ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಇಎ ನೇಮಕಾತಿ ಅಕ್ರಮ: ಪೊಲೀಸರ ದಾರಿ ತಪ್ಪಿಸಿದ ಪಾಟೀಲ!

ಮೊಬೈಲ್‌ ಟವರ್‌ ಲೊಕೇಷನ್‌ ತಂತ್ರಗಾರಿಕೆ ಮುಂದಿಟ್ಟು ಕಳ್ಳ–ಪೊಲೀಸ್ ಆಟವಾಡಿದ ಕಿಂಗ್‌ಪಿನ್
Published 8 ನವೆಂಬರ್ 2023, 23:30 IST
Last Updated 8 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಅಪಾರ್ಟ್‌ಮೆಂಟ್ ಒಂದರಲ್ಲಿ ಉಳಿದಕೊಂಡಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನೇಮಕಾತಿ ಅಕ್ರಮದ ಕಿಂಗ್‌ಪಿನ್ ರುದ್ರಗೌಡ ಡಿ.ಪಾಟೀಲ ಪೊಲೀಸರ ಗಮನ ಬೇರೆಡೆ ಸೆಳೆಯಲು ತಾನು ಬಳಸುತ್ತಿದ್ದ ಮೊಬೈಲ್‌ ಒಂದನ್ನು ಉತ್ತರ ಪ್ರದೇಶದತ್ತ ಕಳುಹಿಸಿದ್ದಾನೆ.

ಅಪಾರ್ಟ್‌ಮೆಂಟ್‌ನಿಂದ ಕೊದಲೆಳೆಯ ಅಂತರದಲ್ಲಿ ಪರಾರಿಯಾದ ಬಳಿಕ ರುದ್ರಗೌಡನ ತಂತ್ರಗಳು ಒಂದೊಂದಾಗಿ ಹೊರ ಬರುತ್ತಿವೆ. ಸಿನಿಮೀಯ ರೀತಿಯಲ್ಲಿ ತನ್ನ ಮೊಬೈಲ್ ಅನ್ನು ಉತ್ತರ ಪ್ರದೇಶದತ್ತ ಕಳುಹಿಸಿದ್ದಾನೆ. ಕಲಬುರಗಿಯಲ್ಲಿ ಇರುವುದಿಲ್ಲ ಎಂದು ಮನಗಂಡ ಪೊಲೀಸರು ಆತನ ಮೊಬೈಲ್‌ ಟವರ್‌ ಲೊಕೇಷನ್‌ ಜಾಡು ಹಿಡಿದು ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ಹುಡುಕಾಡಿದ್ದಾರೆ. ಹತ್ತಾರು ಮೂಲಗಳಿಂದ ರುದ್ರಗೌಡ ಇರುವಿಕೆಯ ಮಾಹಿತಿ ಬರುತ್ತಲೇ ಇದ್ದವು. ಆದರೆ, ಅವುಗಳತ್ತ ಹೆಚ್ಚಿನ ಲಕ್ಷ್ಯ ಕೊಡದೆ ಮೊಬೈಲ್‌ ಟವರ್‌ ಲೊಕೇಷನ್‌ ಬೆನ್ನು ಹತ್ತಿದ್ದರು ಎಂಬುದು ಮೂಲಗಳಿಂದ ತಿಳಿದುಬಂದಿದೆ.

ವಿಧಾನಸಭಾ ಚುನಾವಣೆಯಲ್ಲಿ ಅಫಜಲಪುರ ಕ್ಷೇತ್ರದಲ್ಲಿ ಉತ್ತರ ಪ್ರದೇಶ ಮೂಲದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದ. ಹೀಗಾಗಿ, ಯುಪಿ ಮುಖಂಡರ ಶ್ರೀರಕ್ಷೆಗಾಗಿ ಅಲ್ಲಿಗೆ ಮೊರೆ ಹೋಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದರು. ಜೇವರ್ಗಿ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ಇರುವ ಮಾಹಿತಿ ಬೆಳಿಗ್ಗೆಯೇ ಬಂದರೂ ಪೊಲೀಸರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಮಧ್ಯಾಹ್ನ ಕ್ರಾಸ್‌ ಚೆಕ್‌ ಮಾಡಲು ಹೋದಾಗ ಪೊಲೀಸರು ಬರುವ ಮಾಹಿತಿ ಅರಿತು ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಮೊಬೈಲ್‌ ಟವರ್‌ ಲೊಕೇಷನ್‌ ತಂತ್ರಗಾರಿಕೆ ಮುಂದಿಟ್ಟು ಕಳ್ಳ–ಪೊಲೀಸ್ ಆಟವಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಅಪಾರ್ಟ್‌ಮೆಂಟ್‌ ಕಾಂಪೌಂಡ್ ಜಿಗಿದ ಬಂದ ರುದ್ರಗೌಡನನ್ನು ಕಾರಿನಲ್ಲಿ ಕೂರಿಸಿಕೊಂಡು ಮಹಾರಾಷ್ಟ್ರದ ಸೋಲಾಪುರವರೆಗೆ ಬಿಟ್ಟ ಆತನ ಇಬ್ಬರು ಆಪ್ತರನ್ನು ಕಲಬುರಗಿಯ ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ. ರವಿ ಉಕ್ಕಲಿ ಮತ್ತು ಇನ್ನೊಬ್ಬನ ವಿಚಾರಣೆ ನಡೆಯುತ್ತಿದೆ. ಸೋಲಾಪುರದಿಂದ ರುದ್ರಗೌಡ ಒಬ್ಬನೇ ಬೇರೆ ಕಡೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಮಹಾರಾಷ್ಟ್ರದಲ್ಲಿ ಇರುವ ಮಾಹಿತಿ ಆಧರಿಸಿ ತೆರಳಿದ್ದ ಪೊಲೀಸರ ತಂಡ ಬರಿಗೈಯಲ್ಲೇ ವಾಪಸಾಗಿದೆ. ಮತ್ತೊಂದು ತಂಡ ಜಿಲ್ಲೆಯಾದ್ಯಂತ ಹುಡುಕಾಟ ನಡೆಸುತ್ತಿದೆ. ರುದ್ರಗೌಡನ ಸಹೋದರ ಮಹಾಂತೇಶ ಪಾಟೀಲನ ವಿಚಾರಣೆಯೂ ನಡೆಯುತ್ತಿದೆ.

ರುದ್ರಗೌಡನ ತಮ್ಮ ವಕೀಲರ ಮೂಲಕ ಹೈಕೋರ್ಟ್‌ನ ಕಲಬುರಗಿ ಪೀಠಕ್ಕೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದು, ಗುರುವಾರ ವಿಚಾರಣೆಗೆ ನಿಗದಿಯಾಗವ ಸಾಧ್ಯತೆ ಇದೆ. ಒಂದು ವೇಳೆ ನಿರೀಕ್ಷಣಾ ಜಾಮೀನು ಸಿಗದೆ ಇದ್ದರೆ ರುದ್ರಗೌಡ ನ್ಯಾಯಾಲಯದ ಮುಂದೆ ಹಾಜರಾಗಬಹುದು ಎಂದು ಹೇಳಲಾಗುತ್ತಿದೆ.

ಇಬ್ಬರ ಜಾಮೀನು ಅರ್ಜಿ ವಜಾ

ಅಶೋಕನಗರ ಠಾಣೆ ಪ್ರದೇಶದ ಖಾಸಗಿ ಕಾಲೇಜು ಕೇಂದ್ರದಲ್ಲಿ ಬ್ಲೂಟೂತ್ ಬಳಸಿದ್ದ ತ್ರಿಮೂರ್ತಿ ಹಾಗೂ ಆತನಿಗೆ ನೆರವಾಗಲು ಬಂದಿದ್ದ ಅಂಬರೀಶನ ಜಾಮೀನು ಅರ್ಜಿಯನ್ನು ಇಲ್ಲಿನ 5ನೇ ಜೆಎಂಎಫ್‌ಸಿ ನ್ಯಾಯಾಲಯ ವಜಾಗೊಳಿಸಿದೆ. ಈ ಇಬ್ಬರೂ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸ್ಮಿತಾ ಅವರು ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದ್ದಾರೆ. ಪೊಲೀಸರ ವಶದಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾರೆ.

ತನಿಖಾ ತಂಡ ರಚನೆ

ಕೆಇಎ ನೇಮಕಾತಿಯಲ್ಲಿ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದ ಬ್ಲೂಟೂತ್ ಅಕ್ರಮದ ಉಳಿದ ಆರೋಪಿಗಳ ಪತ್ತೆಗೆ ಡಿಸಿಪಿ ಕನಿಕಾ ಸಿಕ್ರಿವಾಲ್ ಉಸ್ತುವಾರಿಯಲ್ಲಿ ನಾಲ್ವರ ತನಿಖಾ ತಂಡ ರಚಿಸಲಾಗಿದೆ ಎಂದು ಕಮಿಷನರ್ ಚೇತನ್ ಆರ್. ತಿಳಿಸಿದ್ದಾರೆ. ಎಸಿಪಿಗಳಾದ ಭೂತೇಗೌಡ ವಿ.ಎಸ್‌. ಡಿ.ಜಿ. ರಾಜಣ್ಣ ಪಿಐಗಳಾದ ಅರುಣ ಕುಮಾರ ಮತ್ತು ಮಲ್ಲಿಕಾರ್ಜುನ ಇಕ್ಕಳಕಿ ತಂಡದಲ್ಲಿ ಇದ್ದಾರೆ.

ಕೆಲವೊಮ್ಮೆ ಮಾಹಿತಿ ಸಿಗಲ್ಲ ಮಾಹಿತಿ ಕೊಟ್ಟರೂ ಕಾರಣಾಂತರಗಳಿಂದ ಮಾಡಲಾಗಿರುವುದಿಲ್ಲ. ಕೆಲವೊಮ್ಮೆ ನಮ್ಮವರೇ ಶಾಮೀಲಾಗಿರುತ್ತಾರೆ. ನಮ್ಮವರು ಭಾಗಿಯಾಗಿದ್ದು ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
-ಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT