ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಸ್‌ಪೋರ್ಟ್‌ ಮುಟ್ಟುಗೋಲು ಪ್ರಕರಣ: ಶುಶ್ರೂಷಕಿ ಮನವಿ, ಸರ್ಕಾರಕ್ಕೆ HC ನೋಟಿಸ್

‘ಸುರಕ್ಷತೆ ದೃಷ್ಟಿಯಿಂದ ಯೆಮನ್‌ ದೇಶಕ್ಕೆ ಪ್ರಯಾಣ ಸಲ್ಲ’
Published 5 ಜೂನ್ 2024, 16:12 IST
Last Updated 5 ಜೂನ್ 2024, 16:12 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಟ್ಟುಗೋಲು ಹಾಕಿಕೊಂಡಿರುವ ನನ್ನ ಪಾಸ್‌ಪೋರ್ಟ್‌ ಅನ್ನು ಹಿಂದಿರುಗಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿರುವ ಶುಶ್ರೂಷಕಿಯ ಮನವಿಯನ್ನು ನಾಲ್ಕು ವಾರಗಳಲ್ಲಿ ಪರಿಗಣಿಸಿ ನಿಮ್ಮ ನಿರ್ಧಾರ ತಿಳಿಸಿ’ ಎಂದು ಹೈಕೋರ್ಟ್‌, ವಿದೇಶಾಂಗ ಸಚಿವಾಲಯಕ್ಕೆ ನಿರ್ದೇಶಿಸಿದೆ.

ಈ ಸಂಬಂಧ ಬೆಳ್ತಂಗಡಿ ತಾಲ್ಲೂಕಿನ ಗಂಡಿಬಾಗಿಲು ನೆರಿಯಾ ನಿವಾಸಿ ಶೇನಿ ಜಾಯ್‌ (48) ಸಲ್ಲಿಸಿರುವ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿ ವಿಲೇವಾರಿ ಮಾಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಸ್‌.ಸುಶಾಂತ್‌ ವೆಂಕಟೇಶ್‌ ಪೈ, ‘ಅರ್ಜಿದಾರರು ಶುಶ್ರೂಷಕಿಯಾಗಿ ಯೆಮನ್ ದೇಶದಲ್ಲಿ ಕೆಲಸದಲ್ಲಿದ್ದರು. ಅವರಿಗೆ ಕೇಂದ್ರದ ಅಧಿಸೂಚನೆಯ ಬಗ್ಗೆ ಮಾಹಿತಿ ಇರಲಿಲ್ಲ. 2023ರ ಪ್ರಯಾಣದ ವೇಳೆ ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಂಡ ಬಳಿಕ ವಲಸೆ ಅಧಿಕಾರಿಗಳು ಷೋಕಾಸ್ ನೋಟಿಸ್ ಜಾರಿ ಮಾಡಿದ್ದರು. ತದನಂತರ ಅರ್ಜಿದಾರರು ತಾವು ಯಾಕೆ ಪ್ರಯಾಣ ಬೆಳೆಸಬೇಕಾಯಿತು ಎಂಬ ಬಗ್ಗೆ ವಿವರಣೆ ನೀಡಿದ್ದರು. ಆದರೂ ಅವರ ಪಾಸ್‌ಪೋರ್ಟ್ ಹಿಂದಿರುಗಿಸಿಲ್ಲ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಇದಕ್ಕೆ ಪ್ರತಿಯಾಗಿ, ಕೇಂದ್ರದ ಪರ ಹಾಜರಿದ್ದ ಡೆಪ್ಯುಟಿ ಸಾಲಿಸಿಟರ್‌ ಜನರಲ್‌ ಎಚ್.ಶಾಂತಿಭೂಷಣ್‌, ‘ಅರ್ಜಿದಾರರು ಪಾಸ್‌ಪೋರ್ಟ್ ಹಿಂದಿರುಗಿಸುವಂತೆ ನಮಗೆ ಯಾವುದೇ ರೀತಿಯ ಅರ್ಜಿ ಸಲ್ಲಿಸಿಲ್ಲ. ಅಷ್ಟಕ್ಕೂ ಯೆಮೆನ್‌ನಲ್ಲಿ ನಾಗರಿಕ ಜನಜೀವನ ಅಸ್ಥಿರತೆಯಲ್ಲಿದೆ. ಸುರಕ್ಷತೆ ದುರ್ಬಲಗೊಂಡಿದೆ ಎಂಬ ಕಾರಣಕ್ಕಾಗಿಯೇ ಯೆಮೆನ್‌ ಪ್ರವಾಸ ನಿಷೇಧಿಸಿ ಕೇಂದ್ರ ವಿದೇಶಾಂಗ ಸಚಿವಾಲಯ 2017ರ ಸೆಪ್ಟೆಂಬರ್ 26ರಂದು ಅಧಿಸೂಚನೆ ಹೊರಡಿಸಿದೆ. ಅರ್ಜಿದಾರರು ಅಧಿಸೂಚನೆ ಉಲ್ಲಂಘಿಸಿರುವ ಕಾರಣ ಪಾಸ್‌ಪೋರ್ಟ್‌ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ’ ಎಂದು ವಿವರಿಸಿದರು.

ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ’ಅರ್ಜಿದಾರರು ಈ ಆದೇಶ ಪಡೆದ ನಾಲ್ಕು ವಾರಗಳಲ್ಲಿ ಕೇಂದ್ರಕ್ಕೆ ಮನವಿ ಸಲ್ಲಿಸಬೇಕು. ಅದನ್ನು ಮುಂದಿನ ನಾಲ್ಕು ವಾರಗಳಲ್ಲಿ ಪರಿಶೀಲಿಸಿ ಸೂಕ್ತ ನಿರ್ಧಾರ ತಿಳಿಸಬೇಕು’ ಎಂದು ಸೂಚಿಸಿತು.

‘ರಾಷ್ಟ್ರೀಯ ಭದ್ರತೆ ಹಾಗೂ ಭಾರತೀಯ ನಾಗರಿಕರ ಸುರಕ್ಷತೆ ದೃಷ್ಟಿಯಿಂದ ಮಧ್ಯಪ್ರಾಚ್ಯ ದೇಶಗಳಲ್ಲಿ ಒಂದಾದ ಯೆಮೆನ್‌ ದೇಶಕ್ಕೆ ಪ್ರವಾಸ ಕೈಗೊಳ್ಳುವುದನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮ ಸರಿಯಾಗಿಯೇ ಇದೆ’ ಎಂದು ನ್ಯಾಯಪೀಠ ಈ ಮೊದಲು ವಿಚಾರಣೆ ವೇಳೆ ಮೌಖಿಕ ಸಹಮತ ವ್ಯಕ್ತಪಡಿಸಿತ್ತು.

ಪ್ರಕರಣವೇನು?: ‘ಅರ್ಜಿದಾರರು 2010–11ರಿಂದಲೇ ಯೆಮೆನ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಪಾಸ್‌ಪೋರ್ಟ್‌ ಅನ್ನು ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ 2023ರ ಆಗಸ್ಟ್‌ 20ರಂದು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 2017ರ ಅಧಿಸೂಚನೆಯ ಅನುಸಾರ ಮತ್ತು ಪಾಸ್‌ಪೋರ್ಟ್‌ ಕಾಯ್ದೆ–1967ರ ಕಲಂ19ರ ಅನ್ವಯ ಅವರ ಪಾಸ್‌ಪೋರ್ಟ್‌ ಅನ್ನು ಅಮಾನ್ಯಗೊಳಿಸಲಾಗಿದೆ’ ಎಂಬುದು ಅರ್ಜಿದಾರರ ಆಕ್ಷೇಪವಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT