ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕೋಪಯೋಗಿ ಇಲಾಖೆಯಲ್ಲಿ 870 ಎಂಜಿನಿಯರ್‌ಗಳ ನೇಮಕಾತಿ; ಹಿತ ಕಾಯಲು ನಿಯಮ ಬದಲು

Last Updated 9 ಮಾರ್ಚ್ 2019, 19:15 IST
ಅಕ್ಷರ ಗಾತ್ರ

ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿ ತಮ್ಮ ‘ಬಳಗ’ ತುಂಬಿಸಿಕೊಳ್ಳಲು ಮುಂದಾಗಿರುವ ಸಚಿವ ಎಚ್.ಡಿ. ರೇವಣ್ಣ, 870 ಎಂಜಿನಿಯರ್‌ಗಳ‌ನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಪ್ರಕ್ರಿಯೆ ಆರಂಭಿಸಿದ್ದಾರೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ದಶಕಗಳಿಂದೀಚೆಗೆ ಸರ್ಕಾರದ ಎಲ್ಲ ಇಲಾಖೆಗಳ ನೇಮಕಾತಿಗಳನ್ನು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕವೇ ನಡೆಸಲಾಗುತ್ತಿದೆ. ಅದರಲ್ಲೂ ಎಂಜಿನಿಯರ್‌ಗಳ ನೇಮಕಾತಿಗಳನ್ನು ಕೆಪಿಎಸ್‌ಸಿಗೆ ವಹಿಸಲಾಗುತ್ತಿದೆ.

ಕೆಪಿಎಸ್‌ಸಿ ಮೂಲಕ ನೇಮಕಾತಿ ಮಾಡಿಕೊಂಡರೆ ವಿಳಂಬವಾಗುತ್ತದೆ ಎಂಬ ನೆಪವೊಡ್ಡಿ ನಿಯಮಗಳನ್ನೇ ಬದಲಾವಣೆ ಮಾಡಲಾಗಿದೆ. ಸಹಾಯಕ ಎಂಜಿನಿಯರ್ ಹಾಗೂ ಕಿರಿಯ ಎಂಜಿನಿಯರ್‌ಗಳನ್ನು ನೇರ ನೇಮಕಾತಿ ಮುಖೇನ ಭರ್ತಿ ಮಾಡಿಕೊಳ್ಳಲು ರೇವಣ್ಣ ತಯಾರಿ ನಡೆಸಿದರು. ಇದಕ್ಕೆ ಪೂರಕವಾಗಿ ‘ಲೋಕೋಪಯೋಗಿ ಇಲಾಖೆಯ ಸೇವಾ ನಿಯಮಗಳು–2019 (ವಿಶೇಷ ನೇಮಕಾತಿ) ಕರಡನ್ನು ಫೆಬ್ರುವರಿ 15ರ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು. ಆಕ್ಷೇಪಣೆಗೆ 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಈಗ ನಿಯಮಗಳು ಚಾಲ್ತಿಗೆ ಬಂದಿದ್ದು, ಇದೇ 7ರಂದು ಎಂಜಿನಿಯರ್‌ಗಳ ನೇಮಕಾತಿಗೆ ಅರ್ಜಿಯನ್ನೂ ಆಹ್ವಾನಿಸಲಾಗಿದೆ.

ನಿಯಮ ಬದಲಾವಣೆ: ಬೇರೆ ಇಲಾಖೆಗಳಲ್ಲಿ ನೇರ ನೇಮಕಾತಿ ಮಾಡಿಕೊಂಡರೂ ನೇಮಕಾತಿಗಳಲ್ಲಿ ಪಾರದರ್ಶಕತೆ ಇರುವಂತೆ ನೋಡಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಆದರೆ, ಲೋಕೋಪಯೋಗಿ ಇಲಾಖೆಯು ಇದಕ್ಕಾಗಿ ವಿಶೇಷ ಆಯ್ಕೆ ಸಮಿತಿ ರಚಿಸಿದೆ. ಈ ಸಮಿತಿಯಲ್ಲಿ ಇಲಾಖೆಯ ಕಟ್ಟಡ ಮತ್ತು ಸಂಪರ್ಕ ವಿಭಾಗಗಳ (ದಕ್ಷಿಣ, ಉತ್ತರ ಮತ್ತು ಈಶಾನ್ಯ) ಮುಖ್ಯ ಎಂಜಿನಿಯರ್‌ಗಳು, ರಾಷ್ಟ್ರೀಯ ಹೆದ್ದಾರಿ ವಿಭಾಗದ ಮುಖ್ಯ ಎಂಜಿನಿಯರ್‌,ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಮಹಿಳಾಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರು ಸಮಿತಿಯಲ್ಲಿದ್ದಾರೆ. ಲೋಕೋಪಯೋಗಿ ಇಲಾಖೆಯ ಉಪ ಕಾರ್ಯದರ್ಶಿ (ಸೇವೆಗಳು) ಸಮಿತಿಯ ಕಾರ್ಯದರ್ಶಿಯಾಗಿದ್ದಾರೆ. ಇವರಿಗೆ ನೇಮಕಾತಿ ಅಧಿಕಾರ ಕೊಟ್ಟಿರುವ ಹಿಂದೆ ಅನ್ಯ ಉದ್ದೇಶ ಇದೆ ಎಂದು ನಿವೃತ್ತ ಮುಖ್ಯ ಎಂಜಿನಿಯರ್ ಒಬ್ಬರು ದೂರಿದರು.

ಒಂದೇ ಸಮುದಾಯಕ್ಕೆ ಆದ್ಯತೆ?: 2007ರಲ್ಲಿ ರೇವಣ್ಣ ಲೋಕೋಪಯೋಗಿ ಸಚಿವರಾಗಿದ್ದಾಗಲೂ 200 ಸಹಾಯಕ ಎಂಜಿನಿಯರ್‌ಗಳ ಹುದ್ದೆಗೆ ನೇರ ನೇಮಕಾತಿ ನಡೆಸಿದ್ದರು. ಹಾಸನದ ಒಂದೇ ಕಾಲೇಜಿನಿಂದ ಒಂದೇ ಬ್ಯಾಚ್‌ನಲ್ಲಿ 74 ಜನ ಪದವಿ ಪಡೆದು ಹೊರಬಂದಿದ್ದರು. ಆ ಪೈಕಿ 60 ಅಭ್ಯರ್ಥಿಗಳಿಗೆ ಅವಕಾಶ ಸಿಕ್ಕಿತ್ತು. ಈ ಬಾರಿಯೂ ಅಂತಹದೇ ‘ಹುನ್ನಾರ’ ನಡೆಯುವ ಸಾಧ್ಯತೆ ಇದೆ ಎಂದು ಹಿರಿಯ ಎಂಜಿನಿಯರ್‌ ಒಬ್ಬರು ಹೇಳಿದರು.

ನೇರ ನೇಮಕಾತಿ ಹಾಗೂ ಆಯ್ಕೆ ಸಮಿತಿ ಮೂಲಕ ನಡೆಯುವ ಪ್ರಕ್ರಿಯೆಗಳಲ್ಲಿ ಕೆಲವು ಒಳದಾರಿಗಳು ಇರುತ್ತವೆ. ಅತಿ ಹೆಚ್ಚು ಅಂಕ ಪಡೆದವರಿಗೆ ಮೌಖಿಕ ಸಂದರ್ಶನದಲ್ಲೂ ಹೆಚ್ಚಿನ ಅಂಕ (15ಕ್ಕೆ 14) ಕೊಟ್ಟು ಅವರನ್ನು ಜನರಲ್‌ ಮೆರಿಟ್ ಅಡಿ ಆಯ್ಕೆ ಮಾಡಲಾಗುತ್ತದೆ. ಮೀಸಲಾತಿ ವರ್ಗದಡಿ ನೇಮಕ ಮಾಡುವಾಗ ಕಟ್‌ ಅಫ್ ಅಂಕವನ್ನು ಕಡಿಮೆಗೆ ನಿಗದಿ ಮಾಡಲಾಗುತ್ತದೆ. ತಮಗೆ ಬೇಕಾದವರಿಗೆ ಮೌಖಿಕ ಸಂದರ್ಶನದಲ್ಲಿ 15ಕ್ಕೆ 14 ಅಂಕ ಕೊಡುವುದು. ಅನ್ಯ ಸಮುದಾಯದವರಿಗೆ 5 ಅಥವಾ 6 ಅಂಕ ಕೊಟ್ಟು ಅವರ ಅರ್ಹತಾ ಅಂಕವನ್ನು ಕುಗ್ಗಿಸಲಾಗುತ್ತದೆ. ಹೀಗೆ ಮಾಡುವ ಮೂಲಕ ಒಂದೇ ಸಮುದಾಯದವರಿಗೆ ಆದ್ಯತೆ ಕೊಡಿಸುವ ಕೆಲಸವನ್ನು ಹಿಂದೆಲ್ಲ ಮಾಡಲಾಗಿದೆ. ಈ ಬಾರಿಯೂ ಅಂತಹದೇ ಅಪಾಯ ಇದೆ ಎಂದು ಅವರು ವಿವರಿಸಿದರು.

ಹಿಂದುಳಿದ ವರ್ಗಗಳ ಮೀಸಲಾತಿಯಡಿ 60ಕ್ಕೂ ಹೆಚ್ಚು ಜಾತಿಗಳವರು ಬರುತ್ತಾರೆ. ಮುಸ್ಲಿಂ, ಒಕ್ಕಲಿಗ, ಲಿಂಗಾಯತರೂ ಇದೇ ವ್ಯಾಪ್ತಿಯಲ್ಲಿದ್ದಾರೆ. ‘ಆಯ್ದ’ ಕೆಲವರಿಗೆ ಮಣೆ ಹಾಕುವುದರಿಂದ ಉಳಿದವರಿಗೆ ಅನ್ಯಾಯವಾಗಲಿದೆ ಎಂದು ಅವರು ದೂರಿದರು.

ಹುದ್ದೆ; ಮೂಲ ವೇತನ ಶ್ರೇಣಿ;ಹುದ್ದೆಗಳ ಸಂಖ್ಯೆ

ಸಹಾಯಕ ಎಂಜಿನಿಯರ್‌ (ಸಿವಿಲ್‌);₹43,100–₹83,900; 570

ಕಿರಿಯ ಎಂಜಿನಿಯರ್‌ (ಸಿವಿಲ್‌);₹33,450–₹62,600; 300

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT