿ 2024ರ ಫಲಿತಾಂಶ ಪ್ರಕಟಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಧೀನದ ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇಎಂಎಸ್) ನಡೆಗೆ ಆಕ್ಷೇಪ ವ್ಯಕ್ತವಾಗಿದೆ.
ಎಂಡಿ, ಎಂಎಸ್, ಡಿಎನ್‌ಬಿ ಸೇರಿದಂತೆ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಆ.11ರಂದು ದೇಶದ 170 ನಗರಗಳ 416 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 2.28 ಲಕ್ಷ ಎಂಬಿಬಿಎಸ್ ಪದವೀಧರರು ಪರೀಕ್ಷೆ ಬರೆದಿದ್ದರು. ರಾಜ್ಯದ 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು.
‘200 ಪ್ರಶ್ನೆಗಳಿದ್ದು, ಪ್ರತಿ ಪ್ರಶ್ನೆಗೆ ನಾಲ್ಕು ಅಂಕಗಳಂತೆ ಒಟ್ಟು 800 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ವೈದ್ಯಕೀಯ ಪರೀಕ್ಷೆಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ಪ್ರಕಟಿಸದೆ ಅರ್ಹತಾ ಪಟ್ಟಿಯನ್ನಷ್ಟೇ ನೀಡಲಾಗಿದೆ. ಇದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನೀಟ್–ಯುಜಿ ಪರೀಕ್ಷೆಯಲ್ಲಿ ಮಾಡಿದ ಎಡವಟ್ಟು, ಅನ್ಯಾಯಕ್ಕಿಂತಲೂ ಘೋರ. ಉತ್ತರ ಭಾರತದ ಕೆಲ ರಾಜ್ಯಗಳ ಲಾಬಿಗೆ ಎನ್‌ಬಿಇಎಂಎಸ್ ಮಣಿದಿದೆ. ಸಾಕಷ್ಟು ಅವ್ಯವಹಾರ ನಡೆದಿರುವ ಶಂಕೆಯನ್ನು ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ವ್ಯಕ್ತಪಡಿಸಿದ್ದಾರೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎನ್ನುತ್ತಾರೆ ಪೋಷಕರಾದ ಬೆಂಗಳೂರಿನ ಲೋಕೇಶ್.
ಮಂಡಳಿ ನಡೆಸಿದ ಪರೀಕ್ಷಾ ವಿಧಾನಕ್ಕೂ ಆಕ್ಷೇಪಣೆಗಳು ವ್ಯಕ್ತವಾಗಿವೆ. ಪರೀಕ್ಷೆ ತೆಗೆದುಕೊಂಡಿದ್ದ ವಿದ್ಯಾರ್ಥಿಗಳನ್ನು ಎರಡು ಭಾಗ ಮಾಡಿ ಶೇ 50ರಷ್ಟು ವಿದ್ಯಾರ್ಥಿಗಳಿಗೆ ಬೆಳಗಿನ ಅವಧಿ, ಉಳಿದ ಶೇ 50ರಷ್ಟು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ನಂತರ ಪರೀಕ್ಷೆ ನಡೆಸಲಾಗಿತ್ತು. ಒಂದೇ ದಿನ ನಡೆಸಿದ್ದ ಎರಡು ಪರೀಕ್ಷೆಗಳಿಗೆ ಬೇರೆ ಬೇರೆ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗಿತ್ತು.
‘ಬೆಳಿಗ್ಗೆ 9ರಿಂದ 12.30ರವರೆಗೆ ನಡೆದಿದ್ದ ಪರೀಕ್ಷಾ ಪತ್ರಿಕೆಯ ಪ್ರಶ್ನೆಗಳು ಸುಲಭವಾಗಿದ್ದವು. ಮಧ್ಯಾಹ್ನ 3.30ರಿಂದ ಸಂಜೆ 7ರವರೆಗೆ ನಡೆಸಿದ್ದ ಪರೀಕ್ಷೆಯ ಪ್ರಶ್ನೆಗಳು ಕಠಿಣವಾಗಿದ್ದವು. ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಬೆಳಕಿನ ವ್ಯವಸ್ಥೆಯೇ ಇರಲಿಲ್ಲ. ಬೆಳಿಗ್ಗೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳೇ ಅರ್ಹತಾ ಪಟ್ಟಿಯಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ. ಎರಡನೇ ಪರೀಕ್ಷೆಯಲ್ಲಿನ ವಿದ್ಯಾರ್ಥಿಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಅರ್ಹತೆ ಹೊಂದಿದ್ದಾರೆ’ ಎಂದು ವಿದ್ಯಾರ್ಥಿ ಡಾ.ಅಶೋಕ್‌ಕುಮಾರ್ ದೂರುತ್ತಾರೆ.
ನೀಟ್–ಪಿಜಿಗೆ ಅರ್ಜಿ ಸಲ್ಲಿಸುವಾಗ ಪ್ರತಿ ವಿದ್ಯಾರ್ಥಿಗೂ ನಾಲ್ಕು ಪರೀಕ್ಷಾ ಕೇಂದ್ರಗಳನ್ನು ನಮೂದಿಸಲು ಎನ್‌ಬಿಇಎಂಎಸ್ ಅವಕಾಶ ನೀಡಿತ್ತು. ನಾಲ್ಕರಲ್ಲಿ ಹೊರ ರಾಜ್ಯದ ಒಂದು ಕೇಂದ್ರ ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯ ಮಾಡಲಾಗಿತ್ತು.
‘ಹತ್ತಿರದ ಕೇಂದ್ರಗಳಿಗೆ ಮೊದಲ ಆದ್ಯತೆ ನೀಡಿ, ಕೊನೆಯ ಆದ್ಯತೆಯನ್ನು ಹೊರ ರಾಜ್ಯದ ಕೇಂದ್ರಕ್ಕೆ ಬಹುತೇಕ ವಿದ್ಯಾರ್ಥಿಗಳು ನೀಡಿದ್ದರು. ಆದರೆ, ಹಲವರಿಗೆ ಹೊರ ರಾಜ್ಯದ ಕೇಂದ್ರಗಳನ್ನು ನೀಡಿದ್ದರಿಂದ ಸಾಕಷ್ಟು ತೊಂದರೆ ಅನುಭವಿಸಿದೆವು. ಇದು ಫಲಿತಾಂಶದ ಮೇಲೂ ಪರಿಣಾಮ ಬೀರಿದೆ’ ಎನ್ನುತ್ತಾರೆ ಡಾ.ಕಾರ್ತಿಕ್ ನಾಯಕ್.
4 ಬಾರಿ ಪರೀಕ್ಷಾ ದಿನಾಂಕ ಬದಲಾವಣೆ
ನೀಟ್–ಪಿಜಿ ಪರೀಕ್ಷೆಯ ದಿನಾಂಕವನ್ನು ನಾಲ್ಕು ಬಾರಿ ಬದಲಾವಣೆ ಮಾಡಲಾಗಿತ್ತು. ಮೊದಲು ಮಾರ್ಚ್ 5ಕ್ಕೆ ನಿಗದಿ ಮಾಡಲಾಗಿತ್ತು. ನಂತರ ಜುಲೈ 7ಕ್ಕೆ ಮುಂದೂಡಲಾಯಿತು.
ಜೂನ್ ಮೊದಲ ವಾರ ಮತ್ತೊಂದು ಪ್ರಕಟಣೆ ಹೊರಡಿಸಿದ ಎನ್‌ಬಿಇಎಂಎಸ್ 14 ದಿನ ಮುಂಚಿತವಾಗಿ ಅಂದರೆ ಜೂನ್ 23ಕ್ಕೆ ಪರೀಕ್ಷೆ ನಿಗದಿ ಮಾಡಿತು. ಆದರೆ, ಜೂನ್ 22ರ ತಡರಾತ್ರಿ ಪ್ರಕಟಣೆ ನೀಡಿ, ಪರೀಕ್ಷೆ ರದ್ದು ಮಾಡಿತ್ತು. ದೂರದ ಕೇಂದ್ರಗಳು, ಹೊರ ರಾಜ್ಯಗಳಿಗೆ ಪರೀಕ್ಷೆ ಬರೆಯಲು ಒಂದು ದಿನ ಮೊದಲೇ ತೆರಳಿದ್ದ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸಿದ್ದರು. ಅಂತಿಮವಾಗಿ ಆ.11ರಂದು ಪರೀಕ್ಷೆ ನಡೆಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.