ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಮವಸ್ತ್ರ ಬಣ್ಣದ ಹಿಜಾಬ್‌ಗೆ ಅವಕಾಶ ಕೊಡಿ: ಅರ್ಜಿದಾರರ ಪರ ವಕೀಲರ ಮನವಿ

ನ್ಯಾಯಪೀಠಕ್ಕೆ ಅರ್ಜಿದಾರರ ಪರ ವಕೀಲರ ಮನವಿ
ಫಾಲೋ ಮಾಡಿ
Comments

ಬೆಂಗಳೂರು: 'ಮುಸ್ಲಿಂ ವಿದ್ಯಾರ್ಥಿನಿಯರು ಸಮವಸ್ತ್ರದ ಬಣ್ಣಕ್ಕೆ ಹೊಂದಿಕೊಂಡಂತೆ ಹಿಜಾಬ್ ಮಾದರಿಯ ಸ್ಕಾರ್ಫ್ ಧರಿಸಿ ತರಗತಿಗಳಿಗೆ ಪ್ರವೇಶಿಸಲು ಅನುಮತಿ ನೀಡಬೇಕು‘ ಎಂದು ಹಿಜಾಬ್ ಪ್ರಕರಣದ ಅರ್ಜಿದಾರರ ಪರ ವಕೀಲರು ಹೈಕೋರ್ಟ್‌ಗೆಮನವಿ ಮಾಡಿದ್ದಾರೆ.

ಹಿಜಾಬ್ ಧರಿಸಿ ಪ್ರವೇಶಿಸುವುದನ್ನು ನಿರ್ಬಂಧಿಸಿದ್ದ ಕೆಲ ಶಾಲೆ-ಕಾಲೇಜುಗಳ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದಾಖಲಾಗಿರುವ ಎಲ್ಲ ರಿಟ್ ಅರ್ಜಿಗಳ ವಿಚಾರಣೆಯನ್ನು, ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ಮೂವರು ಸದಸ್ಯರ ಸಾಂವಿಧಾನಿಕ ನ್ಯಾಯಪೀಠ ಸೋಮವಾರ ಮುಂದುವರಿಸಿತು.

ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಹಿರಿಯ ವಕೀಲ ದೇವದತ್ತ ಕಾಮತ್, ‘ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪೂರಕ ವಾತಾವರಣದಲ್ಲಿ ಕಲಿಯುವಂತಾಗಬೇಕು. ಈ ನಿಟ್ಟಿನಲ್ಲಿ ಹಿಜಾಬ್ ರೀತಿಯಲ್ಲಿಯೇ ಸಮವಸ್ತ್ರದ ಬಣ್ಣದ ಅರಿವೆಯನ್ನು ತೊಟ್ಟುಕೊಂಡು ಬರಲು ನಿರ್ದೇಶನ ನೀಡಬೇಕು’ ಎಂದು ನ್ಯಾಯಪೀಠಕ್ಕೆ ಅರಿಕೆ ಮಾಡಿದರು.

‘ರಾಜ್ಯ ಸರ್ಕಾರ ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ ಮತ್ತು ನೈತಿಕತೆಯ ಹೊರತಾಗಿ, ಧಾರ್ಮಿಕ ಆಚರಣೆಯೊಂದಿಗೆ ಸಂಬಂಧ ಹೊಂದಿರುವ ಯಾವುದೇ ಆರ್ಥಿಕ, ಹಣಕಾಸು, ರಾಜಕೀಯ ಅಥವಾ ಇತರ ಜಾತ್ಯತೀತ ಚಟುವಟಿಕೆಗಳನ್ನು ನಿರ್ಬಂಧಿಸುವ ಕಾನೂನು ರೂಪಿಸಬಹುದು. ಆದರೆ,ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಕ್ಕೆ ಸಂಬಂಧಿಸಿದಂತೆ ಇದೇ 5ರಂದು ಹೊರಡಿಸಿರುವ ಆದೇಶ ಸಂಪೂರ್ಣ ಕಾನೂನುಬಾಹಿರವಾಗಿದೆ’ ಎಂದರು.

‘ಸಂವಿಧಾನದ 25 (2)ನೇ ವಿಧಿಯು ಧಾರ್ಮಿಕ ಆಚರಣೆ, ಆರ್ಥಿಕ, ಹಣಕಾಸು, ರಾಜಕೀಯ ಅಥವಾ ಇತರ ಜಾತ್ಯತೀತ ಚಟುವಟಿಕೆಗಳನ್ನು ನಿಯಂತ್ರಿಸಲು ಅನುಮತಿಸುತ್ತದೆ. ಆದರೆ, ಪ್ರಮುಖ ಧಾರ್ಮಿಕ ಆಚರಣೆಯನ್ನಲ್ಲ. ಮೂಲಧಾರ್ಮಿಕ ಆಚರಣೆಯು 25(1)ನೇ ವಿಧಿಯ ವ್ಯಾಪ್ತಿಗೆ ಸೇರುತ್ತದೆ ಮತ್ತು ಅದು ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ ಮತ್ತು ನೈತಿಕತೆಗೆ ಒಳಪಟ್ಟಿರುತ್ತದೆ. ಹೀಗಾಗಿ, ಸರ್ಕಾರದ ಆದೇಶದಲ್ಲಿ ವಿವರಿಸಿರುವಂತೆ ಕಾಲೇಜು ಅಭಿವೃದ್ಧಿ ಸಮಿತಿಗೆ (ಸಿಡಿಸಿ) ಸಮವಸ್ತ್ರ ಕಡ್ಡಾಯಗೊಳಿಸುವ ಅಧಿಕಾರ ನೀಡಿರುವುದು ಕಾನೂನುಬಾಹಿರ. ಈ ಸಿಡಿಸಿಗೆ ಯಾವುದೇ ಶಾಸನಬದ್ಧ ಆಧಾರವಿಲ್ಲ. ಇಂತಹ ಸಮಿತಿಸಾರ್ವಜನಿಕ ಸುವ್ಯವಸ್ಥೆಯನ್ನು ನಿರ್ಬಂಧಿಸುವುದು ಸಲ್ಲ’ ಎಂದು ಪ್ರತಿಪಾದಿಸಿದರು.ಕಲಾಪದ ಅವಧಿ ಮುಕ್ತಾಯವಾದ ಕಾರಣ ವಿಚಾರಣೆಯನ್ನು ಇದೇ 15ಕ್ಕೆ ಮುಂದೂಡಲಾಗಿದೆ.

ಮಾಧ್ಯಮ ನಿಯಂತ್ರಣಕ್ಕೆ ಮನವಿ

‘ಇತರ ರಾಜ್ಯಗಳಲ್ಲಿ ಚುನಾವಣೆಗಳು ನಡೆಯುತ್ತಿರುವುದರಿಂದ ಈ ವಿಷಯದ ಕುರಿತು ಟಿ.ವಿ, ಪತ್ರಿಕೆ ಮತ್ತು ಸಾಮಾಜಿಕ ಮಾಧ್ಯಮಗಳ ಟೀಕೆ–ಟಿಪ್ಪಣಿಗಳನ್ನು ನಿರ್ಬಂಧಿಸಬೇಕು’ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಯೂಸುಫ್‌ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ‘ನಮಗೂ ಚುನಾವಣೆಗೂ ಸಂಬಂಧವಿಲ್ಲ. ಈ ವಿನಂತಿಯು ಚುನಾವಣಾ ಆಯೋಗದಿಂದ ಬಂದರೆ ಮಾತ್ರವೇ ನಾವು ಪರಿಗಣಿಸಬಹುದು. ಒಂದು ವೇಳೆ ಕಲಾಪದ ಲೈವ್ ಸ್ಟ್ರೀಮಿಂಗ್ ನಿಲ್ಲಿಸಬಹುದು ಎಂದು ನೀವು ಹೇಳಿದ್ದೇ ಆದರೆ ಅದನ್ನು ನಿಲ್ಲಿಸಬಹುದು. ಅದು ನಮ್ಮ ಕೈಯಲ್ಲಿದೆ. ಆದರೆ, ಮಾಧ್ಯಮವನ್ನು ತಡೆಯಲು ಸಾಧ್ಯವಿಲ್ಲ. ಆದಾಗ್ಯೂ, ನಾವು ಈಗಾಗಲೇ ಈ ಕುರಿತು ಮಾಧ್ಯಮಗಳಿಗೆ ಮನವಿ ಮಾಡಿದ್ದೇವೆ’ ಎಂದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT