ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿ.ಎಸ್ಸಿ ನರ್ಸಿಂಗ್ : 2 ಸುತ್ತು ಕೌನ್ಸೆಲಿಂಗ್‌’

Published 12 ಜುಲೈ 2023, 20:17 IST
Last Updated 12 ಜುಲೈ 2023, 20:17 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿ.ಎಸ್ಸಿ ನರ್ಸಿಂಗ್ ಕೋರ್ಸ್‌ಗಳ ಸೀಟು ಹಂಚಿಕೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಿದ್ದು, ಎರಡು ಸುತ್ತು ಕೌನ್ಸೆಲಿಂಗ್‌ ಬಳಿಕ ಉಳಿಕೆಯಾದ ಸೀಟುಗಳನ್ನು ಭರ್ತಿ ಮಾಡಲು ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್‌. ಪಾಟೀಲ ತಿಳಿಸಿದರು.

ವಿಧಾನಪರಿಷತ್‌ನಲ್ಲಿ ಬಿಜೆಪಿಯ ಎಸ್‌.ವಿ. ಸಂಕನೂರ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ‘ನರ್ಸಿಂಗ್ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ಮತ್ತು ಸೀಟು ಹಂಚಿಕೆ ಕ್ರಮವನ್ನು ಕೆಇಎ ವತಿಯಿಂದಲೇ ನಡೆಸುವಂತೆ 2023ರ ಏಪ್ರಿಲ್‌ 13ರಂದೇ ಸರ್ಕಾರ ಆದೇಶ ಮಾಡಿದೆ. ಅದರಂತೆ, ಇಂಡಿಯನ್‌ ನರ್ಸಿಂಗ್‌ ಕೌನ್ಸೆಲಿಂಗ್‌ (ಐಎನ್‌ಸಿ) ಮತ್ತು ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಮಾರ್ಗಸೂಚಿಗಳನ್ನು ಅನುಸರಿಸಿ ಕ್ರಮ ವಹಿಸಲಾಗುವುದು’ ಎಂದರು.

‘ರಾಜ್ಯದಲ್ಲಿ ಒಟ್ಟು 33 ಸಾವಿರ ನರ್ಸಿಂಗ್‌ ಸೀಟುಗಳು ಲಭ್ಯವಿದೆ. ಸಿಇಟಿ ಹಾಜರಾದವರಲ್ಲಿ 1,75,682 ವಿದ್ಯಾರ್ಥಿಗಳು ಸೀಟು ಹಂಚಿಕೆಗೆ ಅರ್ಹತೆ ಪಡೆದಿದ್ದಾರೆ. ಐಎನ್‌ಸಿ ಅಧಿಸೂಚನೆ ಪ್ರಕಾರ ಆಗಸ್ಟ್‌ 1ರಿಂದ ಸೆ. 30ರ ಒಳಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ’ ಎಂದೂ ತಿಳಿಸಿದರು.

‘ಖಾಸಗಿ ನರ್ಸಿಂಗ್‌ ಕಾಲೇಜುಗಳಲ್ಲಿ ಶೇ 20ರಷ್ಟು ಸರ್ಕಾರಿ, ಉಳಿದ ಶೇ 80ರಷ್ಟು ಸೀಟುಗಳನ್ನು ಅವರೇ ಭರ್ತಿ ಮಾಡಿಕೊಳ್ಳುತ್ತಾರೆ. ಆದರೆ, ಅರ್ಹತೆ ಮೇಲೆ ಸೀಟು ಭರ್ತಿ ಮಾಡಬೇಕು. ಕೋರ್ಸ್‌ ಶುಲ್ಕ ಹೆಚ್ಚಿಸುವಂತೆ ಅವರು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಮಾತುಕತೆ ನಡೆದಿದ್ದು, ಪರಸ್ಪರ ಒಪ್ಪಂದ ಮಾಡಿಕೊಳ್ಳಲು ಚಿಂತನೆ ನಡೆದಿದೆ’ ಎಂದರು.

‘ನರ್ಸಿಂಗ್‌ ಕಾಲೇಜುಗಳಲ್ಲಿನ ಅವ್ಯವಸ್ಥೆ, ಅವ್ಯವಹಾರಗಳ ಬಗ್ಗೆ ಬಿಜೆಪಿಯ ಎನ್‌. ರವಿಕುಮಾರ್‌ ಪ್ರಸ್ತಾಪಿಸಿದಾಗ, ‘ನರ್ಸಿಂಗ್‌ ಕಾಲೇಜುಗಳ ಮೇಲೆ ಸರ್ಕಾರವೇ ನಿಗಾ ಇಡಲಿದೆ. ಅಕ್ರಮದಂಥ ವಿಷಯಗಳಲ್ಲಿ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ನೀವು (ಸದಸ್ಯರು) ಮಾಹಿತಿ ನೀಡಿದರೂ ತಕ್ಷಣ ಕ್ರಮ ಖಚಿತ’ ಎಂದೂ ಸಚಿವರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT