ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ ಕಟ್ಟಡ ವಿಸ್ತರಣೆ: 4 ಪ್ರಸ್ತಾವ ಸಲ್ಲಿಕೆ

Published 21 ಸೆಪ್ಟೆಂಬರ್ 2023, 16:28 IST
Last Updated 21 ಸೆಪ್ಟೆಂಬರ್ 2023, 16:28 IST
ಅಕ್ಷರ ಗಾತ್ರ

ಬೆಂಗಳೂರು: ‘ಹತ್ತು ಮಹಡಿಗಳ ಕಟ್ಟಡ ನಿರ್ಮಾಣ ಸೇರಿದಂತೆ ಹೈಕೋರ್ಟ್ ಕಟ್ಟಡವನ್ನು ವಿಸ್ತರಿಸುವ ನಿಟ್ಟಿನಲ್ಲಿ ನಾಲ್ಕು ಪ್ರಸ್ತಾವನೆಗಳನ್ನು ಸಿದ್ಧಪಡಿಸಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಈ ಕುರಿತ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಹೈಕೋರ್ಟ್‌ ಆಡಳಿತ ವಿಭಾಗದ ಪರ ಹಾಜರಾದ ಹಿರಿಯ ವಕೀಲ ಎಸ್‌.ಎಸ್‌. ನಾಗಾನಂದ ಅವರು, ‘ರಾಜ್ಯ ಸರ್ಕಾರ ಹೈಕೋರ್ಟ್‌ ವಿಸ್ತರಣೆಗೆ ಸ್ಥಳಾವಕಾಶ ಒದಗಿಸುವ ಸಂಬಂಧ ಮೂರು ಪ್ರಸ್ತಾವನೆಗಳನ್ನು ಸಲ್ಲಿಸಿದೆ. ಇವುಗಳನ್ನು ಹೈಕೋರ್ಟ್‌ ಕಟ್ಟಡ ಸಮಿತಿ ಪರಿಶೀಲನೆ ನಡೆಸಲಿದೆ. ಆಗಸ್ಟ್ 14ರಂದು ಹೈಕೋರ್ಟ್‌ ಹೊರಡಿಸಿದ ಆದೇಶದ ಅನುಸಾರ ಸರ್ಕಾರವು ಮೂರು ಪ್ರಸ್ತಾವನೆಗಳನ್ನು ಸಲ್ಲಿಸಬೇಕು. ಆ ಮೂರೂ ಪ್ರಸ್ತಾವನೆಗಳನ್ನು ಹೈಕೋರ್ಟ್‌ ಕಟ್ಟಡ ಸಮಿತಿ ಪರಿಶೀಲಿಸಿ, ತನ್ನ ಅಭಿಪ್ರಾಯದೊಂದಿಗೆ ಮುಖ್ಯಮಂತ್ರಿಗೆ ಸಲ್ಲಿಸಬೇಕಿದೆ. ನಂತರ ಮುಖ್ಯಮಂತ್ರಿ ಅಂತಿಮ ತೀರ್ಮಾನ ಕೈಗೊಂಡು, ಅದನ್ನು ಹೈಕೋರ್ಟ್‌ ಮುಂದೆ ಇರಿಸಬೇಕಿದೆ‘ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಪ್ರತಿಮಾ ಹೊನ್ನಾಪುರ ಹಾಜರಾಗಿ, ‘ಈ ಮೂರೂ ಪ್ರಸ್ತಾವನೆಗಳಲ್ಲದೆ ಹೆಚ್ಚುವರಿಯಾಗಿ ನಾಲ್ಕನೆ ಪ್ರಸ್ತಾವನೆಯನ್ನೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ. ಹತ್ತು ಮಹಡಿಗಳ ಕಟ್ಟಡಗಳನ್ನು ನಿರ್ಮಿಸುವುದೇ ನಾಲ್ಕನೇ ಪ್ರಸ್ತಾವನೆ. ಮೊದಲಿಗೆ ಆರು ಮಹಡಿಗಳ ಕಟ್ಟಡ ನಿರ್ಮಾಣದ ಪ್ರಸ್ತಾವನೆ ಇತ್ತು. ಆದರೆ, ಖುದ್ದು ಮುಖ್ಯ ಕಾರ್ಯದರ್ಶಿಯೇ, ಲಂಬವಾಗಿ ಹತ್ತು ಮಹಡಿಗಳ ಕಟ್ಟಡವನ್ನು ಏಕೆ ನಿರ್ಮಾಣ ಮಾಡಬಾರದು ಎಂಬುದಾಗಿ ಕೇಳಿದ್ದಾರೆ. ಅದರಂತೆ ಹೊಸದಾಗಿ ಹತ್ತು ಮಹಡಿಗಳ ಕಟ್ಟಡ ನಿರ್ಮಾಣದ ಪ್ರಸ್ತಾವನೆಯನ್ನು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ‘ ಎಂದು ತಿಳಿಸಿದರು.

ಈ ಹೇಳಿಕೆಗಳನ್ನು ದಾಖಲಿಸಿಕೊಂಡ ನ್ಯಾಯಪೀಠ, ‘ರಾಜ್ಯ ಸರ್ಕಾರವು ಒಂದು ವಾರದಲ್ಲಿ ಈ ನಾಲ್ಕೂ ಪ್ರಸ್ತಾವನೆಗಳನ್ನು ಹೈಕೋರ್ಟ್‌ ರಿಜಿಸ್ಟ್ರಿಗೆ ಸಲ್ಲಿಸಬೇಕು. ಪ್ರಸ್ತಾವನೆಗಳನ್ನು ಸ್ವೀಕರಿಸಿದರೆ, ಅದನ್ನು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರು ಹೈಕೋರ್ಟ್‌ ಕಟ್ಟಡದ ಸಮಿತಿ ಮುಂದೆ ಮಂಡಿಸಬೇಕು. ನಂತರ ಹೈಕೋರ್ಟ್‌ ಆಗಸ್ಟ್‌ 14ರಂದು ನೀಡಿರುವ ನಿರ್ದೇಶನದಂತೆ ಮುಂದಿನ ಪ್ರಕ್ರಿಯೆ ಕೈಗೊಳ್ಳಬೇಕು‘ ಎಂದು ಆದೇಶಿಸಿ ವಿಚಾರಣೆಯನ್ನು ಒಂದು ತಿಂಗಳ ಕಾಲ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT