ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಿ ರಮ್ಯಾ ಕ್ಯಾಂಟೀನ್‌ಗೆ ಹೊಸ ರೂಪ; ಕಡಿಮೆಯಾಗದ ಮಾಜಿ ಸಂಸದೆ ಪ್ರಸಿದ್ಧಿ

ಮತ್ತೆ ಸ್ಪರ್ಧಿಸಲು ಒತ್ತಾಯ
Last Updated 1 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಮಂಡ್ಯ: ಮಾಜಿ ಸಂಸದೆ ರಮ್ಯಾ ಮಂಡ್ಯ ಬಿಟ್ಟು ಹಲವು ವರ್ಷ ಕಳೆದಿದ್ದರೂ ಅವರ ಪ್ರಸಿದ್ಧಿ ಸಕ್ಕರೆ ನಾಡಿನಲ್ಲಿ ಎಳ್ಳಷ್ಟೂ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ನಗರದ ‘ರಮ್ಯಾ ಕ್ಯಾಂಟೀನ್‌’ ಈಗ ಹೊಸ ರೂಪ ಪಡೆದಿದ್ದು ಅವರ ಮೇಲಿನ ಅಭಿಮಾನವನ್ನು ಜೀವಂತವಾಗಿರಿಸಿದೆ.

‘ಆ್ಯಪಲ್‌ ಬಾಕ್ಸ್‌’ ಸಂಸ್ಥೆಯ ಮೂಲಕ ಚಿತ್ರರಂಗಕ್ಕೆ ಮರಳುವುದಾಗಿ ಪ್ರಕಟಿಸಿ ರಮ್ಯಾ ಅವರು ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಆದರೆ, ಅವರು ರಾಜಕಾರಣಕ್ಕೆ ಮರಳಬೇಕು ಎಂದು ಎಂದು ನಿರೀಕ್ಷಿಸಿದ್ದ ಜಿಲ್ಲೆಯ ಹಲವರು ಈ ನಿರ್ಧಾರದಿಂದ ಬೇಸರಗೊಂಡಿದ್ದಾರೆ. ನೇರನುಡಿ, ಮುಗ್ಧತೆ, ಪ್ರಾಮಾಣಿಕತೆಗೆ ಹೆಸರಾಗಿದ್ದ ರಮ್ಯಾ ರಾಜಕಾರಣದಲ್ಲಿ ಉಳಿಯಬೇಕು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಆಗ್ರಹಿಸಿದ್ದಾರೆ.

2018ರ ವಿಧಾನಸಭಾ ಚುನಾವಣೆ ಸಮಯದಲ್ಲಿ ಜಿಲ್ಲೆಯಾದ್ಯಂತ ಕ್ಯಾಂಟೀನ್‌ ರಾಜಕಾರಣ ಸದ್ದು ಮಾಡಿತ್ತು. ವಿವಿಧ ಪಕ್ಷಗಳ ಮುಖಂಡರ ಹೆಸರಿನಲ್ಲಿ ಹಲವು ಕ್ಯಾಂಟೀನ್‌ಗಳು ಆರಂಭಗೊಂಡಿದ್ದವು, ಅದರಲ್ಲಿ ರಮ್ಯಾ ಕ್ಯಾಂಟೀನ್‌ ಕೂಡ ಒಂದಾಗಿತ್ತು. ಚುನಾವಣೆ ಮುಗಿದ ಕೂಡಲೇ ಅಪ್ಪಾಜಿ (ಎಚ್‌.ಡಿ.ದೇವೇಗೌಡ) ಕ್ಯಾಂಟೀನ್‌ ಸೇರಿ ಎಲ್ಲವೂ ಮುಚ್ಚಿದವು. ಆದರೆ ರಮ್ಯಾ ಕ್ಯಾಂಟೀನ್‌ ಮಾತ್ರ ಇಲ್ಲಿಯವರೆಗೂ ಬಡಜನರ, ರಮ್ಯಾ ಅಭಿಮಾನಿಗಳ ನೆಚ್ಚಿನ ತಾಣವಾಗಿ ಉಳಿದಿದೆ.

ಜಿಲ್ಲಾಸ್ಪತ್ರೆ ರಸ್ತೆ ಬಳಿ (ಅಶೋಕ್‌ ನಗರ, 3ನೇ ಕ್ರಾಸ್‌) ಇರುವ ರಮ್ಯಾ ಕ್ಯಾಂಟೀನ್‌ ಮೊದಲು 20X 24 ಅಳತೆಯ ಸಣ್ಣ ಜಾಗದಲ್ಲಿತ್ತು. ಅದೇ ರಸ್ತೆಯಲ್ಲಿ ಸ್ವಲ್ಪ ಮುಂದೆ 11X 130 ಅಳತೆಯ ಜಾಗದಲ್ಲಿ ಕ್ಯಾಂಟೀನ್‌ಗೆ ಹೊಸ ರೂಪ ಕೊಡಲಾಗಿದೆ. ಕ್ಯಾಂಟೀನ್‌ ಹೈಟೆಕ್‌ ಸ್ಪರ್ಶ ನೀಡಲಾಗಿದ್ದು ಮೊದಲಿಗಿಂತಲೂ ಹೆಚ್ಚು ಜನರು ಕ್ಯಾಂಟೀನ್‌ಗೆ ಬರುತ್ತಿದ್ದಾರೆ. ಹೋಟೆಲ್‌ ದೊಡ್ಡದಾದರೂ ಊಟ– ತಿಂಡಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಈಗಲೂ ಏನೇ ಖರೀದಿಸಿದರೂ ₹ 10 ಮಾತ್ರ.

ಆಸ್ಪತ್ರೆ ಸಮೀಪದಲ್ಲಿರುವ ಕಾರಣ ಬಡ ರೋಗಿಗಳು, ಅವರ ಸಂಬಂಧಿಗಳಿಗೆ ಅನುಕೂಲವಾಗಿದೆ. ರೋಗಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಬಿಸಿನೀರು, ಗಂಜಿಯನ್ನೂ ನೀಡಲಾಗುತ್ತದೆ. ರಮ್ಯಾ ಅಪ್ಪಟ ಅಭಿಮಾನಿಯಾಗಿರುವ ಕ್ಯಾಂಟೀನ್‌ ಮಾಲೀಕ ರಘು ಮೊದಲಿಗಿಂತಲೂ ಹೆಚ್ಚು ಉತ್ಸಾಹದಿಂದ ಕ್ಯಾಂಟೀನ್‌ ನಡೆಸುತ್ತಿದ್ದಾರೆ. ಪ್ರತಿಗೋಡೆಯ ಮೇಲೆ ರಮ್ಯಾ ಭಾವಚಿತ್ರ ಅಳವಡಿಸಿದ್ದಾರೆ.

‘ಕ್ಯಾಂಟೀನ್‌ಗೆ ಬರುವ ಪ್ರತಿಯೊಬ್ಬ ಗ್ರಾಹಕ ಕೂಡ ರಮ್ಯಾ ಅಕ್ಕನ ಒಳ್ಳೆಯತನದ ಬಗ್ಗೆ ಮಾತನಾಡುತ್ತಾರೆ. ಪ್ರತಿದಿನ ಅವರ ಚರ್ಚೆ ನಡೆಯುತ್ತದೆ. ಬಹಳ ಕಡಿಮೆ ಅವಧಿಯಲ್ಲಿ ಅವರು ಜನರ ಪ್ರೀತಿ ಸಂಪಾದಿಸಿದ್ದರು. ಹೊಸದಾಗಿ ಕ್ಯಾಂಟೀನ್‌ ಮಾಡಿದ್ದಾಗ ಅಲ್ಲಿಗೆ ಬರುವುದಾಗಿ ರಮ್ಯಾ ಅವರು ಟ್ವೀಟ್‌ ಮಾಡಿದ್ದರು. ಈಗ ಕ್ಯಾಂಟೀನ್‌ ದೊಡ್ಡದಾಗಿದೆ, ಈಗಲಾದರೂ ಬಂದು ನಮ್ಮ ಪ್ರೀತಿ ಸ್ವೀಕರಿಸಬೇಕು’ ಎಂದು ರಘು ಮನವಿ ಮಾಡಿದರು.

ಮಾಜಿ ಸಂಸದೆ ರಮ್ಯಾ
ಮಾಜಿ ಸಂಸದೆ ರಮ್ಯಾ

‘ರಮ್ಯಾ ಅವರು ಚಿತ್ರರಂಗದಲ್ಲಿ ಮರಳಿದಂತೆ ರಾಜಕಾರಣಕ್ಕೂ ಉಳಿಯಬೇಕು. ಮುಂದಿನ ಚುನಾವನೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಬೇಕು. ಅವರನ್ನು ಭೇಟಿಯಾಗಿ ಮನವಿ ಮಾಡಲು ನಿರ್ಧರಿಸಿದ್ದೇವೆ’ ಎಂದು ರಮ್ಯಾ ಅಭಿಮಾನಿಗಳ ಸಂಘದ ರವಿಕುಮಾರ್‌ ತಿಳಿಸಿದರು.

ಜಾಲತಾಣದಲ್ಲೂ ಚರ್ಚೆ
ರಮ್ಯಾ ಅವರು ಚಿತ್ರರಂಗಕ್ಕೆ ಮರಳುವ ನಿರ್ಧಾರ ಪ್ರಕಟಿಸಿದ ನಂತರ ಅವರ ರಾಜಕಾರಣದ ಬಗ್ಗೆಯೂ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಕೇವಲ 9 ತಿಂಗಳು ಸಂಸದೆಯಾಗಿ ಅವರು ಮಾಡಿದ ಕೆಲಸಗಳು, ತೋರಿದ ಉತ್ಸಾಹ, ಗಳಿಸಿದ ಜನರ ಪ್ರೀತಿ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.

‘ರಮ್ಯಾ ಅವರು ರಾಜಕಾರಣವನ್ನು ಒಂದೊಳ್ಳೆ ಕಾಳಜಿ ಎಂದು ನಂಬಿದ್ದರು. ಗಿಮಿಕ್‌ಗಳು ಅವರಿಗೆ ಗೊತ್ತಿರಲಿಲ್ಲ, ಸಾಕಷ್ಟು ಕೆಲಸ ಮಾಡಿ ನೆನಪು ಉಳಿಸಿದ್ದಾರೆ. ಅವರೊಬ್ಬ ಮಹಿಳೆಯಾಗಿ ಮತ್ತೆ ರಾಜಕಾರಣಕ್ಕೂ ಮರಳಬೇಕು’ ಎಂದು ಕರುನಾಡ ಸೇವಕರು ಸಂಘಟನೆ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT