ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿನ ನೆರವು ಬಿಡುಗಡೆ ಮಾಡಿದ್ದು, ಇದರಡಿ ರಾಜ್ಯದ 50.36 ಲಕ್ಷ ರೈತರಿಗೆ ₹1,007.26 ಕೋಟಿ ವರ್ಗಾವಣೆ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪ್ರಧಾನಿ ಮೋದಿ ಅವರು ದೆಹಲಿಯಿಂದ ನಡೆಸಿದ ವರ್ಚುವಲ್ ಕಾರ್ಯಕ್ರಮದಲ್ಲಿ ಬೊಮ್ಮಾಯಿ, ಸಚಿವ ಸಂಪುಟದ ಸಹೋದ್ಯೋಗಿ ಗಳು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದರು.
ಈ ಯೋಜನೆಯಡಿ ಮಾರ್ಚ್ 2019 ರಿಂದ ಜುಲೈ 2022 ರವರೆಗೆ ರಾಜ್ಯದ 58.83 ಲಕ್ಷ ರೈತ ಕುಟುಂಬಗಳು ಕೇಂದ್ರ ಸರ್ಕಾರದಿಂದ ಒಟ್ಟು ₹9,968.57 ಕೋಟಿ ಸಹಾಯ ಧನ ಪಡೆದಿವೆ. 2022–23ನೇ ಸಾಲಿನಲ್ಲಿ ₹1,251.98 ಕೋಟಿ ಆರ್ಥಿಕ ಸಹಾಯಧನ ವರ್ಗಾವಣೆಯಾಗಿದೆ.
ರಾಜ್ಯ ಸರ್ಕಾರದಿಂದ ಪಿ.ಎಂ ಕಿಸಾನ್– ಕರ್ನಾಟಕ ಯೋಜನೆಯಡಿ ರೈತ ಕುಟುಂಬಗಳಿಗೆ 2019 ರಿಂದ ಇಲ್ಲಿಯವರೆಗೆ ₹4,821.37 ಕೋಟಿ ಆರ್ಥಿಕ ಸಹಾಯಧನವನ್ನು ನೀಡಲಾಗಿದೆ. 2022–23ನೇ ಸಾಲಿನಲ್ಲಿ ₹956.71 ಕೋಟಿ ಆರ್ಥಿಕ ನೆರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆಗೆ ಮಂಜೂರಾತಿ ನೀಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.