ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಟಿಟಿ ಡೇಟಾ ಕಂಪನಿ ಭವಿಷ್ಯದಲ್ಲಿ ₹16 ಸಾವಿರ ಕೋಟಿ ಹೂಡಿಕೆ: ಎಂ.ಬಿ. ಪಾಟೀಲ‌

Published 18 ಜನವರಿ 2024, 15:28 IST
Last Updated 18 ಜನವರಿ 2024, 15:28 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಈಗಾಗಲೇ ಸುಮಾರು ₹7,480 ಕೋಟಿ ಹೂಡಿಕೆ ಮಾಡಿರುವ ಎನ್‌ಟಿಟಿ ಡೇಟಾ ಕಂಪನಿಯು ಮುಂಬರುವ ವರ್ಷಗಳಲ್ಲಿ ಇನ್ನೂ ₹16 ಸಾವಿರ ಕೋಟಿ ಬಂಡವಾಳ ತೊಡಗಿಸಲು ನಿರ್ಧರಿಸಿದೆ. ಅಲ್ಲದೆ, ತನ್ನ ಉತ್ಪಾದನೆ ಹೆಚ್ಚಿಸಲು ಪಾನೀಯಗಳ ತಯಾರಿಕಾ ಕಂಪನಿ ಆ್ಯಬ್ ಇನ್ಬೇವ್ ಇಂಡಿಯಾದಲ್ಲಿ ₹400 ಕೋಟಿ ಹೂಡಿಕೆಗೆ ಒಪ್ಪಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ‌ ತಿಳಿಸಿದ್ದಾರೆ.

ಸ್ವಿಟ್ಜರ್ಲೆಂಡ್‌ನ ದಾವೋಸ್‌ ನಗರದಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಸಮಾವೇಶದ ಮೂರನೆಯ ದಿನವಾದ ಬುಧವಾರ, ರಾಜ್ಯದಲ್ಲಿ ಹೂಡಿಕೆ ಮಾಡುವ ಕುರಿತಂತೆ ಎಚ್‌ಪಿ, ಆ್ಯಬ್ ಇನ್ಬೇವ್ ಬ್ರೂವರೀಸ್, ಎಚ್‌ಸಿಎಲ್‌, ಗೆನಾತ್ರಿ (ಪೆಟ್ರೋನಾಸ್), ಎನ್‌ಟಿಟಿ ಡೇಟಾ, ಸಿಸ್ಕೋ, ಸ್ವಿಗ್ಗಿ ಸೇರಿದಂತೆ ಕೆಲವು ಕಂಪನಿಗಳ ಮುಖ್ಯಸ್ಥರ ಜತೆ ಎಂ.ಬಿ. ಪಾಟೀಲರ ನೇತೃತ್ವದ ನಿಯೋಗ ಮಾತುಕತೆ ನಡೆಸಿದೆ.

‘ಇನ್ನೂ ನಾಲ್ಕು ಸಾವಿರ ಉದ್ಯೋಗಗಳನ್ನು ಸೃಷ್ಟಿಸಲು ನಿರ್ಧರಿಸಿರುವ ಎಚ್‌ಪಿ (ಹ್ಯೂಲೆಟ್ ಪೆಕಾರ್ಡ್) ಕಂಪನಿ‌ಯು ಬೆಂಗಳೂರಿನ ಮಹದೇವಪುರದಲ್ಲಿ ಎರಡು ಸುಸಜ್ಜಿತ ಕಚೇರಿಗಳನ್ನು ಆರಂಭಿಸಲಿದೆ. ಮೈಸೂರಿನಲ್ಲಿ ಸರ್ವರ್ ತಯಾರಿಕಾ ಘಟಕ ಆರಂಭಿಸುವ ಕುರಿತು ಮಾತುಕತೆ ನಡೆಸುತ್ತಿದೆ. ಇದು ಸಾಧ್ಯವಾದರೆ ಸುಮಾರು ₹8,300 ಕೋಟಿ ವಾರ್ಷಿಕ ವಹಿವಾಟು ಸಾಧ್ಯವಾಗಲಿದೆ. ಅಲ್ಲದೆ, ಎಚ್‌ಪಿ ಕಂಪನಿಯು ರಾಜ್ಯದಲ್ಲಿ ತನ್ನ ‘ಗ್ಲೋಬಲ್ ಲೀಡರ್‌ಶಿಪ್‌’ ಕಚೇರಿ ಹೊಂದಲು ಮನಸ್ಸು ಮಾಡಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಶುದ್ಧ ಇಂಧನ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಪೆಟ್ರೋನಾಸ್ (ಗೆನಾತ್ರಿ) ಕಂಪನಿಯು ಈ ವರ್ಷದ ಕೊನೆಯ ಹೊತ್ತಿಗೆ 30 ಗಿಗಾವ್ಯಾಟ್ ಮರುಬಳಕೆ ಮಾಡಬಹುದಾದ ಇಂಧನ ತಯಾರಿಸುವ ಗುರಿ ಹೊಂದಿದೆ. ಅಲ್ಲದೆ, ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿ ತ್ಯಾಜ್ಯ ನಿರ್ವಹಣೆಯನ್ನು ಅದು ವೈಜ್ಞಾನಿಕವಾಗಿ ಮಾಡಲು ಆಸಕ್ತಿ ಹೊಂದಿದೆ. ಈ ಉದ್ದೇಶದಿಂದ ಸರ್ಕಾರದ ಸಹಭಾಗಿತ್ವ ಬಯಸಿದೆ’ ಎಂದು ಅವರು ವಿವರಿಸಿದ್ದಾರೆ.

‘ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿ ಸಿಸ್ಕೋ, ನಗರ ಸಂಚಾರ ವ್ಯವಸ್ಥೆಯೊಂದಿಗೆ ಸ್ವಿಗ್ಗಿ, ವಿದ್ಯುತ್ ಚಾಲಿತ ವಾಹನ ಕ್ಷೇತ್ರದಲ್ಲಿ ವೊಲ್ವೊ ಕಂಪನಿಗಳು ಹೆಚ್ಚಿನ ಬಂಡವಾಳ ಹೂಡಲು ಮುಂದೆ ಬಂದಿವೆ. ಇವುಗಳ ಹೂಡಿಕೆ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ಹೂಡಿಕೆಗಳ ಸಂಬಂಧವಾಗಿ ಎಚ್‌ಸಿಎಲ್‌ ಕಂಪನಿಯ ಮುಖ್ಯಸ್ಥ ಬಾಲಸುಬ್ರಮಣಿಯನ್, ಪೆಟ್ರೋನಾಸ್ ಕಂಪನಿಯ ಸಿಇಒ ಸುಶೀಲ್ ಪುರೋಹಿತ್, ಸಿಸ್ಕೋದ ಪ್ರಧಾನ ವ್ಯವಸ್ಥಾಪಕ ಜೀತು ಪಟೇಲ್ ಮತ್ತಿತರರ ಜೊತೆ ವಿಸ್ತೃತ ಮಾತುಕತೆ ನಡೆಸಲಾಗಿದೆ’ ಎಂದು ಪಾಟೀಲ ತಿಳಿಸಿದ್ದಾರೆ.

ಮುಖ್ಯಮಂತ್ರಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಐಟಿಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ಏಕ್ ರೂಪ್ ಕೌರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಮಹೇಶ್ ನಿಯೋಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT