ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಹುದ್ದೆಗಳ ನೇಮಕಾತಿಗೆ ಸೆ. 22ರಂದು ಪರೀಕ್ಷೆ ನಡೆಯಲಿದ್ದು, ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸುವ ಮಾದರಿಯಲ್ಲೇ, ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ತಪಾಸಣೆ ನಡೆಯಲಿದೆ.
‘ದೈಹಿಕ ಪರೀಕ್ಷೆ ವೇಳೆ ಸಂಗ್ರಹಿಸಿದ್ದ ಅಭ್ಯರ್ಥಿಗಳ ಹೆಬ್ಬೆಟ್ಟು ಗುರುತು ಹಾಗೂ ಭಾವಚಿತ್ರಗಳ ದತ್ತಾಂಶಗಳನ್ನು ಬಳಸಿಕೊಂಡು ಪರೀಕ್ಷಾ ಕೇಂದ್ರಗಳಲ್ಲಿ ತಪಾಸಣೆ ನಡೆಸಲಾಗುತ್ತದೆ. ನಕಲಿ ಅಭ್ಯರ್ಥಿಗಳ ನುಸುಳುವಿಕೆಗೆ ಅವಕಾಶವೇ ಇರುವುದಿಲ್ಲ’ ಎಂದಿದ್ದಾರೆ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ.
ಪರೀಕ್ಷೆಯಲ್ಲಿ ಯಾವುದೇ ಲೋಪ ಆಗದಂತೆ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅಧಿಕ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲು ಕೋರಿ ಗೃಹ ಸಚಿವರು ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು, ದಾವಣಗೆರೆ, ಧಾರವಾಡ, ಕಲಬುರಗಿ, ಶಿವಮೊಗ್ಗ, ವಿಜಯಪುರ ಜಿಲ್ಲೆಗಳ 164 ಕೇಂದ್ರಗಳಲ್ಲಿ ಪರೀಕ್ಷೆ ಆಯೋಜಿಸಲಾಗಿದೆ. ದೈಹಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ 66,990 ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಬರೆಯಲಿದ್ದಾರೆ.
ಕೆಲವರು ಪರೀಕ್ಷೆ ಮುಂದೂಡುವಂತೆ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ. ಸಾಕಷ್ಟು ವಿಳಂಬವಾಗಿರುವ ಕಾರಣ ಪರೀಕ್ಷೆಯನ್ನು ಮುಂದೂಡುವುದಿಲ್ಲ. ನಿಗದಿಯಂತೆ ನಡೆಸಲಾಗುವುದು ಎಂದಿದ್ದಾರೆ.