ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಖ್ಯಮಂತ್ರಿ, ಸಚಿವರಿಗೆ ಎದೆಬಡಿತ ಹೆಚ್ಚಿಸಿದ ಮತಗಟ್ಟೆ ಸಮೀಕ್ಷೆ: ವಿಜಯೇಂದ್ರ

Published 3 ಜೂನ್ 2024, 11:07 IST
Last Updated 3 ಜೂನ್ 2024, 11:07 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆ ಫಲಿತಾಂಶ ಬಂದ ಬಳಿಕ ರಾಜ್ಯದ ಆಡಳಿತ ಪಕ್ಷದ ಮುಖಂಡರಿಗೆ, ಮುಖ್ಯಮಂತ್ರಿಯಾದಿಯಾಗಿ ಸಚಿವರಿಗೂ ಕೂಡ ಎದೆಬಡಿತ ಹೆಚ್ಚಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಣ್ಣದಲ್ಲ; ಇದರ ಆಳ ಮತ್ತು ಅಗಲ ಇನ್ನೂ ಹೆಚ್ಚಾಗಿದೆ. ಕೂಡಲೇ ಸಚಿವ ನಾಗೇಂದ್ರರ ರಾಜೀನಾಮೆ ಪಡೆಯಲು ನಾವು ಆಗ್ರಹಿಸಿದ್ದರೂ ಮುಖ್ಯಮಂತ್ರಿಗಳು ಇನ್ನೂ ಮನಸ್ಸು ಮಾಡಿಲ್ಲ ಎಂದು ಆಕ್ಷೇಪಿಸಿದರು.

ತೆಲಂಗಾಣಕ್ಕೆ ಹಣ ವರ್ಗಾವಣೆ, ನಕಲಿ ಕಂಪನಿ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಹಣ ವರ್ಗಾಯಿಸಿದ್ದು ಬಯಲಾಗಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡಿಗೋಸ್ಕರ ಈ ಎಸ್‍ಟಿ ಅಭಿವೃದ್ಧಿ ನಿಗಮದ ₹187 ಕೋಟಿಯನ್ನು ತೆಲಂಗಾಣಕ್ಕೆ ವರ್ಗಾಯಿಸಿದ್ದಾರೆ. ಬೇರೆ ಬೇರೆ ಖಾತೆಗಳಿಂದ ಈ ಹಣ ಚುನಾವಣೆಗೆ ದುರುಪಯೋಗ ಆಗಿದೆ ಎಂದು ಆರೋಪಿಸಿದರು.

ಸಿಬಿಐ ತನಿಖೆಗೆ ಕೋರಿ ಯೂನಿಯನ್ ಬ್ಯಾಂಕ್ ಕೂಡ ಪತ್ರ ಬರೆದಿದೆ. ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿಗಳು ತಮ್ಮ ಕೊಳಕನ್ನು ಮುಚ್ಚಿ ಹಾಕಲು ಆತುರಾತುರವಾಗಿ ಎಸ್‍ಐಟಿ ರಚಿಸಿದ್ದಾರೆ.  ಬಿಜೆಪಿ ಈ ವಿಚಾರದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.

ಹಗರಣದ ಹಿಂದೆ ದೊಡ್ಡ ಹೆಸರು:

ವಾಲ್ಮೀಕಿ ನಿಗಮದ ಹಗರಣವು ಕೇವಲ ಸಚಿವರಿಗೆ ಸೀಮಿತವಾಗಿಲ್ಲ. ಬಹಳ ದೊಡ್ಡ ದೊಡ್ಡ ಹೆಸರುಗಳು ಕೇಳಿಬರುತ್ತಿವೆ. ಮುಂದಿನ ದಿನಗಳಲ್ಲಿ ಸತ್ಯಾಂಶ ಹೊರಬರಲಿದೆ ಎಂದ ವಿಜಯೇಂದ್ರ ಅವರು, ಎಸ್‍ಐಟಿಯಿಂದ ನ್ಯಾಯಯುತ ತನಿಖೆ ಅಸಾಧ್ಯ; ಆದ್ದರಿಂದ ಸಿಬಿಐ ತನಿಖೆಗೆ ಒಪ್ಪಿಸಿ ಎಂದು ಆಗ್ರಹಿಸಿದರು. ಸದ್ಯವೇ ರಾಜ್ಯಪಾಲರನ್ನು ಭೇಟಿ ಮಾಡಿ ಈ ವಿಚಾರದಲ್ಲಿ ಒತ್ತಾಯ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT