ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಲಿತ ಕಲ್ಯಾಣಕ್ಕೆ ಖರ್ಚಾಗದ ಹಣ: ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

ಅಧಿಕಾರಿಗಳ ನಿರ್ಲಕ್ಷ್ಯ ಆರೋಪ l ನೋಡಲ್‌ ಏಜೆನ್ಸಿಗಳ ಸಭೆ ಇಂದು
Published : 30 ನವೆಂಬರ್ 2022, 20:54 IST
ಫಾಲೋ ಮಾಡಿ
Comments

ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಸಮುದಾಯದ ಅಭಿವೃದ್ಧಿಗಾಗಿ ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆಯಡಿ ಈ ವರ್ಷ ಹಂಚಿಕೆಯಾದ ಒಟ್ಟು ಅನುದಾನದಲ್ಲಿ ಈವರೆಗೆ (ಅಕ್ಟೋಬರ್ ಅಂತ್ಯ) ವೆಚ್ಚವಾಗಿರುವುದು ಶೇಕಡ 14.75ರಷ್ಟು ಮಾತ್ರ.

ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಎಂದು ಕರೆ ಯಲಾಗುವ ಈ ವಿಶೇಷ ಕಾರ್ಯಕ್ರಮ ಗಳಿಗೆ ವಿವಿಧ ಇಲಾಖೆ ಗಳಿಗೆ ಪ್ರಸಕ್ತ ಸಾಲಿನಲ್ಲಿ ಸರ್ಕಾರ ಒಟ್ಟು ₹ 29,165.81 ಕೋಟಿ ಹಂಚಿಕೆ ಮಾಡಿದೆ. ಈ ಮೊತ್ತದಲ್ಲಿ ಅಕ್ಟೋಬರ್‌ ಅಂತ್ಯದವರೆಗೆ ₹ 13,702.45 ಕೋಟಿ ಬಿಡುಗಡೆಯಾಗಿದೆ. ಬಿಡುಗಡೆ ಆಗಿರುವ ಮೊತ್ತದಲ್ಲಿ ಕೇವಲ ₹ 4,303.82 (ಶೇ 34) ಕೋಟಿ ವೆಚ್ಚವಾಗಿದೆ. ಈವರೆಗೆ ವೆಚ್ಚವಾದ ಮೊತ್ತವನ್ನು ಹಂಚಿಕೆಯಾದ ಒಟ್ಟು ಮೊತ್ತಕ್ಕೆ ಪರಿಗಣಿಸಿದರೆ ಅದರ ಅರ್ಧದಷ್ಟೂ ಇಲ್ಲ!

ಒಟ್ಟು 35 ಇಲಾಖೆಗಳಿಗೆ ಅನುದಾನ ಹಂಚಿಕೆಯಾಗಿದ್ದು, ಈ ಪೈಕಿ ಅರ್ಧಕ್ಕೂ ಹೆಚ್ಚು ಇಲಾಖೆಗಳಲ್ಲಿ ಕಡಿಮೆ ಹಣ ವೆಚ್ಚ ಆಗಿದೆ. ಅದರಲ್ಲೂ ಉನ್ನತ ಶಿಕ್ಷಣ (ಶೇ 2.20) ಮತ್ತು ಕೌಶಲಾಭಿವೃದ್ಧಿ ಇಲಾಖೆಯಲ್ಲಿ (ಶೇ 4.65) ಅತೀ ಕಡಿಮೆ ಹಣ ವಿನಿಯೋಗ ಆಗಿದೆ.ಮೀನುಗಾರಿಕೆ (ಶೇ 78.73) ಮತ್ತು ಕಾರ್ಮಿಕ ಇಲಾಖೆ (ಶೇ 75) ಅತೀ ಹೆಚ್ಚಿನ ಪ್ರಗತಿ ತೋರಿಸಿವೆ. ವೈದ್ಯಕೀಯ ಶಿಕ್ಷಣ, ಕಾರ್ಮಿಕ, ಪ್ರವಾಸೋದ್ಯಮ, ಇಂಧನ, ಲೋಕೋಪಯೋಗಿ ಮತ್ತು ಐಟಿಬಿಟಿ ಇಲಾಖೆಗಳು ಶೇ 50ಕ್ಕಿಂತ ಹೆಚ್ಚಿನ ವೆಚ್ಚ ಮಾಡಿವೆ.

ಇಂದು ಸಭೆ: ಬಿಡುಗಡೆ ಮಾಡಿದ ಅನುದಾನ ವನ್ನು ವೆಚ್ಚ ಮಾಡಲು ಇಲಾಖೆಗಳು ವಿಫಲವಾಗಿರುವ ಬಗ್ಗೆ ನ. 17ರಂದೇ ನೋಡಲ್‌ ಏಜೆನ್ಸಿಗಳ ಪ್ರಗತಿ ಪರಿ ಶೀಲನೆ ಸಭೆಯನ್ನು ನಿಗದಿಪಡಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಸಭೆ ಮುಂದೂಡಿಕೆ ಆಗಿತ್ತು. ಅನುದಾನ ಬಳಕೆ ಆಗದಿರುವ ಬಗ್ಗೆ ಪರಿಶೀಲನೆ ನಡೆಸಲು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಗುರುವಾರ (ಡಿ.1) ಸಭೆ ನಡೆಯಲಿದೆ.

‘ಯೋಜನೆಯಡಿಯಲ್ಲಿ ವೈಯಕ್ತಿಕ, ಸಮುದಾಯ, ಜನವಸತಿಗೆ ಅನುದಾನ ವೆಚ್ಚ ಮಾಡಬೇಕು. ಪರಿಶಿಷ್ಟರಿಗೆ ಮೀಸ ಲಿಟ್ಟ ಹಣದಲ್ಲಿ ವಿಭಜಿಸಲಾಗದ ಪ್ರಕರಣಗಳಲ್ಲಿ ಆಗುವ ವೆಚ್ಚದ ಒಂದು ಭಾಗವು (ಡೀಮ್ಡ್‌ ಮೊತ್ತ) ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ತಲುಪಿದೆ ಎಂದು ಭಾವಿಸತಕ್ಕದ್ದು ಎಂದು ‘ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆ’ಯ ಸೆಕ್ಷನ್‌ 7 (ಡಿ) ಅಡಿಯಲ್ಲಿದೆ. ಈವರೆಗೆ ವೆಚ್ಚವಾದ ಒಟ್ಟು ಅನುದಾನದಲ್ಲಿ ಹೆಚ್ಚಿನ ಮೊತ್ತ ಈ ಸೆಕ್ಷನ್‌ನ ಅಡಿಯ ಯೋಜನೆಗಳಿಗೆ ಬಳಕೆಯಾಗಿದೆ. ಅಲ್ಲದೆ, ಪ್ರಸಕ್ತ ಸಾಲಿನಲ್ಲಿ ಮೀಸಲಿಟ್ಟ ಸಂಪೂರ್ಣ ಅನುದಾನ ಬಳಕೆಯಾಗುವ ಬಗ್ಗೆಯೇ ಅನುಮಾನವಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಕ್ರಿಯಾ ಯೋಜನೆ ಸಿದ್ಧಪಡಿಸು ವುದು ವಿಳಂಬದ ಜೊತೆಗೆ, ಶಾಸಕರ ಅಧ್ಯಕ್ಷತೆಯ ಸಮಿತಿಯಿಂದ ಫಲಾನುಭವಿಗಳ ಆಯ್ಕೆಯಲ್ಲೂ ತಡವಾಗುತ್ತಿದೆ. ಗಂಗಾ ಕಲ್ಯಾಣ, ವಸತಿ ಮತ್ತಿತರ ಯೋಜನೆಗಳಲ್ಲಿ ಕೆಲವು ತಾಲ್ಲೂಕುಗಳಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ ಆಗಬೇಕಿದ್ದ ಫಲಾನು ಭವಿಗಳ ಆಯ್ಕೆಯೇ ಇನ್ನೂ ಆಗಿಲ್ಲ. ಟೆಂಡರ್‌ ಆಹ್ವಾನಿಸುವ ಪ್ರಕ್ರಿಯೆಯಲ್ಲೂ ಭಾರಿ ವಿಳಂಬವಾಗುತ್ತಿದೆ. ಟೆಂಡರ್‌ ನೀಡಿ ಕಾರ್ಯಾದೇಶ ಕೊಟ್ಟ ನಂತರವೂ ಕೆಲವು ಕಾಮಗಾರಿಗಳು ಆರಂಭ ಆಗುವುದೇ ಇಲ್ಲ. ಅದರ ಜೊತೆಗೆ ಅಧಿಕಾರಿಗಳ ನಿರ್ಲಕ್ಷ್ಯ ಕೂಡಾ ಅನುದಾನ ವೆಚ್ಚ ಆಗದೇ ಇರಲು ಮುಖ್ಯ ಕಾರಣ’ ಎಂದೂ ಮಾಹಿತಿ ನೀಡಿದರು.

‘₹ 10 ಕೋಟಿವರೆಗಿನ ಕ್ರಿಯಾ ಯೋಜನೆಗಳಿಗೆ ಆಯಾ ಇಲಾಖೆಗಳ ಕಾರ್ಯದರ್ಶಿಗಳು ಮಂಜೂರಾತಿ ನೀಡಬಹುದು. ‌ಅದಕ್ಕಿಂತ ಹೆಚ್ಚಿನ ಅನುದಾನ ಬಿಡುಗಡೆಗೆ ಆರ್ಥಿಕ ಇಲಾಖೆಯ ಸಹಮತಿ ಪಡೆಯಬೇಕು. ಅಲ್ಲದೆ, ಯೋಜನೆಗೆ ಮೊದಲ ಕಂತಿನಲ್ಲಿ ಬಿಡುಗಡೆಯಾದ ಹಣದಲ್ಲಿ ಶೇ 75ರಷ್ಟು ವೆಚ್ಚ ಮಾಡಿದರಷ್ಟೆ ಎರಡನೇ ಕಂತಿನ ಹಣವನ್ನು ಆರ್ಥಿಕ ಇಲಾಖೆ ಬಿಡುಗಡೆ ಮಾಡುತ್ತದೆ. ಹಲವು ಯೋಜನೆಗಳಲ್ಲಿ ಮೊದಲ ಕಂತಿನ ಹಣವೇ ಶೇ 75ರಷ್ಟು ವೆಚ್ಚ ಆಗಿಲ್ಲ. ಹೀಗಾಗಿ ಪ್ರಗತಿಯೂ ನಿರಾಶಾದಾಯಕವಾಗಿದೆ’ ಎಂದೂ ಅವರು ಹೇಳಿದರು.

‘ಯಾರಿಗೂ ಶಿಕ್ಷೆ ಆಗಿಲ್ಲ’

‘ಪರಿಶಿಷ್ಟರ ಅಭಿವೃದ್ಧಿಗಾಗಿ ‘ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ (ಯೋಜನೆ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ಕಾಯ್ದೆ 2014ರ ಏಪ್ರಿಲ್‌ 1ರಿಂದ ಜಾರಿಯಲ್ಲಿದೆ. ಪರಿಶಿಷ್ಟ ಜನಸಂಖ್ಯೆಗೆ ಅನುಗುಣವಾಗಿ ಪ್ರತಿ ವರ್ಷ ಅನುದಾನ ಮೀಸಲಿಡಲಾಗುತ್ತಿದೆ. ಅನುದಾನ ವೆಚ್ಚ ಮಾಡದೇ ಇದ್ದರೆ, ಅಂತಹ ಇಲಾಖೆಯ ಅಧಿಕಾರಿಗಳಿಗೆ ಆರು ತಿಂಗಳಿಗೆ ಕಡಿಮೆ ಇಲ್ಲದಂತೆ ಜೈಲು ಶಿಕ್ಷೆ ವಿಧಿಸುವ ಅವಕಾಶವೂ ಕಾಯ್ದೆಯಲ್ಲಿದೆ. ಪ್ರತಿವರ್ಷ ಅನುದಾನ ವೆಚ್ಚವಾಗದ ಪ್ರಕರಣಗಳು ಸುದ್ದಿಯಾದರೂ ಒಬ್ಬನೇ ಒಬ್ಬ ಅಧಿಕಾರಿ‌ ಮೇಲೆ ಕ್ರಮ ತೆಗೆದುಕೊಂಡ ನಿದರ್ಶನ ಇಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT