ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆನ್‌ಡ್ರೈವ್ ಹಂಚಿಕೆಯಲ್ಲಿ ಡಿಕೆಶಿ ಪಾತ್ರವಿಲ್ಲ: ಒಕ್ಕಲಿಗ ಸಚಿವರು

Published 9 ಮೇ 2024, 16:00 IST
Last Updated 9 ಮೇ 2024, 16:00 IST
ಅಕ್ಷರ ಗಾತ್ರ

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಜೆಡಿಎಸ್‌ನ ಕೆಂಗಣ್ಣಿಗೆ ಗುರಿಯಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ‘ರಕ್ಷಣೆ’ಗೆ ಒಕ್ಕಲಿಗ ಸಮುದಾಯ ಪ್ರತಿನಿಧಿಸುವ ನಾಲ್ವರು ಸಚಿವರು ಮುಂದಾಗಿದ್ದು, ಈ ಪ್ರಕರಣದಲ್ಲಿ ಶಿವಕುಮಾರ್‌ ಮಧ್ಯ ಪ್ರವೇಶಿಲ್ಲ ಎಂದು ಬಲವಾಗಿ ಸಮರ್ಥಿಸಿಕೊಂಡರು.

ಸಚಿವರಾದ ಎನ್‌. ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ, ರಾಮಲಿಂಗಾರೆಡ್ಡಿ ಮತ್ತು ಎಂ.ಸಿ. ಸುಧಾಕರ್‌ ಅವರು ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಪ್ರಜ್ವಲ್‌ ರೇವಣ್ಣ ಅವರದ್ದೆನ್ನಲಾದ ಅಶ್ಲೀಲ ವಿಡಿಯೊ ಹಂಚಿಕೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪಾತ್ರವಿಲ್ಲ. ಅಲ್ಲದೇ, ಈ ಪ್ರಕರಣದಲ್ಲಿ ಅನಗತ್ಯವಾಗಿ ಒಕ್ಕಲಿಗ ಸಮುದಾಯವನ್ನು ಎಳೆದು ತರಬಾರದು ಎಂದು ಅವರು ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದರು.

ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮಾತನಾಡಿ, ‘ವಿಡಿಯೋ ಮಾಡಿಕೊಂಡವರ ಕೃತ್ಯದ ಬಗ್ಗೆ ಮಾತನಾಡುವುದನ್ನು ಬಿಟ್ಟು, ವಿಡಿಯೊ ಹಂಚಿಕೆ ಬಗ್ಗೆ ಮಾತನಾಡಲಾಗುತ್ತಿದೆ. ಈ ಅನಾಚಾರವನ್ನು ಬೇರೆ ಯಾರೋ ವಿಡಿಯೊ ಮಾಡಿದ್ದಲ್ಲ. ಸ್ವತಃ ಅವರೇ ಮಾಡಿಕೊಂಡಿರುವುದು. ಇದು ಹಾಸನದಲ್ಲಿಯೇ ಎಲ್ಲರಿಗೂ ಹಂಚಿಕೆ ಆಗಿದೆ. ಸಾಮಾಜಿಕ ಜಾಲತಾಣಗಳಿಗೆ ಸೋರಿಕೆ ಆದ ನಂತರ ಯಾವುದೂ ಯಾರ ಹಿಡಿತಕ್ಕೂ ಸಿಗುವುದಿಲ್ಲ. ವಿಚಾರ ಗಾಳಿಗೆ ಹೋದ ಮೇಲೆ ಯಾವ ದಿಕ್ಕಿಗೆ ಹೋಗುತ್ತದೆ ಎನ್ನುವುದು ಯಾರಿಗೂ ತಿಳಿಯುವುದಿಲ್ಲ’ ಎಂದರು.

ಇಂತಹ ಸೂಕ್ಷ್ಮವಾದ ವಿಚಾರವನ್ನು ಜೆಡಿಎಸ್‌ನವರು ಬೀದಿ ರಂಪ ಮಾಡುತ್ತಿದ್ದಾರೆ. ಯಾವ ವಿಚಾರಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಯಾವ ಸಾಧನೆ ಮಾಡಿದ್ದಾರೆ ಎಂದು ಪ್ರತಿಭಟನೆಗೆ ರಾಜ್ಯದಾದ್ಯಂತ ಕರೆ ಕೊಟ್ಟಿದ್ದಾರೆ? ಈ ವಿಚಾರ ರಾಜಕೀಯಗೊಳಿಸಲು ದಳದವರು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.

‘ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟದಿಂದ ವಜಾ ಮಾಡಲು, ತೆಗೆದು ಹಾಕಲು ಅವರೇನು ಕೋಳಿ ಮರಿಯೇ? ಸಿದ್ದರಾಮಯ್ಯ, ರಾಹುಲ್‌ಗಾಂಧಿ ಅವರನ್ನು ಏಕವಚನದಲ್ಲಿ ಸಂಬೋಧಿಸುತ್ತಿದ್ದಾರೆ. ಅವರು ತಾವೇ ಉನ್ನತ ಮಟ್ಟದ ವ್ಯಕ್ತಿ ಎಂದುಕೊಂಡಿದ್ದಾರೆ. ನಮಗೂ ಜೋರಾಗಿ ಏಕ ವಚನದಲ್ಲಿ ಮಾತನಾಡಲು ಬರುತ್ತದೆ’ ಎಂದರು.

ಒಕ್ಕಲಿಗ ಸಮಾಜ ಎಳೆದು ತರಬೇಡಿ:

‘ಈ ಪ್ರಕರಣದಲ್ಲಿ ಒಕ್ಕಲಿಗ ಸಮಾಜವನ್ನು ಎಳೆದು ತರುವುದು ಒಳ್ಳೆಯದಲ್ಲ. ನಾವು, ನೀವು ಈ ಸಮಾಜಕ್ಕೆ ಕಟ್ಟಾಳುಗಳಲ್ಲ. ಸಂದರ್ಭ ಬಂದಾಗ ಸಮಾಜ ನಮ್ಮನ್ನು, ನಿಮ್ಮನ್ನು ಬೆಂಬಲಿಸುತ್ತದೆ. ಸಮಾಜವು ಒಂದಷ್ಟು ಜನರಿಗೆ ಹೆಚ್ಚು, ಕಡಿಮೆ ಆಶೀರ್ವಾದ ಮಾಡಿರಬಹುದು. ಆದರೆ ಎಲ್ಲವೂ ನಮ್ಮದೇ ಹಿಡಿತದಲ್ಲಿದೆ ಎಂದು ಭಾವಿಸುವುದು ತಪ್ಪು. ನೀವು ಏನು ಮಾಡಿದರೂ ಒಕ್ಕಲಿಗರು ಬೆಂಬಲಿಗಕ್ಕೆ ನಿಲ್ಲುತ್ತಾರೆ ಎಂದುಕೊಂಡಿದ್ದರೆ ಅದು ತಪ್ಪು’ ಎಂದು ಚಲುವರಾಯಸ್ವಾಮಿ ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT