ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ ಫಲಿತಾಂಶ | ಯಾವ ಸಚಿವರ ತಲೆದಂಡವೂ ಆಗುವುದಿಲ್ಲ: ಸಚಿವ ಮುನಿಯಪ್ಪ

Published 5 ಜೂನ್ 2024, 15:30 IST
Last Updated 5 ಜೂನ್ 2024, 15:30 IST
ಅಕ್ಷರ ಗಾತ್ರ

ಬೆಂಗಳೂರು: ‘ಲೋಕಸಭೆ ಚುನಾವಣೆ ಫಲಿತಾಂಶದ ಕಾರಣಕ್ಕೆ ರಾಜ್ಯದಲ್ಲಿ ಸಚಿವರಲ್ಲಿ ಯಾರ ತಲೆದಂಡವೂ ಆಗುವುದಿಲ್ಲ. ಯಾಕೆಂದರೆ, ಕಾಂಗ್ರೆಸ್ ಪಕ್ಷದ ಮತ ಕಡಿಮೆ ಆಗಿಲ್ಲ’ ಎಂದು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಬಿಜೆಪಿ- ಜೆಡಿಎಸ್‌ ಒಂದಾಗಿದ್ದರಿಂದ ಹಳೆ ಮೈಸೂರು ಭಾಗದಲ್ಲಿ ನಮಗೆ (ಕಾಂಗ್ರೆಸ್‌) ಸೋಲಾಗಿದೆ. ಅದನ್ನು ನಾವು ಒಪ್ಪಿಕೊಳ್ಳಬೇಕು’ ಎಂದರು.

ಪಕ್ಷದಲ್ಲಿ ಉನ್ನತಾಧಿಕಾರ ಸಮಿತಿ ರಚಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಒಂದು ಪ್ರಮುಖರ ಸಮಿತಿ ಇರಬೇಕೆಂದು ನಾನು ಈಗಾಗಲೇ ಹೇಳಿದ್ದೇನೆ. ಆ ಸಮಿತಿ ಸೇರಿ ತೀರ್ಮಾನ ಮಾಡಬೇಕು. ಆಗ ಕೆಲವು ವಿಚಾರಗಳಲ್ಲಿ ಸಾಮಾಜಿಕ ನ್ಯಾಯ ಸಿಗಲಿದೆ. ಚುನಾವಣೆಯನ್ನು ಕೇವಲ ಒಬ್ಬರಿಂದ ಗೆಲ್ಲಲು ಸಾಧ್ಯವಿಲ್ಲ’ ಎಂದು ಹೇಳಿದರು.

ನನ್ನಿಂದ ಒಳೇಟು ಬಿದ್ದಿಲ್ಲ: ‘ನಾಯಕರ ಒಗ್ಗಟ್ಟಿನ ಕೊರತೆಯಿಂದ ಕೋಲಾರ ಕ್ಷೇತ್ರ ಗೆಲ್ಲುವಲ್ಲಿ ನಾವು ವಿಫಲರಾಗಿದ್ದೇವೆ. ಈ ವಿಚಾರವನ್ನು ನಾನು ಹೈಕಮಾಂಡ್ ಮತ್ತು ರಾಜ್ಯ ನಾಯಕರ ಗಮನಕ್ಕೆ ಹಲವು ಬಾರಿ ತಂದರೂ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಶಾಸಕರ ಒಗ್ಗಟ್ಟಿನ ಕೊರತೆ ಹಾಗೂ ಸ್ವಪ್ರತಿಷ್ಠೆಗಳ ಕಾರಣದಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ನಾವು ಸೋಲು ಅನುಭವಿಸಿದ್ದೇವೆ. ನನ್ನಿಂದ ಒಳೇಟು ಬಿದ್ದಿಲ್ಲ’ ಎಂದರು.

‘ಕೋಲಾರದಲ್ಲಿ ಈಗಲೂ ಕಾಲ ಮಿಂಚಿಲ್ಲ. ಮುಂಬರುವ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಥಾನಗಳನ್ನು ಗೆಲ್ಲಬೇಕಾದರೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ನಾನು ಮೊದಲಿನಿಂದಲೂ ಈ ವಿಚಾರವನ್ನು ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗಮನಕ್ಕೆ ತಂದಿದ್ದೇನೆ. ಅವರು ಸಮಸ್ಯೆ ಬಗೆಹರಿಸಿದ್ದರೆ ಕೋಲಾರದಲ್ಲಿ ಸೋಲಾಗುತ್ತಿರಲಿಲ್ಲ. ಅಲ್ಲಿನ ನಾಯಕರಿಗೆ ಈಗಲಾದರೂ ಬುದ್ಧಿ ಹೇಳಿ, ಸಮಸ್ಯೆ ಸರಿಪಡಿಸಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT