ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕಾಗಿ ಹೋರಾಡುವ ತಾಕತ್ತು ಇರುವುದು ಕಾಂಗ್ರೆಸ್‌ಗೆ ಮಾತ್ರ: ಕೃಷ್ಣ ಬೈರೇಗೌಡ

Published 23 ಏಪ್ರಿಲ್ 2024, 16:18 IST
Last Updated 23 ಏಪ್ರಿಲ್ 2024, 16:18 IST
ಅಕ್ಷರ ಗಾತ್ರ

ಯಲಹಂಕ: ‘ಕರ್ನಾಟಕದ ಪರವಾಗಿ ಹೋರಾಡುವ ಕೆಚ್ಚೆದೆ, ಧೈರ್ಯ, ದಮ್ಮು, ತಾಕತ್ತು ಇರುವುದು ಕಾಂಗ್ರೆಸ್‌ ಸರ್ಕಾರ ಮತ್ತು ಪಕ್ಷಕ್ಕೆ ಮಾತ್ರ. ಬರ ಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿಳಂಬ ಧೋರಣೆಯ ವಿರುದ್ಧ ದೂರು ದಾಖಲಿಸಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕದ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ವಿ. ರಾಜೀವ್‌ ಗೌಡ ಪರವಾಗಿ ಹುಣಸಮಾರನಹಳ್ಳಿ, ಮೈಲನಹಳ್ಳಿ ಹಾಗೂ ಬಾಗಲೂರು ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಬರಗಾಲ ಆವರಿಸಿ ರೈತರು ಸಂಕಷ್ಟದಲ್ಲಿದ್ದು, ಪರಿಹಾರ ಬಿಡುಗಡೆ ಮಾಡಬೇಕೆಂದು ಪ್ರಸ್ತಾವ‌ ಸಲ್ಲಿಸಿ ಏಳು ತಿಂಗಳು ಕಳೆದಿದೆ. ಅಂದಿನಿಂದ ನಿರಂತರವಾಗಿ ಪ್ರಧಾನಿ, ಗೃಹ ಸಚಿವರು ಸೇರಿದಂತೆ ಸಂಬಂಧಿಸಿದ ಎಲ್ಲ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದರೂ ಪರಿಹಾರ ನೀಡಿರಲಿಲ್ಲ. ಕೊನೆಗೆ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ದೂರು ದಾಖಲಿಸಿದೆವು. ನಂತರ ಈ ವಾರದಲ್ಲಿ ಪರಿಹಾರ ಬಿಡುಗಡೆ ಮಾಡುವುದಾಗಿ ಬಿಜೆಪಿಯವರು ಒಪ್ಪಿಕೊಂಡರು’ ಎಂದರು.

‘ಬಿಜೆಪಿಗೆ ಈ ಹಿಂದೆ ಎರಡು ಬಾರಿ ಇದ್ದಂತಹ ವಾತಾವರಣ ಈಗಿಲ್ಲ. 10 ವರ್ಷ ಬಿಜೆಪಿಯವರಿಗೆ ಅಧಿಕಾರ ನೀಡಿ ಜನರು ಬೇಸತ್ತಿದ್ದು, ಬಿಜೆಪಿ ಸರ್ಕಾರ ಎಂದರೆ, ಕರ್ನಾಟಕಕ್ಕೆ ಅನ್ಯಾಯ ಎಂಬಂತಾಗಿದೆ. ನಾವು ಕಟ್ಟಿರುವ ತೆರಿಗೆಯ ಪಾಲು ಕೇಳಿದರೆ ನಮ್ಮನ್ನೇ ಅವಮಾನಿಸುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇಂತಹ ಅನ್ಯಾಯ ಮತ್ತು ಅವಮಾನಕ್ಕೆ ಈ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಬೇಕು’ ಎಂದು ತಿಳಿಸಿದರು.

‘ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸುವಂತೆ ಮಾಡುವುದು ನಮ್ಮ ಕಾರ್ಯಕರ್ತರು ಮತ್ತು ಮುಖಂಡರ ಕೈಲಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಣಾಳಿಕೆಯಲ್ಲಿ ನೀಡಿರುವ ಯೋಜನೆಗಳ ಕುರಿತು ಪ್ರತಿ ಗ್ರಾಮಗಳಲ್ಲಿ ಮನೆಮನೆಗೆ ತೆರಳಿ ಜನರಿಗೆ ಅರಿವು ಮೂಡಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೆ. ಅಶೋಕನ್‌, ದಾನೇಗೌಡ, ಜಾಲಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌.ಕೆ. ಮಹೇಶ್‌ ಕುಮಾರ್‌, ಬೆಂಗಳೂರು ಉತ್ತರ ಜಿಲ್ಲಾ ಎಸ್‌.ಸಿ. ಘಟಕದ ಅಧ್ಯಕ್ಷ ಕೋಗಿಲು ವೆಂಕಟೇಶ್‌, ಗ್ರಾಮ ಪಂಚಾಯಿತಿ ಅಧ್ಯಕ್ಷ ನಂಜೇಗೌಡ, ಮಾಜಿ ಅಧ್ಯಕ್ಷರಾದ ಜೆ. ಮುನೇಗೌಡ, ಲಕ್ಷ್ಮೀಪತಿ, ಮುಖಂಡರಾದ ಉದಯಶಂಕರ್‌, ಬಿ.ಕೆ. ನಾರಾಯಣಸ್ವಾಮಿ, ಜೆ. ಶ್ರೀನಿವಾಸ, ವೆಂಕಟರಾಜು, ಡಿ.ಜಗನ್ನಾಥ್‌, ಯಡಿಯೂರು ಶಾಂತಕುಮಾರ್‌ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT