ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ನಿಲ್ಲುವ ಆಲೋಚನೆ ಇಲ್ಲ: ಚೇತನ್‌

ಪ್ರಜಾವಾಣಿ ಸೆಲೆಬ್ರಿಟಿ ಲೈವ್‌’ ಫೇಸ್‌ಬುಕ್‌ ಸಂದರ್ಶನದಲ್ಲಿ ಚೇತನ್‌ ಹೇಳಿಕೆ
Last Updated 24 ಜೂನ್ 2021, 18:59 IST
ಅಕ್ಷರ ಗಾತ್ರ

ಬೆಂಗಳೂರು: ಬ್ರಾಹ್ಮಣ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ದೂರನ್ನು ಆಧರಿಸಿ ಸಾಮಾಜಿಕ ಹೋರಾಟಗಾರ, ನಟ ಚೇತನ್‌ ಅಹಿಂಸಾ ವಿರುದ್ಧ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಚೇತನ್‌ ಅವರ ಪೌರತ್ವದ ಬಗ್ಗೆಯೂ ಹಲವರು ಪ್ರಶ್ನೆ ಎತ್ತಿದ್ದು, ವಿದೇಶಿಗರ ಕಾಯ್ದೆಯಡಿ ಅವರ ವಿರುದ್ಧ ಕ್ರಮಕ್ಕೂ ಒತ್ತಾಯಿಸಿದ್ದಾರೆ.

ಈ ಎಲ್ಲ ಘಟನೆಗಳು ಹಾಗೂ ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ‘ಪ್ರಜಾವಾಣಿ ಸೆಲೆಬ್ರಿಟಿ ಲೈವ್‌’ ಫೇಸ್‌ಬುಕ್‌ ಸಂದರ್ಶನದಲ್ಲಿ ಚೇತನ್‌ ಉತ್ತರಿಸಿದ್ದು, ರಾಜಕೀಯ ಪ್ರವೇಶಿಸುವ ಅಥವಾ ಚುನಾವಣೆ ನಿಲ್ಲುವ ಯಾವುದೇ ಆಲೋಚನೆ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

‘ನಾನು ಹುಟ್ಟಿದ್ದು ಅಮೆರಿಕದಲ್ಲಿ. 22 ವರ್ಷ ಅಲ್ಲಿಯೇ ಇದ್ದೆ. ರಿಸರ್ಚ್ ವೀಸಾದಲ್ಲಿ ನಾನು ಬಂದೆ. ನಂತರ ಆರು ತಿಂಗಳಿಗೊಮ್ಮೆ ನೋಂದಣಿ ಮಾಡಿಕೊಳ್ಳುವುದನ್ನು ಮಾಡುತ್ತಿದ್ದೆ. ಕುವೆಂಪು ಅವರ ವಿಶ್ವಮಾನವ ಸಿದ್ಧಾಂತದ ಬಗ್ಗೆ ನಂಬಿಕೆ ಇಟ್ಟುಕೊಂಡವನು ನಾನು. 2019ರಲ್ಲಿ ನನಗೆ ಒಸಿಐ (ಓವರ್‌ಸೀಸ್‌ ಸಿಟಿಜನ್‌ ಆಫ್‌ ಇಂಡಿಯಾ) ದೊರಕಿತು. ಮತದಾನ ಮಾಡುವ ಹಾಗೂ ಚುನಾವಣೆಗೆ ನಿಲ್ಲುವ ಹಕ್ಕು ಬಿಟ್ಟು ಉಳಿದೆಲ್ಲ ನಾಗರಿಕ ಹಕ್ಕುಗಳು ನನಗೆ ಇವೆ’ ಎಂದರು.

‘ಪಾಸ್‌ಪೋರ್ಟ್‌ ಇದ್ದಮಾತ್ರಕ್ಕೆ ಅವರು ಆ ದೇಶದವರು ಎನ್ನುವುದು ಸರಿಯಲ್ಲ. ಯಾರು, ಇರುವ ದೇಶದ ಬಗ್ಗೆ, ಅಲ್ಲಿನ ಜನರ ಬಗ್ಗೆ ಕಾಳಜಿ ತೋರಿಸುತ್ತಾರೋ ಅವರು ಆ ದೇಶದವರಾಗುತ್ತಾರೆ. ತಂದೆ, ತಾಯಿ ಅಮೆರಿಕದಲ್ಲಿ ಇರುವ ಕಾರಣದಿಂದ, ಅವರಿಗೆ ಏನಾದರೂ ಸಮಸ್ಯೆಯಾದರೆ ನಾನು ತಕ್ಷಣದಲ್ಲೇ ಹೋಗಬಹುದು ಎನ್ನುವ ಕಾರಣಕ್ಕೆ ಪೌರತ್ವ ಬದಲಾವಣೆ ಮಾಡಿಕೊಳ್ಳಲು ಹೋಗಿಲ್ಲ. ನನಗೇನೂ ಚುನಾವಣೆ ನಿಲ್ಲುವ ಅವಶ್ಯಕತೆ ಇಲ್ಲ. ಚುನಾವಣೆ ನಿಲ್ಲಬೇಕು ಎನ್ನುವ ಯಾವುದೇ ಆಲೋಚನೆಯೂ ಇಲ್ಲ. ಇವಾಗ ಈ ಪ್ರಶ್ನೆ ಎತ್ತುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ’ ಎಂದರು ಚೇತನ್‌.

‘ಇವರೆಲ್ಲ ಭಾರತೀಯರೆ?’: ‘ನಮ್ಮ ದೇಶದಲ್ಲಿ ಅಧಿಕಾರದಲ್ಲಿದ್ದುಕೊಂಡು ಮಾಡಬಾರದ್ದನ್ನು ಮಾಡುತ್ತಿದ್ದಾರೆ, ಭ್ರಷ್ಟಾಚಾರ, ಲೂಟಿ ಮಾಡುತ್ತಿದ್ದಾರೆ. ಹೀಗಿರುವಾಗ ಇವರು ಭಾರತೀಯರು ಆಗುತ್ತಾರೆಯೇ? ಕೋಮುವಾದ, ಭೇದಭಾವ ಮಾಡುತ್ತಿರುವವರು ಭಾರತೀಯರಾಗುತ್ತಾರೆಯೇ? ಈ ಪ್ರಶ್ನೆ ನಾವು ಕೇಳಬೇಕು. ಆದರೆ ನನ್ನ ಪೌರತ್ವದ ಬಗ್ಗೆ ಪ್ರಶ್ನೆ ಕೇಳುವುದು ಪ್ರಾರಂಭವಾಗಿದೆ’ ಎಂದು ಅವರು ನಕ್ಕರು.

‘ಎಲ್ಲ ಜಾತಿಯಲ್ಲೂ ಬ್ರಾಹ್ಮಣ್ಯ’: ‘ಬ್ರಾಹ್ಮಣ್ಯ ಎನ್ನುವುದು ಎಲ್ಲ ಜಾತಿಗಳಲ್ಲೂ, ಧರ್ಮಗಳಲ್ಲೂ ಇದೆ. ಬಸವಣ್ಣನವರು ಯಾವ ಸಮುದಾಯದಲ್ಲಿ ಹುಟ್ಟಿದ್ದಾರೆ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅದು ಚರ್ಚೆ ಆಗಲಿ. ಅವರು ಬ್ರಾಹ್ಮಣರಾಗಿ ಜನಿಸಿದರೂ ಬ್ರಾಹ್ಮಣ್ಯ ವಿರೋಧ ಮಾಡಿ ಚಳವಳಿ ಮಾಡಿದರು. ಆದರೆ ಬಸವಣ್ಣನವರು ಒಬ್ಬರೇ ಹೇಳಿರುವುದು ಸರಿ ಎನ್ನುವುದು, ಇತರೆ ವಚನಕಾರರು, ಶರಣರ ಮಾತಿಗೆ ಬೆಲೆ ಕೊಡದೇ ಇರುವುದೂ ಬ್ರಾಹ್ಮಣ್ಯದ ಹೇರಿಕೆ.ಇತಿಹಾಸವನ್ನು ಹಾಡಿ ಹೊಗಳುವುದಷ್ಟೇ ಅಲ್ಲ, ಅನುಭವ ಮಂಟಪವನ್ನು ಆಧುನಿಕವಾಗಿ ಕಟ್ಟಿ ಇವತ್ತಿನ ದಿನ ಅವರ ಯೋಚನೆಗಳನ್ನು ಆಧುನಿಕವಾಗಿ ಕಾರ್ಯರೂಪಕ್ಕೆ ತರುವುದೇ ಬಸವತತ್ವ, ಶರಣತತ್ವ’ ಎಂದು ಸಮರ್ಥಿಸಿಕೊಂಡರು.

‘ನನ್ನ ನೇರ ಮಾತುಗಳಿಂದ ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾಗಬಹುದು. ಆದರೆ ಈ ರೀತಿ ಕಡಿಮೆಯಾದರೆ ನಾನು ಮಾತನಾಡುತ್ತಿರುವುದು ತಪ್ಪು ಎಂದಲ್ಲ.ಸಾಮಾಜಿಕ ವಿಷಯಗಳನ್ನು ಇಟ್ಟುಕೊಂಡು ಚಿತ್ರ ಮಾಡುವ ನಿರ್ದೇಶಕರಿಗೆ, ಬರಹಗಾರರಿಗೆ ರಕ್ಷಣೆ ಕೊಡಬೇಕು. ಮಲಯಾಳಂನಲ್ಲಿ ಬರಹಗಾರರಿಗೆ ಹೆಚ್ಚಿನ ಬೆಲೆ ಕೊಡುತ್ತಾರೆ. ಸ್ಟಾರ್‌ ಸಂಸ್ಕೃತಿಗೆ ತುಪ್ಪ ಸುರಿದಷ್ಟು ಸಿನಿಮಾ ರಂಗ ಬೆಳೆಯುವುದಿಲ್ಲ. ಸಿನಿಮಾ ರಂಗ ಬೆಳೆಯಲು ಕಲೆಗೆ, ಸಮಾಜಕ್ಕೆ ಬೆಲೆ ಕೊಡಬೇಕು’ ಎಂದು ಅಭಿಪ್ರಾಯಪಟ್ಟರು.

ಪೂರ್ಣ ಸಂದರ್ಶನ:

https://bit.ly/3gYfXpn

https://bit.ly/3qrlXd5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT