ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಅಧ್ಯಯನದಿಂದ ‘ಕಮಲ’ಕ್ಕೆ ಶಕ್ತಿ?

ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿ ನಾಯಕರಿಂದ ಮೊದಲ ಬಾರಿಗೆ ದೊಡ್ಡ ಮಟ್ಟದ ಪ್ರವಾಸ
Published 1 ನವೆಂಬರ್ 2023, 20:36 IST
Last Updated 1 ನವೆಂಬರ್ 2023, 20:36 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಮಂಕು ಬಡಿದಂತಿರುವ ಬಿಜೆಪಿಯಲ್ಲಿ ಚೇತರಿಕೆಯ ಲಕ್ಷಣಗಳು ಗೋಚರಿಸಿವೆ. ಬರ ಅಧ್ಯಯನಕ್ಕಾಗಿ ಪಕ್ಷದ ಎಲ್ಲ ನಾಯಕರನ್ನು ಒಳಗೊಂಡ ದೊಡ್ಡ ಮಟ್ಟದ ಪ್ರವಾಸವನ್ನು ಇದೇ ಮೊದಲ ಬಾರಿಗೆ ಹಮ್ಮಿಕೊಂಡಿರುವುದು ಪಕ್ಷಕ್ಕೆ ಹುರುಪು ತರುವ ಲೆಕ್ಕಾಚಾರವನ್ನು ಮುನ್ನೆಲೆಗೆ ತಂದಿದೆ.

ಶುಕ್ರವಾರದಿಂದ (ನ.3) ಬಿಜೆಪಿ ನಾಯಕರ ಬರ ಅಧ್ಯಯನ ಆರಂಭವಾಗಲಿದ್ದು, ಪಕ್ಷದ ಎಲ್ಲ ಪ್ರಮುಖ ನಾಯಕರು ಇದರಲ್ಲಿ ಭಾಗವಹಿಸಲಿದ್ದಾರೆ. ಶಾಸಕರು, ಸಂಸದರು ಮತ್ತು ಕೇಂದ್ರ ಸಚಿವರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಒಟ್ಟು 16 ತಂಡಗಳಲ್ಲಿ 100 ಕ್ಕೂ ಹೆಚ್ಚು ಮುಖಂಡರೂ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಬರ ಅಧ್ಯಯನದ ಜತೆಗೆ ಪಕ್ಷದ ಸಂಘಟನೆಗೆ ಬಲತುಂಬುವ ಮತ್ತು ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುವ ಕಸರತ್ತೂ ನಡೆಯಲಿದೆ. ಚುನಾವಣೆ ಬಳಿಕ ವಿರೋಧಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ನಡೆಸಿಲ್ಲ. ಪಕ್ಷದ ಅಧ್ಯಕ್ಷ ಸ್ಥಾನದ ಬದಲಾವಣೆ ಮಾಡದೇ ಇರುವ ಹಿನ್ನೆಲೆಯಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಲ್ಲಿ ನಿರಾಶೆಯ ವಾತಾವರಣ ಮೂಡಿಸಿತ್ತು. ಈ ಪ್ರವಾಸ ನಿರಾಶೆಯ ವಾತಾವರಣವನ್ನು ತಿಳಿ ಮಾಡಲಿದೆ ಎಂದು ಪಕ್ಷದ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.

ಬಿ.ಎಸ್‌.ಯಡಿಯೂರಪ್ಪ ಅವರು ಸರ್ಕಾರದ ಭ್ರಷ್ಟಾಚಾರದ ವಿರುದ್ಧ ರಾಜ್ಯ ಪ್ರವಾಸ ಮಾಡುವುದಾಗಿ ಎರಡು–ಮೂರು ಬಾರಿ ಪ್ರಸ್ತಾಪವನ್ನು ಮಾಡಿದ್ದರು. ಕೋಲಾರದ ಜಿಲ್ಲೆಯ ಕುರುಡುಮಲೆ ದೇವಸ್ಥಾನದ ಬಳಿ  ಸಮಾವೇಶ ನಡೆಸಿ ಪ್ರವಾಸಕ್ಕೆ ಚಾಲನೆ ನೀಡಿದ್ದರು. ಆದರೆ, ಬಳಿಕ ಪ್ರವಾಸದತ್ತ ಅವರು ಹೆಜ್ಜೆ ಇಡಲೇ ಇಲ್ಲ. ಉಳಿದಂತೆ ಸಣ್ಣ ಮಟ್ಟದ ಪ್ರತಿಭಟನೆಗಳನ್ನು ನಡೆಸಿತ್ತು. ಆದರೆ, ರಾಜ್ಯದಲ್ಲಿ ಬರದ ಭೀಕರತೆ ಹೆಚ್ಚಾಗಿರುವುದರಿಂದ ಅದರ ಅಧ್ಯಯನಕ್ಕಾಗಿ 16 ತಂಡಗಳನ್ನು ರಚಿಸಿ, ಪ್ರತಿ ತಂಡ ತಲಾ ಎರಡು ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿವೆ.

‘ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದರಲ್ಲಿ ನಿರತರಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಬೆಳೆ ನಷ್ಟ, ಜಾನುವಾರುಗಳ ಸ್ಥಿತಿ ಗತಿ, ಕೆಲಸ ಹುಡುಕಿಕೊಂಡು ಜನರು ಗುಳೇ ಹೋಗುತ್ತಿರುವುದು, ಕೆರೆ–ಕಟ್ಟೆಗಳು, ಜಲಾಶಯಗಳ ಸ್ಥಿತಿಗತಿ, ರಾಜ್ಯ ಸರ್ಕಾರ ಈವರೆಗೆ ಕೈಗೊಂಡಿರುವ ಪರಿಹಾರ ಕಾರ್ಯಗಳ ಬಗ್ಗೆ ಅಂಕಿ–ಅಂಶಗಳನ್ನು ಕಲೆ ಹಾಕುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ಎನ್‌.ರವಿಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

'ಚುನಾವಣೆ ಬಳಿಕ ಪಕ್ಷದಿಂದ ನಡೆಯುತ್ತಿರುವ ದೊಡ್ಡ ಮಟ್ಟದ ಕಾರ್ಯಕ್ರಮ. ಕೇವಲ ರಾಜಕೀಯಕ್ಕಾಗಿ ಇದನ್ನು ಹಮ್ಮಿಕೊಂಡಿಲ್ಲ. ಬೊಕ್ಕಸ ಖಾಲಿ ಮಾಡಿಕೊಂಡಿರುವ ರಾಜ್ಯ ಸರ್ಕಾರ ಜನರ ಕೈಬಿಟ್ಟಿದೆ. ಈ ಹಂತದಲ್ಲಿ ನಾವು ಜನರ ಪರ ನಿಲ್ಲುತ್ತೇವೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಜನರ ಸಂಕಷ್ಟ ಸಮಯದಲ್ಲಿ ಕೇಂದ್ರದ ಹಣಕ್ಕಾಗಿ ಕಾಯದೇ, ರಾಜ್ಯದ ಹಣದಿಂದಲೇ ಪರಿಹಾರ ಕಾರ್ಯಕೈಗೊಂಡಿತ್ತು. ಭೀಕರ ಪ್ರವಾಹದ ಸಂದರ್ಭದಲ್ಲಿ ಯಡಿಯೂರಪ್ಪ ಏಕಾಂಗಿಯಾಗಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಕ್ಕೆ ಚಾಲನೆ ನೀಡಿದ್ದರು' ಎಂದು ಅವರು ಹೇಳಿದರು.

ಬಿ.ಎಸ್‌.ಯಡಿಯೂರಪ್ಪ 2 ತಂಡಗಳನ್ನು ಮುನ್ನಡೆಸಲಿದ್ದಾರೆ. ನಳಿನ್‌ಕುಮಾರ್ ಕಟೀಲ್, ಸಿ.ಟಿ.ರವಿ, ಅರವಿಂದ ಬೆಲ್ಲದ, ಬಿ.ವೈ.ವಿಜಯೇಂದ್ರ, ಕೆ.ಎಸ್‌.ಈಶ್ವರಪ್ಪ, ಶ್ರೀರಾಮುಲು, ಅರವಿಂದ ಲಿಂಬಾವಳಿ, ಆರಗ ಜ್ಞಾನೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಕೋಟ ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ ತಂಡಗಳ ನೇತೃತ್ವ ವಹಿಸಿದ್ದಾರೆ.

ಬೆಂಗಳೂರು ನಗರಕ್ಕೂ ತಂಡ

ಬೆಂಗಳೂರು ನಗರದ ಬಗ್ಗೆ ಅಧ್ಯಯನ ನಡೆಸುವುದಲ್ಲದೇ ಜನರ ಸಮಸ್ಯೆಗಳನ್ನು ಆಲಿಸಲು ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ತಂಡ ನಗರದಲ್ಲಿ ಎರಡು ದಿನ ಪ್ರವಾಸ ಮಾಡಲಿದೆ. ಬೆಂಗಳೂರು ನಗರದ ಶಾಸಕರ ಸಭೆಯನ್ನು ಕರೆದಿದ್ದ ಯಡಿಯೂರಪ್ಪ ಅವರು ಪ್ರವಾಸದ ರೂಪುರೇಷೆಯನ್ನು ಚರ್ಚಿಸಿದ್ದಾರೆ. ಕುಡಿಯುವ ನೀರು, ರಸ್ತೆ, ರಸ್ತೆಗುಂಡಿ, ಒಳಚರಂಡಿ, ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಮುಂತಾದ ವಿಷಯಗಳ ಬಗ್ಗೆಅಧ್ಯಯನ ನಡೆಸಲಿದ್ದಾರೆ ಎಂದು ರವಿಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT