ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧದ ಮಧ್ಯೆಯೂ ಚಿತ್ರದುರ್ಗ ಕಚೇರಿ ಎತ್ತಂಗಡಿ: ಲೋಕೋಪಯೋಗಿ ಇಲಾಖೆ ಆದೇಶ

ಹೆದ್ದಾರಿ ಗುಣನಿಯಂತ್ರಣ ಉಪ ವಿಭಾಗ ಕಲಬುರಗಿಗೆ ಸ್ಥಳಾಂತರ
Published 1 ಮಾರ್ಚ್ 2024, 16:24 IST
Last Updated 1 ಮಾರ್ಚ್ 2024, 16:24 IST
ಅಕ್ಷರ ಗಾತ್ರ

ಬೆಂಗಳೂರು: ಮಧ್ಯ ಕರ್ನಾಟಕ, ಮಲೆನಾಡು, ಕರಾವಳಿ, ಬಯಲು ಸೀಮೆಯ ಜಿಲ್ಲೆಗಳ ಜನಪ್ರತಿನಿಧಿಗಳ ವಿರೋಧದ ನಡುವೆಯೂ ಚಿತ್ರದುರ್ಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಗುಣನಿಯಂತ್ರಣ ಉಪ ವಿಭಾಗವನ್ನು ಕಲಬುರಗಿಗೆ ಸ್ಥಳಾಂತರಿಸಲು ಲೋಕೋಪಯೋಗಿ ಇಲಾಖೆ ಆದೇಶ ಹೊರಡಿಸಿದೆ.

ಸ್ಥಳಾಂತರ ಮಾಡದಂತೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಸೇರಿದಂತೆ ಹಲವು ಶಾಸಕರು ಪತ್ರ ಬರೆದು ಒತ್ತಡ ಹಾಕಿದ್ದರು.  

ರಾಷ್ಟ್ರೀಯ ಹೆದ್ದಾರಿ ವಲಯದಲ್ಲಿ 2023–24ನೇ ಸಾಲಿನಲ್ಲಿ ₹10,055 ಕೋಟಿ ಮೊತ್ತದ 29 ಹಾಗೂ ₹4,199 ಕೋಟಿ ಮೊತ್ತದ 19 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಬಹುತೇಕ ಕಾಮಗಾರಿಗಳು ಧಾರವಾಡ ಕಚೇರಿ ವ್ಯಾಪ್ತಿಯಲ್ಲಿವೆ. ಹಾಗಾಗಿ, ಹುಬ್ಬಳ್ಳಿ ಗುಣನಿಯಂತ್ರಣ ಉಪ ವಿಭಾಗದ ಮೇಲೆ ಒತ್ತಡ ಹೆಚ್ಚಾಗಿದ್ದು, ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಕಾಮಗಾರಿಗಳ ಮೇಲೆ ನಿಗಾವಹಿಸಲು ಸಾಧ್ಯವಾಗಿಲ್ಲ. ಇದರಿಂದ ಚಿತ್ರದುರ್ಗ ಉಪ ವಿಭಾಗವನ್ನು ಹುದ್ದೆಗಳ ಸಮೇತ ಸ್ಥಳಾಂತರ ಮಾಡುವುದರಿಂದ ಕಲ್ಯಾಣ ಕರ್ನಾಟಕ ಪ್ರದೇಶಗಳ ವ್ಯಾಪ್ತಿಯ ಜಿಲ್ಲೆಗಳಿಗೆ ಅನುಕೂಲವಾಗಲಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ. 

ಚಿತ್ರದುರ್ಗದಲ್ಲಿ ಕಚೇರಿ ಹೊಂದಿರುವ ರಾಷ್ಟ್ರೀಯ ಹೆದ್ದಾರಿ ಗುಣನಿಯಂತ್ರಣ ಉಪ ವಿಭಾಗ ವ್ಯಾಪ್ತಿಗೆ ಶಿವಮೊಗ್ಗ, ದಾವಣಗೆರೆ, ತುಮಕೂರು, ಬಳ್ಳಾರಿ, ವಿಜಯನಗರ, ರಾಯಚೂರು, ಹಾವೇರಿ, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳು ಒಳಪಡುತ್ತವೆ. ಈಗ ಈ ಎಲ್ಲ ಜಿಲ್ಲೆಗಳನ್ನು ಬೆಂಗಳೂರು ಕಚೇರಿಯ ವ್ಯಾಪ್ತಿಗೆ ಒಳಪಡಿಸಲಾಗಿದೆ.  

ಬೆಂಗಳೂರು, ಚಿತ್ರದುರ್ಗ ಹಾಗೂ ಹುಬ್ಬಳ್ಳಿಯಲ್ಲಿ ಗುಣನಿಯಂತ್ರಣ ಉಪ ವಿಭಾಗ ಕಚೇರಿಗಳು ಇದ್ದು, ಕಲಬುರಗಿಯಲ್ಲಿ ನಾಲ್ಕನೇ ಕಚೇರಿ ತೆರೆಯುವ ಕುರಿತು  ಕಳೆದ ವರ್ಷದ ಜೂನ್‌ನಲ್ಲೇ ನಡೆದಿದ್ದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಚರ್ಚಿಸಲಾಗಿತ್ತು. ಪ್ರಸ್ತಾವವನ್ನು ಸಲ್ಲಿಸುವಂತೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರೂ ಸೂಚಿಸಿದ್ದರು. ಈಗ ಹೊಸ ಕಚೇರಿ ತೆರೆಯುವ ಬದಲು ಚಿತ್ರದುರ್ಗ ಕಚೇರಿ ಸ್ಥಳಾಂತರಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT