ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತಿಯರನ್ನು ವಾಯುಪಡೆಗೆ ಸೆಳೆಯಲು ಸ್ಕೈ ಡೈವಿಂಗ್‌ 

Last Updated 23 ಫೆಬ್ರವರಿ 2019, 11:20 IST
ಅಕ್ಷರ ಗಾತ್ರ

ಬೆಂಗಳೂರು: 'ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಶಸ್ತ್ರ ಪಡೆಗಳಿಗೆ ಬರಬೇಕು. ಅದಕ್ಕೆ ಪ್ರೇರಣೆ ಒದಗಿಸುವುದು ಈ ಸ್ಕೈ ಡೈವಿಂಗ್‌ನ ಮುಖ್ಯ ಉದ್ದೇಶವಾಗಿತ್ತು' ಎಂದು ಸಂಗೀತಾ ಹೆಮ್ಮೆಯಿಂಧ ಹೇಳಿದರು.

'ವೈಮಾನಿಕ ಕ್ಷೇತ್ರದಲ್ಲಿ ಮಹಿಳೆಯರು' ಆಶಯದ ಭಾಗವಾಗಿ 'ಏರೊ ಇಂಡಿಯಾ 2019' ವೈಮಾನಿಕ ಪ್ರದರ್ಶನದ ಭಾಗವಾಗಿ ವಾಯುಪಡೆಯು ಶನಿವಾರ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಅದರ ಭಾಗವಾಗಿ ಐವರು ಮಹಿಳೆಯರಿದ್ದ ತಂಡ 5000 ಅಡಿ ಎತ್ತರದಿಂದ ಜಿಗಿದು ಇತಿಹಾಸ ನಿರ್ಮಿಸಿದರು. ಅವರು ಭೂಮಿಯ ಮೇಲೆ ಕಾಲೂರಲು ತೆಗೆದುಕೊಂಡ ಅವಧಿ ಎಂಟು ನಿಮಿಷಗಳು.

ಈ ತಂಡದ ಭಾಗವಾಗಿದ್ದ ಸಂಗೀತಾ ಕನ್ನಡವನ್ನು ಚೆನ್ನಾಗಿ ಮಾತನಾಡುತ್ತಾರೆ. '10ವರ್ಷಗಳ ನಂತರ ಮಹಿಳೆಯರು ಮತ್ತೆ ಯುದ್ಧವಿಮಾನ ಹಾರಿಸಲು ಅವಕಾಶ ಪಡೆದುಕೊಂಡಿದ್ದಾರೆ. ಇದು ನಮಗೆ ಹೆಮ್ಮೆಯ ಕ್ಷಣ. ನಮ್ಮ ಸಶಸ್ತ್ರ ಪಡೆಗಳ ಪ್ರಗತಿಪರ ಚಿಂತನೆಯ ದ್ಯೋತಕ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಸಶಸ್ತ್ರಪಡೆಗಳಿಗೆ, ವಾಯುಪಡೆಗೆ ಸೇರಲು ಪ್ರೇರಣೆ ಒದಗಿಸುವುದು ನಮ್ಮ ಮುಖ್ಯ ಉದ್ದೇಶವಾಗಿತ್ತು' ಎಂದು ಅವರು ಖುಷಿ ಹಂಚಿಕೊಂಡರು.

'ಕಳೆದ 20 ವರ್ಷಗಳಿಂದ ಸ್ಕೈ ಡೈವಿಂಗ್‌ ಅಭ್ಯಾಸ ಮಾಡುತ್ತಿದ್ದೇನೆ. 30 ಸಾವಿರ ಅಡಿಗಳಷ್ಟು ಎತ್ತರದಿಂದ ಜಿಗಿದಿರುವುದು ನನ್ನ ಈವರೆಗಿನ ಅತ್ಯುತ್ತಮ ದಾಖಲೆ. ಅಂಡಮಾನ್‌ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿರುವ ಕಾರ್ಣಿಕ್ ವಾಯುನೆಲೆಯಲ್ಲಿ ಸ್ಕೈ ಡೈವಿಂಗ್‌ ಮಾಡಿದ್ದು ಅತ್ಯುತ್ತಮ ಅನುಭವ. ಅಲ್ಲಿ ಕೇವಲ ಮೂರು ಕಿ.ಮೀ. ಮಾತ್ರ ಭೂಮಿ ಇದೆ. ಒಂದೆಡೆ ದಟ್ಟ ಅರಣ್ಯವಿದ್ದರೆ ಮತ್ತೊಂದೆಡೆ ವಿಶಾಲ ಸಾಗರ. ಸ್ಕೈ ಡೈವಿಂಗ್‌ ಮಾಡುವವರಿಗೆ ಸವಾಲೆಸೆಯುವ ತಾಣ ಅದು. 'ನಾನು ವಾಯುಪಡೆಗೆ ಸೇರಲು ತಂದೆಯೇ ಸ್ಫೂರ್ತಿ. ಮೊದಲು ಮನಃಶಾಸ್ತ್ರಜ್ಞೆಯಾಗಿ ಕೆಲಸ ಮಾಡುತ್ತಿದ್ದೆ' ಎಂದು ಅವರು ನುಡಿದರು.

ತಮ್ಮ ಅನುಭವ ಹಂಚಿಕೊಂಡ ರಾಜಸ್ಥಾನ ಮೂಲದ ಫ್ಲೈಯಿಂಗ್ ಆಫೀಸರ್ ತುಹಿನಾ ಗೌರ್, 'ನಾನು ಯುದ್ಧವಿಮಾನದ ಪೈಲಟ್. ಸ್ಕೈ ಡೈವಿಂಗ್‌ ಸವಾಲೊಡ್ಡುವ ಸಾಹಸ. ನಾನು ಸ್ಕೈ ಡೈವಿಂಗ್‌ ಹೋಗುತ್ತೇನೆ ಎಂದು ನನ್ನ ವಿಂಗ್ ಕಮಾಂಡರ್‌ ಬಳಿ ಅನುಮತಿ ಪಡೆಯಲು ಹೋದಾಗ, 'ಇಳಿಯುವಾಗ ಒಂದು ವೇಳೆ ಗಾಯವಾದರೆ ನೀನು ಪೈಲಟ್ ಕೆಲಸಕ್ಕೆ ಮೆಡಿಕಲಿ ಅನ್‌ಫಿಟ್ ಆಗಬಹುದು' ಎಂದು ಅವರು ಹಿಂಜರಿದರು. ಆದರೂ ಕೊನೆಗೆ ಅನುಮತಿ ನೀಡಿದರು' ಎಂದು ಅವರು ತಾವು ಸಾಗಿ ಬಂದ ಹಾದಿಯನ್ನು ಸ್ಮರಿಸಿಕೊಂಡರು.

'ನಮ್ಮ ಸಾಹಸ ಮತ್ತು ಅದರಿಂದ ಗಳಿಸಿದ ಕೀರ್ತಿ ಸಂಪೂರ್ಣವಾಗಿ ಭಾರತೀಯ ಮಹಿಳೆಯರಿಗೆ ಸಲ್ಲಬೇಕು' ಎಂದು ಸ್ಮರಿಸಿದರು ಆಶಾ ಜ್ಯೋತಿರ್ಮಯಿ. ನಮ್ಮ ಸಶಸ್ತ್ರಪಡೆಗಳಲ್ಲಿ 10ವರ್ಷಗಳ ಹಿಂದೆ ಇದ್ದ ಪರಿಸ್ಥಿತಿ ಈಗ ಇಲ್ಲ. ವಾಯುಪಡೆಯಲ್ಲಿ ಮಹಿಳೆಯರಿಗೆ ಇರುವ ಅವಕಾಶಗಳ ಬಗ್ಗೆ ಯುವತಿಯಲ್ಲಿ ಜಾಗೃತಿ ಮೂಡಿಸಬೇಕಿದೆ'ಎಂದು ಅವರು ಹೇಳಿದರು.

ಐವರು ಯುವತಿಯರಿಗೆ ಕೇವಲ 15ದಿನಗಳಲ್ಲಿ ಸ್ಕೈ ಡೈವಿಂಗ್‌ ತರಬೇತಿ ನೀಡಿದವರು ವಿಂಗ್‌ ಕಮಾಂಡರ್ ವಿಶಾಲ್ ಲಾಕೇಶ್. 'ಸ್ಕೈ ಡೈವಿಂಗ್‌ ಬಗ್ಗೆ ನಮ್ಮ ಅಧಿಕಾರಿಗಳು ಕೇವಲ 15ದಿನಗಳ ಹಿಂದೆ ನಿರ್ಧರಿಸಿದರು. ಸತತ ತರಬೇತಿಯಿಂದ ಇದು ಸಾಧ್ಯವಾಯಿತು. ಏರ್‌ ಡೆವಿಲ್ಸ್ ಹೆಸರಿನ ಸ್ಕೈ ಡೈವಿಂಗ್‌ ತಂಡ ಇನ್ನು ಮುಂದೆ ವಾಯುಪಡೆಯ ಭಾಗವಾಗಲಿದೆ. ನಮ್ಮ ಯುವತಿಯುರು ಇಂದು ಇತಿಹಾಸವನ್ನೇ ನಿರ್ಮಿಸಿದರು' ಎಂದು ಅವರು ಖುಷಿ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT