ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಟಿಸಿಎಲ್‌: ತಿದ್ದುಪಡಿ ಬದಲು ಸುತ್ತೋಲೆ ಹೊರಡಿಸಿದ ಸರ್ಕಾರ

Last Updated 16 ಫೆಬ್ರುವರಿ 2022, 19:27 IST
ಅಕ್ಷರ ಗಾತ್ರ

ಬೆಂಗಳೂರು: ಎಸ್‌ಸಿ/ಎಸ್‌ಟಿ ಭೂ ಪರಭಾರೆ ನಿಷೇಧ ಕಾಯ್ದೆ (ಪಿಟಿಸಿಎಲ್) ಸಮಗ್ರ ತಿದ್ದುಪಡಿಗೆ ಹೋರಾಟಗಳು ನಡೆಯುತ್ತಿದ್ದರೆ, ಕಾಯ್ದೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗದಂತೆ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ.

1979ರಲ್ಲಿ ಜಾರಿಗೆ ಬಂದ ಕಾಯ್ದೆಯ ಪ್ರಕಾರ, ಪರಿಶಿಷ್ಟರಿಗೆ ಮಂಜೂರಾಗುವ ಜಮೀನುಗಳನ್ನು ಪರಭಾರೆ ಮಾಡಲು ಸರ್ಕಾರದ ಪೂರ್ವಾನುಮತಿ ಅತ್ಯವಶ್ಯ ಎಂಬ ಷರತ್ತು ಇದೆ. ಕಾಯ್ದೆ ಉಲ್ಲಂಘಿಸಿ ಭೂಮಿ ಪರಭಾರೆ ಆಗಿದ್ದಲ್ಲಿ ಮರು ಮಂಜೂರಾತಿ ಕೋರಿ ಮೂಲ ಮಂಜೂರಾತಿದಾರರು ಅಥವಾ ಅವರ ವಾರಸುದಾರರು ಉಪವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಲು ಕಾಲಮಿತಿ ಇರಲಿಲ್ಲ.

ನೆಕ್ಕಂಟಿ ರಾಮಲಕ್ಷ್ಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ‘ಸಮುಚಿತ ಸಮಯದೊಳಗೆ ಅರ್ಜಿ ಸಲ್ಲಿಸಬೇಕು’ ಎಂದು 2017ರ ಅಕ್ಟೋಬರ್ 26ರಲ್ಲಿ ತಿಳಿಸಿತು. ‘ಇದಾದ ಬಳಿಕ ಪಿಟಿಸಿಎಲ್‌ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ ನ್ಯಾಯಾಲಯಗಳಲ್ಲಿ ಸಲ್ಲಿಕೆಯಾಗುತ್ತಿರುವ ಅರ್ಜಿಗಳಲ್ಲಿ ಪರಿಶಿಷ್ಟರಿಗೆ ವಿರುದ್ಧವಾದ ಆದೇಶಗಳು ಹೊರ ಬೀಳುತ್ತಿವೆ. ಆದ್ದರಿಂದ ಕಾಯ್ದೆಗೆ ಸಮಗ್ರ ತಿದ್ದುಪಡಿ ತರಬೇಕು’ ಎಂಬುದು ದಲಿತ ಸಂಘಟನೆಗಳ ಒತ್ತಾಯ.

ಈ ನಡುವೆ ಸರ್ಕಾರ ಫೆ.15ರಂದು ಸುತ್ತೋಲೆಯೊಂದನ್ನು ಹೊರಡಿಸಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರು ಭೂರಹಿತರಾಗದೇ ಇರುವುದನ್ನು ಗಮನದಲ್ಲಿಟ್ಟುಕೊಂಡು ಇತ್ಯರ್ಥಪಡಿಸುವಂತೆ ಸೂಚಿಸಿದೆ.

‘ಈ ಸುತ್ತೋಲೆ ಹೊರಡಿಸುವ ಮೂಲಕ ಹೋರಾಟಗಾರರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಸರ್ಕಾರ ಮಾಡಿದೆ. ಕಾಯ್ದೆಗೆ ಸಮಗ್ರ ತಿದ್ದುಪಡಿ ತರುವ ಬದಲು ಸುತ್ತೋಲೆ ಹೊರಡಿಸಿ ಕೈತೊಳೆದುಕೊಳ್ಳಲು ಯತ್ನಿಸಿದೆ. ಇದರ ವಿರುದ್ಧ ಮಾರ್ಚ್‌ ಮೊದಲ ವಾರದಲ್ಲಿ ಸಂತ್ರಸ್ತರ ಕುಟುಂಬ ಸಮೇತ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು’ ಎಂದು ಪಿಟಿಸಿಎಲ್ ಕಾಯ್ದೆ ಸಂರಕ್ಷಣಾ ಸಮಿತಿಯ ಮಂಜುನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT