ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆನ್‌ ಡ್ರೈವ್ ಹಂಚಿಕೆ ಪಾಪದ ಕೆಲಸ: ಹೈಕೋರ್ಟ್‌

ಪೆನ್‌ ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ತೀವ್ರ ವೇದನೆ ವ್ಯಕ್ತಪಡಿಸಿದೆ.
Published 11 ಜೂನ್ 2024, 15:41 IST
Last Updated 11 ಜೂನ್ 2024, 15:41 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ದೃಶ್ಯಗಳನ್ನು ಸೆರೆಹಿಡಿದು ಪೆನ್ ಡ್ರೈವ್‌ನಲ್ಲಿ ಕಾಪಿ ಮಾಡಿ ಹಂಚಿರುವುದು ಅತ್ಯಂತ ಪಾಪದ ಕೆಲಸ ಹಾಗೂ ಯಾರೊಬ್ಬರೂ ಮಹಿಳೆಯನ್ನು ಕೆಟ್ಟದಾಗಿ ಬಿಂಬಿಸಬಾರದು’ ಎಂದು ಹೈಕೋರ್ಟ್ ಪೆನ್‌ ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ ತೀವ್ರ ವೇದನೆ ವ್ಯಕ್ತಪಡಿಸಿದೆ.

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪದ ಪ್ರಕರಣದಲ್ಲಿನ ಪೆನ್ ಡ್ರೈವ್ ವಿತರಣೆಗೆ ಸಂಬಂಧಿಸಿದಂತೆ ನನ್ನ ವಿರುದ್ಧ ಹಾಸನ ‘ಸೆನ್‌‘ (ಸೈಬರ್, ಎಕನಾಮಿಕ್‌ ಅಂಡ್‌ ನಾರ್ಕೊಟಿಕ್‌ ಕ್ರೈಂ) ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಬೇಕು’ ಎಂದು ಕೋರಿ ಹಾಸನದ,  ರವೀಂದ್ರ ನಗರದ ಶರತ್‌ ಬಿನ್‌ ಪರಮೇಶ್‌ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಚ್‌.ಪವನಚಂದ್ರ ಶೆಟ್ಟಿ, ’ಅರ್ಜಿದಾರರು ಪೆನ್‌ ಡ್ರೈವ್‌ಗಳನ್ನು ಹಂಚಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಶರತ್‌ ಕೈಯಿಂದ ಯಾವುದೇ ಪೆನ್‌ ಡ್ರೈವ್‌ ಅನ್ನು ವಶಪಡಿಸಿಕೊಂಡಿಲ್ಲ. ಕೇವಲ ಮಾಹಿತಿ ಇದೆ ಎಂದ ಮಾತ್ರಕ್ಕೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗದು’ ಎಂದರು.

ಇದನ್ನು ಬಲವಾಗಿ ಆಕ್ಷೇಪಿಸಿದ ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್ ಬಿ.ಎನ್‌.ಜಗದೀಶ್‌, ‘ಪೆನ್ ಡ್ರೈವ್‌ಗಳ ಕಾಪಿ ಮತ್ತು ವಿತರಣೆ ಪ್ರಕರಣದಲ್ಲಿ ಆರೋಪಿಯೇ ಪ್ರಮುಖ ವ್ಯಕ್ತಿಯಾಗಿದ್ದಾರೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ. ಹಾಗಾಗಿ, ನ್ಯಾಯಾಲಯ ಈ ಹಂತದಲ್ಲಿ ಯಾವುದೇ ಪರಿಹಾರ ನೀಡಬಾರದು’ ಎಂದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಕೋರ್ಟ್‌ ಸದ್ಯಕ್ಕೆ ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆರೋಪಿ ತನಿಖಾಧಿಕಾರಿಗಳ ಮುಂದೆ ಹಾಜರಾಗಲಿ’ ಎಂದು ವಿಚಾರಣೆಯನ್ನು ಒಂದು ವಾರ ಕಾಲ ಮುಂದೂಡಿತು.

ಅರ್ಜಿಯಲ್ಲಿ, ಹಾಸನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ಮೈತ್ರಿಕೂಟದ ಏಜೆಂಟ್‌ ಆಗಿ ಕೆಲಸ ನಿರ್ವಹಿಸಿದ್ದ ಫಿರ್ಯಾದುದಾರ ಪೂರ್ಣಚಂದ್ರ ತೇಜಸ್ವಿ ಹಾಗೂ ಹಾಸನ ಸೆನ್‌ ಠಾಣೆಯ ಅಧಿಕಾರಿಯನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ.

ಶರತ್‌ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ–2000ರ ಕಲಂ 67 (ಎ) ಹಾಗೂ ಭಾರತೀಯ ದಂಡ ಸಂಹಿತೆ–1860ರ ಕಲಂ 171 ಜಿ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಈ ಕುರಿತಂತೆ ಹಾಸನ ಮೂರನೇ ಹೆಚ್ಚುವರಿ ಜಿಲ್ಲಾ ಮ‌ತ್ತು ಸೆಷನ್ಸ್‌ ನ್ಯಾಯಾಲಯದಲ್ಲಿನ ವಿಚಾರಣೆಗೆ ತಡೆ ನೀಡುವಂತೆಯೂ ಅರ್ಜಿದಾರರು ಮಧ್ಯಂತರ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT