ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೆನ್‌ಡ್ರೈವ್‌ ಸಂತ್ರಸ್ತೆಯರ ಸಂಕಟ | ಬಿಕ್ಕುತ್ತಿವೆ ತೋಟದ ಮನೆಗಳು!

Published 21 ಮೇ 2024, 22:30 IST
Last Updated 21 ಮೇ 2024, 22:30 IST
ಅಕ್ಷರ ಗಾತ್ರ

ಹಾಸನ: ಲೈಂಗಿಕ ವಿಕೃತಿಗೆ ಸಾಕ್ಷಿಯಾಗಿರುವ ಹೊಳೆನರಸೀಪುರದ ತೆಂಗಿನ ತೋಟಗಳ ನಡುವಿನ ಮನೆಗಳು, ಹಾಸನದಲ್ಲಿ ಸಂಸದರು ಬಳಕೆ ಮಾಡುತ್ತಿದ್ದ ವಸತಿಗೃಹದ ಗೋಡೆಗಳು ಈಗ ಸಂತ್ರಸ್ತೆಯರನ್ನು ನೆನೆದು ಬಿಕ್ಕುತ್ತಿವೆ...

ಕಾಮದ ಅಮಲಿಗೆ ತಮ್ಮ ಊರ ಸುತ್ತಲಿನ ತೋಟದ ಮನೆಗಳು, ಮಾಜಿ ಪ್ರಧಾನಿಗೆ ಗೌರವಾರ್ಥ ನೀಡಿದ್ದ ಹಾಸನದ ಸಂಸದರ ವಸತಿ ಗೃಹ ಬಳಕೆಯಾಗುತ್ತಿತ್ತು ಎಂಬ ಸಂಗತಿಯನ್ನು ತಿಳಿದು ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದಾರೆ. ಮೊದಲೇ ತಿಳಿದಿದ್ದರೆ ಬಲಿಪಶುಗಳಾಗುತ್ತಿರುವ ಅನೇಕ ಹೆಣ್ಣು ಜೀವಗಳ ರಕ್ಷಣೆ ಮಾಡಬಹುದಿತ್ತು
ಎಂಬ ಅಪರಾಧಿ ಭಾವ ಪಕ್ಷದ ಕಾರ್ಯಕರ್ತರು, ಪ್ರಜ್ಞಾವಂತರನ್ನು ಕಾಡುತ್ತಿದೆ.

‘ನಾವೆಲ್ಲ ಎತ್ತಿ ಆಡಿಸಿದ ಮಗು ಅವನು, ಅಧಿಕಾರದ ಮದ ಆತನನ್ನು ವಿಕೃತ ಕಾಮಿಯಾಗಿ ರೂಪಿಸಬಹುದೆಂದು ಅರೆಕ್ಷಣವೂ ಯೋಚಿಸಿರಲಿಲ್ಲ. ಗೋಮುಖ ವ್ಯಾಘ್ರ ಎನ್ನದೆ ಇನ್ನೇನು ಹೇಳಲಿ. ಆತ ಇಷ್ಟೊಂದು ವಿಕೃತನಾಗಿದ್ದ ಎಂಬುದನ್ನು ಯಾವೊಬ್ಬ ಹೆಣ್ಣು ಮಗಳು ಹೇಳಿಕೊಂಡಿದ್ದರೂ, ನಾನು ಈ ಮೊದಲೇ ಅವನ ತಾಯಿಯನ್ನು ಎಚ್ಚರಿಸುತ್ತಿದ್ದೆ’ ಎನ್ನುವಾಗ ಹೊಳೆನರಸೀಪುರದ ಜೆಡಿಎಸ್‌ ಕಾರ್ಯಕರ್ತೆಯ ಕಣ್ಣಂಚಿನಲ್ಲಿ ನೀರು ಜಿನುಗಿತ್ತು. ಮತ್ತೆ ಅವರ ಬಾಯಿಂದ ಮಾತೇ ಹೊರಡಲಿಲ್ಲ.

ನಮಗೂ ಅಚ್ಚರಿ:
ದೇವರಾಜೇಗೌಡರು ಆರು ತಿಂಗಳ ಹಿಂದೆ ಸಿ.ಡಿ ಬಿಡುಗಡೆ ಮಾಡುವುದಾಗಿ ಹೇಳಿದಾಗ ಇದು ಬರೀ ಬಾಯ್ಮಾತೆಂದು ಸುಮ್ಮನಾಗಿದ್ದೆವು. ಹಿಂದೆಯೂ ಇಂತಹ ಘಟನೆಗಳು ನಡೆದಿದ್ದವು ಎಂದು ಕೇಳಿದ್ದೆವು. ಆಗ ಮೊಬೈಲ್ ಫೋನ್‌ಗಳು, ಪೆನ್‌ಡ್ರೈವ್‌ಗಳು ಹುಟ್ಟಿರಲಿಲ್ಲ. ಇಲ್ಲದಿದ್ದರೆ, ದಶಕಗಳ ಹಿಂದೆಯೇ ಇಂತಹ ವಿಕೃತ ಕಾಮದ ಪೆನ್‌ಡ್ರೈವ್ ಸದ್ದು ಮಾಡುತ್ತಿತ್ತು’ ಎಂದು ಒಗಟಾಗಿ ಹೇಳುತ್ತ ಮಾತಿಗಿಳಿದರು ಹೊಳೆನರಸೀಪುರದ ವಕೀಲರೊಬ್ಬರು.

‘ಮನೆಗೆಲಸವರು, ಅಡುಗೆಯವರು, ರಸ್ತೆ ಬದಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿರುವವರು ಆಗ ಬಲಿಪಶುಗಳಾಗಿದ್ದರು. ಈಗ ಪಾತ್ರ ಬದಲಾಗಿದೆ ಅಷ್ಟೆ. ಶ್ರೀಮಂತ ಮನೆತನದ ಮಹಿಳೆಯರು, ಕೆಲವು ಮಹಿಳಾ ಅಧಿಕಾರಿಗಳು, ಜನಪ್ರತಿನಿಧಿಗಳು ಬಲಿಯಾಗಿದ್ದಾರೆ. ಆಗ ದುಡಿದು ತಿನ್ನುವವರಿಗೆ ಅಷ್ಟಿಷ್ಟು ಕಾಸು ಅವರ ಧ್ವನಿ ಅಡಗಿಸುತ್ತಿತ್ತು. ಈಗ ಆಸ್ತಿ, ಮನೆ, ಹಣ ಅವರನ್ನು ತೆಪ್ಪಗಾಗಿಸಿದೆ.

ಮೌನಕ್ಕೆ ಶರಣಾದ ಕಾರ್ಯಕರ್ತೆಯರು
ಜಿಲ್ಲೆಯಲ್ಲಿ ಜೆಡಿಎಸ್‌ ಕಾರ್ಯಕರ್ತೆಯರು ಎಂದು ಗರ್ವದಿಂದ ಹೇಳಿಕೊಳ್ಳುತ್ತಿದ್ದವರು ಪೆನ್‌ಡ್ರೈವ್ ಹಂಚಿಕೆ ಪ್ರಕರಣದ ನಂತರ ತಲೆಯೆತ್ತಿ ಓಡಾಡಲಾರದಷ್ಟು ಮುದುಡಿದ್ದಾರೆ. ಮನೆಯಲ್ಲಿ ನಾಲ್ಕು ಗೋಡೆಗಳ ನಡುವೆ ಬಂದಿಯಾಗಿರುವ ಕಾರ್ಯಕರ್ತಯರ ಮನದ ಮಾತು ಆಲಿಸಲು ‘ಪ್ರಜಾವಾಣಿ’ ತಂಡ ಭೇಟಿ ನೀಡಿದಾಗ, ‘ದಯವಿಟ್ಟು ನಮ್ಮನ್ನು ಕಲಕಬೇಡಿ, ಹಳದಿ ಕನ್ನಡಕ ತೊಟ್ಟವರ ನೋಟ, ಸಾಮಾಜಿಕ ಜಾಲತಾಣಗಳ ಟ್ರೋಲ್‌, ನಿತ್ಯ ನಮ್ಮನ್ನು ಇರಿದು ಕೊಲ್ಲುತ್ತಿವೆ’ ಎಂದವರೇ ಹಲವರು.

ಕೆಲವು ಕಾರ್ಯಕರ್ತರು ಸನಿಹಕ್ಕೆ ಬಂದು ಅನಾಮಿಕರಾಗಿ ತಮ್ಮ ಒಡಲಾಳದ ನೋವು ಹಂಚಿಕೊಂಡರು.

‘ಮೈಸೂರು, ಮಂಡ್ಯ, ಬೆಂಗಳೂರು ಎಲ್ಲೇ ಹೋಗಲಿ ಜೆಡಿಎಸ್‌ ಕಾರ್ಯಕರ್ತೆ ಯರು ಎಂದು ಅಹಂನಿಂದ ಹೇಳಿಕೊಳ್ಳುತ್ತಿದ್ದ ನಮಗೆ, ಈಗ ‘ಹಾಸನದವರು’ ಎನ್ನುವುದೇ ತೀರಾ ಮುಜುಗರ ಮೂಡಿಸುತ್ತಿದೆ. ಲೋಕಸಭೆ ಚುನಾವಣೆ ವೇಳೆ ಪ್ರಚಾರಕ್ಕೆ ಹೋಗಿರುವ ಪಾಪ ಪ್ರಜ್ಞೆ ಕಾಡುತ್ತಿದೆ’ ಎಂದು ಹಾಸನದ ಕಾರ್ಯಕರ್ತೆ ಯೊಬ್ಬರು ಹೇಳಿಕೊಂಡರು. ಅಧಿಕಾರಸ್ಥರ ದಾಹಕ್ಕೆ ಬಲಿಯಾಗಿರುವ ಹೆಣ್ಣು ಜೀವಗಳಿಗೆ ಸಾಂತ್ವನ ಬೇಕಾಗಿದೆ. ಇವ್ಯಾವುದರ ಅರಿವು ಇಲ್ಲದೆ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯರಾಗಿ ದುಡಿದವರಿಗೆ ಬೇಸರವಾಗಿದೆ. ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸಿ, ಸಾಂತ್ವನ ಹೇಳುವ ಕೆಲಸ ಪಕ್ಷದ ಹಿರಿಯರಿಂದಾದರೂ ಆಗಬೇಕಾಗಿದೆ ಎಂದು ಹಿರಿಯ ಕಾರ್ಯಕರ್ತೆಯೊಬ್ಬರು ಅಲವತ್ತುಕೊಂಡರು.

ಅಂದು– ಇಂದೂ ಹೆಣ್ಣಿನ ಅಸಹಾಯಕತೆ ದುರ್ಬಳಕೆಯಾಗಿದೆ’ ಎಂದು ಅವರು ನಿಟ್ಟುಸಿರು ಬಿಟ್ಟರು.
‘ಆತನ ವಕ್ರದೃಷ್ಟಿಗೆ ಬಲಿಯಾಗಿದ್ದಾರೆ ಎನ್ನಲಾದವರಲ್ಲಿ ಹೆಚ್ಚಿನವರೆಲ್ಲ ವಿವಾಹಿತರು. ತಾತ್ಕಾಲಿಕ ಉದ್ಯೋಗದ ಆಮಿಷ, ಕುಟುಂಬದ ರಕ್ಷಣೆ, ಸಹೋದರರಿಗೆ ಗುತ್ತಿಗೆ ಅಥವಾ ಇನ್ನಾವುದೇ ಕೆಲಸ, ಪತಿಯ ಅಧಿಕಾರದ ಆಸೆ ಇಂತಹ ಸಂಕೋಲೆಗೆ ಮಹಿಳೆ ಬಲಿಯಾಗಿದ್ದಾಳೆ. ಆಕೆಯನ್ನು ಬೆದರಿಸಿ, ಒಂಟಿಯಾಗಿರುವ ತೋಟದ ಮನೆಗಳು, ಸಂಸದರ ವಸತಿ ಗೃಹಗಳು ಅಥವಾ ಮಹಾನಗರಕ್ಕೆ ಕರೆದೊಯ್ದು ದುರ್ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಸ್ಥಳೀಯವಾಗಿ ಯಾರಿಗೂ ಗೊತ್ತಾಗದಂತೆ ಗೋಪ್ಯತೆ ಕಾಪಾಡಲಾಗುತ್ತಿತ್ತು. ಸಂಸದರ ತೀರಾ ಆಪ್ತ ವಲಯದಿಂದ ಈ ವಿಷಯ ಯಾವುದೇ ಕಾರಣಕ್ಕೂ ಹೊರಹೋಗದಂತೆ ಎಚ್ಚರ ವಹಿಸಲಾಗುತ್ತಿತ್ತು’ ಎಂದರು ಇನ್ನೊಬ್ಬ ವಕೀಲರು.‘ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿ ಎಲ್ಲ ನಿರ್ಬಂಧಗಳ ನಡುವೆಯೂ ಇಂತಹ ದುಷ್ಕೃತ್ಯಗಳು ನಡೆದಿವೆ ಎಂಬ ಸಣ್ಣ ಸುಳಿವೂ ಸ್ಥಳೀಯರಿಗೆ ಇರಲಿಲ್ಲ. ಈಗ ಪೆನ್‌ಡ್ರೈವ್ ಹಂಚಿಕೆಯ ಬೆನ್ನಲ್ಲಿ ಹೊರ ಬೀಳುತ್ತಿರುವ ಸತ್ಯಗಳು ದಿಗಲುಗೊಳಿಸುತ್ತಿವೆ. ನಾಲ್ಕು ಗೋಡೆಗಳ ನಡುವೆ ಅಸಹಾಯಕಳಾಗುವ ಹೆಣ್ಣನ್ನು ವಿವಸ್ತ್ರಗೊಳಿಸುವಂತೆ ಬೆದರಿಸಿ, ಆಕೆಯ ಚಿತ್ರ, ವಿಡಿಯೊಗಳನ್ನು ಮೊಬೈಲ್ ಫೋನ್‌ನಲ್ಲಿ ಸೆರೆ ಹಿಡಿದಿಟ್ಟುಕೊಳ್ಳುತ್ತಿದ್ದ ಆತ, ವಾಹನದಲ್ಲಿ ಪ್ರಯಾಣಿಸುವಾಗಲೂ ಅವನ್ನೆಲ್ಲ ವೀಕ್ಷಿಸುತ್ತಿದ್ದ. ಈ ಚಿತ್ರಗಳನ್ನೇ ಇಟ್ಟು ಬ್ಲ್ಯಾಕ್ ಮೇಲ್ ಅಸ್ತ್ರವಾಗಿ ಬಳಸುತ್ತಿದ್ದ, ಅದೇ ಕಾರಣಕ್ಕೆ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದ ಎಂದು ಆತನ ಆಪ್ತರು ಬಾಯ್ಬಿಟ್ಟಾಗ, ಪಾಪದ ಕೊಡ ತುಂಬಿದೆ ಎಂದು ನಾವು ಸ್ನೇಹಿತರೆಲ್ಲ ಮಾತನಾಡಿಕೊಂಡಿದ್ದೆವು’ ಎಂದ ಇನ್ನೊಬ್ಬ ವಕೀಲರು ತಮ್ಮ ಹೆಸರು ಪ್ರಕಟಿಸದಂತೆ ತಾಕೀತು ಮಾಡಿದರು.  

ಕೌನ್ಸೆಲಿಂಗ್ ನೆರವು
ನೊಂದ ಮಹಿಳೆಯರಿಗೆ ಅಗತ್ಯವಿದ್ದಲ್ಲಿ ಕೌನ್ಸೆಲಿಂಗ್ ನಡೆಸಲು ಅನನ್ಯ ಟ್ರಸ್ಟ್ ಮುಂದಾಗಿದೆ. ಟ್ರಸ್ಟ್‌ನಲ್ಲಿರುವ ವೈದ್ಯರು ನೆರವು ಬಯಸಿ ಬಂದವರ ಮಾಹಿತಿ ಗೋಪ್ಯವಾಗಿಡುತ್ತಾರೆ ಎಂದರು ಸಾಮಾಜಿಕ ಹೋರಾಟಗಾರ್ತಿ ಕೆ.ಟಿ. ಜಯಶ್ರೀ. ಪೆನ್‌ಡ್ರೈವ್‌ನಲ್ಲಿರುವ ಅಶ್ಲೀಲ ಚಿತ್ರಗಳು, ವಿಡಿಯೊಗಳು ಬಹುತೇಕರ ಮೊಬೈಲ್ ಫೋನ್ ಒಳಗೆ ನುಗ್ಗಿವೆ. ಇವುಗಳ ಅರಿವಿಲ್ಲದ ಈಗಷ್ಟೇ ಹರೆಯಕ್ಕೆ ಕಾಲಿಡುತ್ತಿರುವ ಮಕ್ಕಳು ಇದನ್ನು ನೋಡಿ ಮಾನಸಿಕ ಆಘಾತಕ್ಕೆ ಒಳಗಾಗಿರುವ ಸಾಧ್ಯತೆ ಇದೆ. ಅದನ್ನು ಪಾಲಕರ ಬಳಿ ಹೇಳಿಕೊಂಡರೆ ಅವರು ಬಯ್ಯಬಹುದೆಂಬ ಭಯ. ಮಕ್ಕಳಿಗೆ ತುರ್ತು ಸಾಮೂಹಿಕ ಕೌನ್ಸೆಲಿಂಗ್ ನೀಡಬೇಕಾಗಿದೆ. ಶಾಲೆಗಳು ಆರಂಭವಾದ ಮೇಲೆ ಶಿಕ್ಷಕರ ಮೂಲಕ ಮಕ್ಕಳಿಗೆ ತಿಳಿವಳಿಕೆ ನೀಡಬೇಕು ಎಂದರು ಸ್ತ್ರೀರೋಗ ತಜ್ಞೆ ಡಾ. ರಂಗಲಕ್ಷ್ಮಿ. ‘ತುಂಬಾ ತಾಯಂದಿರು ಆತಂಕಕ್ಕೆ ಒಳಗಾಗಿದ್ದಾರೆ. ತಮ್ಮ ಹೆಣ್ಣು ಮಕ್ಕಳ ಚಿತ್ರಗಳು ತಿರುಚಿ ವಿಡಿಯೊ, ಚಿತ್ರಗಳಾಗಿ ಬಂದರೆ ಎಂಬ ಭಯ ಕಾಡುತ್ತಿದೆ. ಎದೆಯೊಳಗಿನ ತಲ್ಲಣಗಳು ಅವರ ನಿದ್ದೆ ಕಸಿದಿವೆ. ಸಂಸ್ಕಾರ, ನೀತಿಪಾಠದ ಉಪದೇಶಗಳು ಬರೀ ಹೆಣ್ಣು ಮಕ್ಕಳಿಗಷ್ಟೇ ಸೀಮಿತವಲ್ಲ, ಮನೆಯ ಗಂಡು ಮಕ್ಕಳಿಗೂ ಚಿಕ್ಕಂದಿನಿಂದ ಸರಿ–ತಪ್ಪಿನ ಅರಿವು ಮೂಡಿಸಬೇಕು’ ಎಂದು ಸ್ತ್ರೀರೋಗ ತಜ್ಞೆ ಡಾ. ಸಾವಿತ್ರಿ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT