ಕೊಪ್ಪಳ:ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದ ರಾಜಕೀಯ ವ್ಯಕ್ತಿಯ ಪುತ್ರನ ಮದುವೆ ಸಮಾರಂಭದಲ್ಲಿ ಭಾಗವಹಿಸಿದ ಕಾರಣಕ್ಕಾಗಿ ಮೂವರು ಪೊಲೀಸ್ ಅಧಿಕಾರಿಗಳಿಗೆ ಕಡ್ಡಾಯ ರಜೆ ಮೇಲೆ ತೆರಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಆದೇಶಿಸಿದ್ದಾರೆ.
ಗಂಗಾವತಿ ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ, ಗಂಗಾವತಿ ಗ್ರಾಮೀಣ ಸಿಪಿಐ ಉದಯರವಿ ಹಾಗೂ ಕನಕಗಿರಿ ಪಿಎಸ್ಐ ತಾರಾಬಾಯಿ ಅವರಿಗೆ ಕಡ್ಡಾಯ ರಜೆ ನೀಡಲಾಗಿದೆ.
2015ರಲ್ಲಿ ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣದ ಆರೋಪಿ ಹನುಮೇಶ ನಾಯಕ ಅವರ ಪುತ್ರ ಆನಂದ್ ಅವರವಿವಾಹ ಕನಕಗಿರಿ ತಾಲ್ಲೂಕಿನ ಹುಲಿಹೈದರ್ ಗ್ರಾಮದಲ್ಲಿ ಜು.18ರಂದು ನಡೆಯಿತು. ಸಮಾರಂಭದಲ್ಲಿ ಈ ಅಧಿಕಾರಿಗಳು ಸಮವಸ್ತ್ರ ಧರಿಸಿ ಭಾಗಿಯಾಗಿದ್ದರು.
'ಮದುವೆಯಲ್ಲಿ ಭಾಗವಹಿಸಿದ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದು,ಇದರಿಂದ ಇಲಾಖೆಗೆ ಮುಜುಗರ ಉಂಟಾಗಿದೆ. ಹೀಗಾಗಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಐಜಿಪಿ ಮನೀಶ್ ಕರ್ಬಿಕರ್ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಎಸ್‌ಪಿತಿಳಿಸಿದ್ದಾರೆ.
ಯಲ್ಲಾಲಿಂಗನ ಕೊಲೆಗೆ ಜಿಲ್ಲೆಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.ಆರೋಪಿಗಳು ಜಾಮೀನಿನ ಮೇಲೆ ಹೊರಗಡೆ ಬಂದಿದ್ದು, ಈಪ್ರಕರಣ ನ್ಯಾಯಾಲಯದಲ್ಲಿದೆ.